ಸರ್ಕಾರೇತರ ಪರಿಸರ ಸಂಘಟನೆಯಿಂದ ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ಕಾಯಂ ನೀರಿನ ತೊಟ್ಟಿ!
ಮಂಗಳೂರಿನ ಸರ್ಕಾರೇತರ ಪರಿಸರ ಸಂಘಟನೆಯಾದ ಎನ್‌ಇಸಿಎಫ್ ಅರಣ್ಯ ಇಲಾಖೆ ಸಹಕಾರದಲ್ಲಿ ಕಾಡಿನಲ್ಲೇ ಪ್ರಾಣಿಗಳ ನೀರಿನ ದಾಹ ಇಂಗಿಸಲು ನೀರಿನ ತೊಟ್ಟಿ ನಿರ್ಮಿಸುತ್ತಿದೆ.
ಆತ್ಮಭೂಷಣ್
ಮಂಗಳೂರು (ಮೇ.12): ಕಾಡಿನ ಇಳಿಜಾರು ಪ್ರದೇಶದಲ್ಲಿ ಅಡ್ಡಗಾಲುವೆ ಮಾಡಿದರೂ ಬೇಸಗೆಯಲ್ಲಿ ಅದು ನೀರಿಲ್ಲದೆ ಬತ್ತಿ ಹೋಗಿರುತ್ತದೆ. ಇಂತಹ ಸಂದರ್ಭದಗಲ್ಲಿ ಕುಡಿಯುವ ನೀರು ಹುಡುಕಿಕೊಂಡು ವನ್ಯಜೀವಿಗಳು ಕಾಡಿನಿಂದ ನಾಡಿಗೆ ದಾಳಿ ಇಡುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಮಂಗಳೂರಿನ ಸರ್ಕಾರೇತರ ಪರಿಸರ ಸಂಘಟನೆಯಾದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್) ಅರಣ್ಯ ಇಲಾಖೆ ಸಹಕಾರದಲ್ಲಿ ಕಾಡಿನಲ್ಲೇ ಪ್ರಾಣಿಗಳ ನೀರಿನ ದಾಹ ಇಂಗಿಸಲು ನೀರಿನ ತೊಟ್ಟಿ ನಿರ್ಮಿಸುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಕೇವಲ ಒಂದೆರಡು ಕಡೆ ಕಾಡಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿತ್ತು. ಆದರೆ ಅಲ್ಲಿ ನೀರಿನ ಕೊರತೆ ಬಾಧಿಸಿತ್ತು. ಕಾಡಿನಲ್ಲಿ ಒಮ್ಮೆ ನೀರಿನ ತೊಟ್ಟಿ ನಿರ್ಮಿಸಿದರೆ ಬೇಸಗೆ ಪೂರ್ತಿ ವನ್ಯಜೀವಿಗಳಿಗೆ ಕುಡಿಯಲು ಯಥೇಚ್ಛ ನೀರು ಸಂಗ್ರಹ ಇರಬೇಕು. ಇಲ್ಲದಿದ್ದರೆ ಮತ್ತೆ ವನ್ಯಜೀವಿಗಳು ನಾಡಿನತ್ತ ಮುಖ ಮಾಡುತ್ತವೆ. ಹೀಗಾಗಿ ಎನ್‌ಇಸಿಎಫ್ ಸಂಘಟನೆ ಕಾಯಂ ನೀರು ಪೂರೈಕೆಯೊಂದಿಗೆ ನೀರಿನ ತೊಟ್ಟಿ ನಿರ್ಮಿಸುತ್ತಿದೆ.
