ಉತ್ತರ ಕನ್ನಡದಲ್ಲಿ ಬತ್ತಿದ ಜೀವಜಲ, 36 ಹಳ್ಳಿಗಳಿಗೆ ಟ್ಯಾಂಕರ್‌ ನೀರೇ ಗತಿ!

By Kannadaprabha News  |  First Published May 12, 2024, 7:41 PM IST

ಉತ್ತರ ಕನ್ನಡದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ಶೀಘ್ರದಲ್ಲಿ ಮಳೆಯಾಗದೇ ಇದ್ದರೆ ಮತ್ತಷ್ಟು ಕಡೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನೀರಿನ ತುಟಾಗ್ರತೆ ಉಂಟಾಗುವ ಸಾಧ್ಯತೆಯಿದೆ.


ವಸಂತಕುಮಾರ ಕತಗಾಲ

ಕಾರವಾರ (ಮೇ.12): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ಶೀಘ್ರದಲ್ಲಿ ಮಳೆಯಾಗದೇ ಇದ್ದರೆ ಮತ್ತಷ್ಟು ಕಡೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನೀರಿನ ತುಟಾಗ್ರತೆ ಉಂಟಾಗುವ ಸಾಧ್ಯತೆಯಿದೆ.

Tap to resize

Latest Videos

undefined

30 ಗ್ರಾಪಂಗಳ 36 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಜಿಲ್ಲಾಡಳಿತ, ಜಿಪಂನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 100ರಿಂದ 110 ಟ್ಯಾಂಕರ್‌ಗಳ ಮೂಲಕ ನೀರನ್ನು ಜನರಿಗೆ ನೀಡಲಾಗುತ್ತಿದೆ. ನೀರು ಇರುವ ಖಾಸಗಿ ಕೊಳವೆ ಬಾವಿ, ಬಾವಿಗಳನ್ನು ಗುರುತಿಸಿಕೊಂಡಿದ್ದು, ಅವುಗಳಿಂದ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗದಲ್ಲಿ ಮಳೆಯಾಗುತ್ತಿದ್ದು, ಉತ್ತರ ಕನ್ನಡದಲ್ಲಿ ಹಳ್ಳಕೊಳ್ಳಗಳಲ್ಲಿ ನೀರು ತುಂಬುವಷ್ಟು ಮಳೆ ಸುರಿದಿಲ್ಲ. ಹೀಗಾಗಿ ಕೊಳವೆ ಬಾವಿಗಳಲ್ಲಿ ಕೂಡಾ ನೀರು ಕಡಿಮೆಯಾಗಲು ಆರಂಭಿಸಿದೆ.

ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ಕಾಯಂ ನೀರಿನ ತೊಟ್ಟಿ!

ಹಳಿಯಾಳ, ಶಿರಸಿ ಭಾಗದಲ್ಲಿ ನೀರು ನೀಡುವಂತೆ ಆಗ್ರಹಿಸಿ ಜನರು ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಜಿಲ್ಲಾಡಳಿತ, ಜಿಪಂನಿಂದ ಹೊರತಾಗಿ ಖಾಸಗಿ ಸಂಘ- ಸಂಸ್ಥೆಗಳು, ಗಣ್ಯರು ನೀರು ಪೂರೈಕೆಗಾಗಿ ಕೈಜೋಡಿಸಿದ್ದು, ಶಿರಸಿಯಲ್ಲಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ನೇತೃತ್ವದಲ್ಲಿ ಹಾಗೂ ಹಿಂದೂ ಸೇವಾ ಸಮಿತಿಯಿಂದ ಅವಶ್ಯಕತೆ ಇದ್ದಲ್ಲಿ ನೀರನ್ನು ಟ್ಯಾಂಕರ್ ಮೂಲಕ ನೀಡಲು ಆರಂಭಿಸಲಾಗಿದೆ.