ರಾಜ್ಯಾದ್ಯಂತ ಮೇ 15ರವರೆಗೆ ಬಿರುಗಾಳಿ ಸಹಿತ ಭಾರೀ ಮಳೆ, ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಕಾಯಂ ನೀರಿನ ತೊಟ್ಟಿ ಹೇಗೆ?: ಕಾಡಿನಲ್ಲಿ ನೀರಾಶ್ರಯದ ಸಾಧ್ಯತೆ ಇರುವ ಕಡೆಗಳಲ್ಲಿ ಸಿಮೆಂಟ್‌ನಿಂದ ನೀರಿನ ತೊಟ್ಟಿ ನಿರ್ಮಿಸಿ ಅದರಲ್ಲಿ ಬೇಸಗೆ ಪೂರ್ತಿ ನೀರು ಸಂಗ್ರಹ ಇರುವಂತೆ ನೋಡಿಕೊಳ್ಳುತ್ತಿದೆ. ಇದಕ್ಕಾಗಿ 5 ಅಡಿ ಉದ್ದದ ಸಿಮೆಂಟ್ ರಿಂಗ್ ರಚಿಸಿ ಅದನ್ನು ನೆಲಮಟ್ಟದಿಂದ ಒಂದು ಅಡಿ ಆಳದಲ್ಲಿ ನಿರ್ಮಿಸುವುದು. ಅಲ್ಲಿಗೆ ಪೈಪ್‌ಲೈನ್ ಸಂಪರ್ಕ ನೀಡಿ ನೀರು ಪೂರೈಸುತ್ತಿದೆ. ಇದರಿಂದ ತೊಟ್ಟಿಯಲ್ಲಿ ದಿನದ 24 ಗಂಟೆಯೂ ನೀರು ಸಂಗ್ರಹಗೊಂಡು ವನ್ಯಜೀವಿಗಳ ದಾಹ ತಣಿಸಲು ನೆರವಾಗುತ್ತದೆ.
ಅಲ್ಲದೆ ತೊಟ್ಟಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಆಹಾರಕ್ಕಾಗಿ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದು. ಇದು ಕಾಡುಪ್ರಾಣಿಗಳು ಬೇಸಗೆಯಲ್ಲಿ ನೀರು ಹಾಗೂ ಆಹಾರಕ್ಕಾಗಿ ನಾಡಿಗೆ ದಾಳಿ ಮಾಡುವುದನ್ನು ತಪ್ಪಿಸುತ್ತದೆ ಎನ್ನುವುದು ಎನ್‌ಇಸಿಎಫ್ ಸಂಘಟನೆ ಸದಸ್ಯರ ಅಭಿಪ್ರಾಯ.
ಕೊಡಗಿನಲ್ಲಿ ಮಳೆ ಇಲ್ಲದಿದ್ದರೂ ಇಡೀ ಊರಿಗೆ ಸಿಡಿಲು ಬಡಿದ ಅನುಭವ, ಭಾರೀ ಶಬ್ಧದೊಂದಿಗೆ ಭೂಮಿ ಛಿದ್ರ!
ಎಲ್ಲೆಲ್ಲಿ ನೀರಿನ ತೊಟ್ಟಿ ರಚನೆ?: ಎನ್‌ಇಸಿಎಫ್ ಸಂಘಟನೆ ಅರಣ್ಯ ಇಲಾಖೆ ಸಹಕಾರದಲ್ಲಿ ದ.ಕ.ಜಿಲ್ಲೆಯ ಮೂಡುಬಿದಿರೆ ಅರಣ್ಯದಲ್ಲಿ ನೀರಿನ ತೊಟ್ಟಿ ನಿರ್ಮಿಸಿದೆ. ಇದು ಪ್ರಾಕೃತಿಕವಾಗಿ ಕಲ್ಲಿನಿಂದ ಮಾಡಿದ ನೀರಿನ ತೊಟ್ಟಿ. ಇಲ್ಲಿ ವರ್ಷಪೂರ್ತಿ ಸುರಂಗ ನೀರು ಹರಿಯುತ್ತಿರುತ್ತದೆ.
ಸಿದ್ಧಾಪುರದದಲ್ಲಿ ಪ್ರಾಕೃತಿಕವಾಗಿ ಅರಣ್ಯ ಇಲಾಖೆಯೇ ನೀರಿನ ತೊಟ್ಟಿ ನಿರ್ಮಿಸಿದೆ. ಇದನ್ನು ಹೊರತುಪಡಿಸಿ ಉಡುಪಿಯ ಅಂಪಾರು ಬಡಬಾಳು, ಬೈಂದೂರಿನ ತೊಂಡ್ಲೆ, ಸಾಮಿನ ಕೊಡ್ಲು ಸೇರಿದಂತೆ ವಿವಿಧ ಕಡೆಗಳಲ್ಲಿ ವನ್ಯಜೀವಿಗಳು ಸಂಚರಿಸುವ ದಾರಿಯಲ್ಲಿ ಎನ್‌ಇಸಿಎಫ್ ನೀರಿನ ತೊಟ್ಟಿ ರಚಿಸಿದೆ. ಇಲ್ಲಿಗೆ ಹುಲಿ, ಜಿಂಕೆ, ಕರಡಿ ಮುಂತಾದ ವನ್ಯಜೀವಿಗಳು ದಾಹ ತಣಿಸಲು ನೀರಿನ ತೊಟ್ಟಿ ಆಶ್ರಯಿಸುತ್ತಿವೆ. ಈಗ ಶಿರೂರು, ನಾಗೂರು, ಕಲ್ಮಕ್ಕಿ ಕಾಡಿನಲ್ಲೂ ಇದೇ ಮಾದರಿಯಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಮುಂದಾಗಿದೆ.
ಕೆರೆಗಳ ಹೂಳೆತ್ತಿದ ಅರಣ್ಯ ಇಲಾಖೆ: ಅರಣ್ಯ ಇಲಾಖೆ ಕೂಡ ದ.ಕ. ವಿಭಾಗಕ್ಕೆ ಸೇರಿದ ಅರಣ್ಯಗಳಲ್ಲಿ ಇರುವ ಕೆರೆಗಳ ಹೂಳೆತ್ತುವ ಮೂಲಕ ವನ್ಯಜೀವಿಗಳಿಗೆ ಬೇಸಗೆಯಲ್ಲಿ ನೀರಿನ ಸೆಲೆ ಒದಗಿಸಿದೆ.
ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಪಂಜ, ಸುಬ್ರಹ್ಮಣ್ಯ, ಕಡಬ ಅರಣ್ಯ ಪ್ರದೇಶಗಳ ಸುಮಾರು 32 ಕಡೆಗಳಲ್ಲಿ ಈಗಾಗಲೇ ಕೆರೆಯ ಹೂಳೆತ್ತಿದ್ದು, ಮೇ ತಿಂಗಳ ಆರಂಭದಲ್ಲೂ ನೀರಿನ ಕೊರತೆ ಕಂಡುಬಂದಿಲ್ಲ. ಕಳೆದ ವರ್ಷ ಬೇಸಗೆಯಲ್ಲಿ ನೀರಾಶ್ರಯ ಇದ್ದ ಕೆರೆಗಳ ಹೂಳೆತ್ತಲಾಗಿದೆ. ಅಲ್ಲಿ ಈ ಬಾರಿ ನೀರಿನ ಕೊರತೆ ಉಂಟಾಗಿಲ್ಲ. ಇವು ಕಾಡುಪ್ರಾಣಿಗಳಿಗೆ ದಾಹ ಇಂಗಿಸಲು ನೆರವಾಗುತ್ತಿವೆ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್.
ಕಾಡಿನಲ್ಲಿ ಒಂದೊಂದು ನೀರಿನ ತೊಟ್ಟಿ ನಿರ್ಮಿಸಲು ತಲಾ 25 ಸಾವಿರ ರು. ವರೆಗೆ ವೆಚ್ಚ ತಗಲುತ್ತಿದ್ದು, ಎನ್ಇಸಿಎಫ್ ಸಂಘಟನೆಯೇ ಇದನ್ನು ಭರಿಸುತ್ತದೆ. ಕಾಡಂಚಿನಲ್ಲಿರುವ ನಾಗರಿಕರು ನೀರು ಪೂರೈಕೆಯ ವ್ಯವಸ್ಥೆ ಮಾಡಿಕೊಟ್ಟರೆ, ಎನ್‌ಇಸಿಎಫ್ ಸಂಘಟನೆಯೇ ಉಚಿತವಾಗಿ ಸಿಮೆಂಟ್ ತೊಟ್ಟಿ ರಚಿಸಿ ಕಾಡು ಪ್ರಾಣಿಗಳ ಬಾಯಾರಿಕೆ ತಣಿಸಲು ನೆರವಾಗುತ್ತದೆ.
-ಶಶಿಧರ ಶೆಟ್ಟಿ, ಸಂಚಾಲಕ ಎನ್‌ಇಸಿಎಫ್, ಮಂಗಳೂರು