ಒಟ್ಟೂ 30 ಗ್ರಾಪಂನ 36 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಇದರಲ್ಲಿ ಹೊನ್ನಾವರ 1 ಗ್ರಾಪಂ ವ್ಯಾಪ್ತಿಯಲ್ಲಿ 1 ಹಳ್ಳಿಗೆ, ಕಾರವಾರದ 3 ಗ್ರಾಪಂ ವ್ಯಾಪ್ತಿಯಲ್ಲಿ 3 ಹಳ್ಳಿಗೆ, ಕುಮಟಾದ 7 ಗ್ರಾಪಂ ವ್ಯಾಪ್ತಿಯ 13 ಹಳ್ಳಿಗೆ, ಶಿರಸಿ 9 ಗ್ರಾಪಂವ್ಯಾಪ್ತಿಯ 13 ಹಳ್ಳಿಗೆ ಹಾಗೂ ಯಲ್ಲಾಪುರದ 1 ಗ್ರಾಪಂ ವ್ಯಾಪ್ತಿಯ 2 ಹಳ್ಳಿಗೆ ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದರೆ, ಹಳಿಯಾಳದ 15ಗ್ರಾಪಂನ 28 ಹಳ್ಳಿಗೆ, ಮುಂಡಗೋಡಿನ 9 ಗ್ರಾಪಂನ 17 ಹಳ್ಳಿಗೆ ಕೊಳವೆ ಬಾವಿ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಪ್ರಸಕ್ತ ವರ್ಷ ಬೇಸಿಗೆಯಲ್ಲಿ 198 ಗ್ರಾಪಂಗಳಲ್ಲಿ ನೀರಿನ ತುಟಾಗ್ರತೆ ಉಂಟಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದೃಷ್ಟವಶಾತ್ ಇದುವರೆಗೂ ಅಷ್ಟೊಂದು ಪ್ರಮಾಣದಲ್ಲಿ ನೀರಿನ ಕೊರತೆಯಾಗಿಲ್ಲ. ಶೀಘ್ರದಲ್ಲಿ ಮಳೆಯಾಗದೇ ಇದ್ದಲ್ಲಿ ನೀರಿನ ತುಟಾಗ್ರತೆ ಹೆಚ್ಚಾಗಲಿದೆ.

ರಾಜ್ಯಾದ್ಯಂತ ಮೇ 15ರವರೆಗೆ ಬಿರುಗಾಳಿ ಸಹಿತ ಭಾರೀ ಮಳೆ, ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಮೈಸುಡುವ ರಣಬಿಸಿಲು: ಕಾರವಾರದಲ್ಲಿ ಹಗಲಿನ ವೇಳೆ ತಾಪಮಾನ ಸರಾಸರಿ 35- 36 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಆದ್ರತೆ ಶೇ. 65ರಷ್ಟಿದ್ದು, ಹೀಗಾಗಿ 47- 48 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವಂತೆ ಭಾಸವಾಗುತ್ತಿದೆ. ಮಲೆನಾಡಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲೂ ಬಿಸಿಲ ಝಳ ಕಡಿಮೆ ಇಲ್ಲ. ಕರಾವಳಿ ತಾಲೂಕುಗಳಂತೆ ಮಲೆನಾಡಿನಲ್ಲೂ ರಣಬಿಸಿಲು ಮೈಸುಡುತ್ತಿದೆ.

ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ನೀರಿನ ತತ್ವಾರ ಹೆಚ್ಚಾಗುತ್ತಿದೆ. ನಮ್ಮ ಊರಿಗೆ ಖಾಸಗಿ ಬೋರ್‌ವೆಲ್‌ಗಳಿಂದ ಜಿಲ್ಲಾಡಳಿತ ನೀರು ಪೂರೈಕೆ ಮಾಡುತ್ತಿದ್ದರೂ ಕುಟುಂಬಕ್ಕೆ ಬೇಕಾದಷ್ಟು ಸಿಗುತ್ತಿಲ್ಲ. ನೀರಿಲ್ಲದೇ ಕಬ್ಬು ಬೆಳೆಗೂ ತೊಂದರೆ ಆಗುತ್ತಿದೆ. ಕಾಳಿ ನದಿಯಿಂದ ನೀರನ್ನು ತರುವ ಯೋಜನೆಯೊಂದು ಮಂಜೂರಾತಿಯಾಗಿದೆ. ಅದನ್ನು ಶೀಘ್ರವಾಗಿ ಅನಷ್ಠಾನ ಮಾಡಬೇಕು. ಬಾಂದಾರ, ಕೆರೆ ತುಂಬಿಸುವ ಯೋಜನೆಯಗಬೇಕು. ಪ್ರತಿವರ್ಷವೂ ನೀರಿನ ತುಟಾಗ್ರತೆ ಉಂಟಾಗುತ್ತಿದ್ದು, ಅಂತರ್ಜಲ ಹೆಚ್ಚುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮವನ್ನು ಸರ್ಕಾರ ಮಾಡಬೇಕು.

ಅಶೋಕ ಮೇಟಿ, ಹಳಿಯಾಳ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ

click me!