Latest Videos

ಕಲುಷಿತ ನೀರು ಸೇವನೆ ಪ್ರಕರಣ, ಕವಾಡಿಗರಹಟ್ಟಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾ.ಪಾಟೀಲ್ ಕೆಂಡಾಮಂಡಲ

By Suvarna NewsFirst Published Aug 11, 2023, 3:30 PM IST
Highlights

ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿರುವ ಚಿತ್ರದುರ್ಗದ ಇತಿಹಾಸವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಇಲ್ಲಿನ ಸ್ವಚ್ಚತೆ ವ್ಯವಸ್ಥೆ ಇದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್  ಚಿತ್ರದುರ್ಗ ಜಿಲ್ಲಾಡಳಿತದ ಬಗ್ಗೆ ಕಿಡಿಕಾರಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.11): ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿರುವ ಚಿತ್ರದುರ್ಗದ ಇತಿಹಾಸವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಇಲ್ಲಿನ ಸ್ವಚ್ಚತೆ ವ್ಯವಸ್ಥೆ ಇದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಇಲ್ಲಿನ ನಗರಸಭೆ ಹಾಗೂ ಜಿಲ್ಲಾಡಳಿತದ ಬಗ್ಗೆ ಕಿಡಿಕಾರಿದ್ದಾರೆ. ಅಲ್ಲದೆ ನಗರ ಸ್ವಚ್ಚತೆಗೆ 10 ಅಂಕಗಳಲ್ಲಿ ಕೇವಲ 2 ಅಂಕಗಳನ್ನು ಮಾತ್ರ ನೀಡದ್ದಾರೆ. ಇಂದು ಬೆಳಗ್ಗೆ ನಗರದ ವಿವಿಧ ಬೀದಿಗಳಿಗೆ ದಿಡೀರ್ ಭೇಟಿ ನೀಡಿದ ಅವರು ಇಲ್ಲಿನ ಸ್ವಚ್ಚತೆ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ದೇಶದಲ್ಲೇ ಚಿತ್ರದುರ್ಗ ಐತಿಹಾಸಿಕ ಕೋಟೆನಾಡು ಎಂದು ಪ್ರಸಿದ್ದಿಯನ್ನು ಪಡೆದಿದ್ದು, ಇಲ್ಲಿನ ಇತಿಹಾಸ ಜಗತ್ತಿನೆಲ್ಲೆಡೆ ಪಸರಿಸಿದೆ. ಆದರೆ ಇಲ್ಲಿನ ಸ್ವಚ್ವತೆ ಮಾತ್ರ ತುಂಬ ಅವ್ಯವಸ್ಥೆಯಿಂದ ಕೂಡಿದೆ. ಇದಕ್ಕೆ ಇಲ್ಲಿನ ನಗರಸಭೆಯೇ ಮೂಲ ಕಾರಣ ಎಂದರು. 

ಜನರಲ್ಲಿ ಪರಿಸರ ಕಾಪಾಡುವ ಕುರಿತು ಜಾಗೃತಿ ಮೂಡಿಸದೆ ಇರುವುದು. ಎಲ್ಲೆಂದರಲ್ಲಿ ಕಸ ಎಸೆಯಲು ಕಾರಣವಾಗಿದೆ. ಇದರಿಂದ ಸಾಕಷ್ಟು ರೋಗಗಳು ಉತ್ಪತ್ತಿ ಆಗುತ್ತವೆ. ಆದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಗರದ ಸ್ವಚ್ವತೆ ಕಾಪಾಡದಿರುವ ವಾರ್ಡ್ ಉಸ್ತವಾರಿ ಆಧಿಕಾರಿ, ನಗರಸಭೆ ಪೌರಾಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಮೇಲೆ ದೂರು ದಾಖಲಿಸಲಾಗುವುದು ಎಂದು ಹೇಳಿದರು. ನಗರದ ಮೆದೇಹಳ್ಳಿ ರಸ್ತೆಯ ಖಾಲಿ‌ ನಿವೇಶನದಲ್ಲಿ ಹಸಿ ಹಾಗೂ ಒಣ ಕಸದ ರಾಶಿ ಕೊಳೆತು ನಾರುತ್ತಿರುವುದನ್ನು ಗಮನಿಸಿ ಕಸ ವಿಲೇವಾರಿ ಮಾಡದಿರುವ ಬಗ್ಗೆ ಆ ಭಾಗದ ನಗರಸಭೆ ಪರಿಸರ ಅಧಿಕಾರಿ ಭಾರತಿ ಅವರನ್ನು ವಿಚಾರಿಸಿದರು.

ಕಲುಷಿತ ನೀರು ಪೂರೈಕೆಯಿಂದ 6 ಜನರ ಬಲಿ ಪಡೆದ ಕವಾಡಿಗರಹಟ್ಟಿ: ಈಗಿನ ಸ್ಥಿತಿ ನೋಡಿ..

ಕಳೆದ 15 ದಿನದ ಹಿಂದೆ ಕಸ ವಿಲೇವಾರಿ ಮಾಡಿಸಲಾಗಿತ್ತು ಆದರೆ ಇಂದು ‌ಮತ್ತೆ ಇಲ್ಲಿ ಕಸ ಹಾಕಲಾಗಿದೆ ಎಂಬ ಭಾರತಿ ಅವರ ಉತ್ತರಕ್ಕೆ ಕೆಂಡಮಂಡಲರಾದ ಬಿ.ಎಸ್. ಪಾಟೀಲ್, ನಿಮಗೆ ಸರ್ಕಾರ ಸಂಬಳ ಕೊಡುವುದು ಪ್ರತಿನಿತ್ಯ ಕಸ ವಿಲೇವಾರಿ ಮಾಡಿ, ನಗರ ಸ್ವಚ್ಚತೆ ಕಾಪಾಡಬೇಕು ಎಂದು ಆದರೆ ನೀವು ಇಲ್ಲಿ ಮಾಡುತ್ತಿರುವುದು ಏನು ? ಕಸ ಈ ರೀತಿ ಕೊಳೆತು ನಾರುತ್ತಿದ್ದರೆ, ಕ್ರಿಮಿ, ಕೀಟಗಳು ಹೆಚ್ಚಾಗಿ ಜನರಿಗೆ ರೋಗಗಳು ಹರಡುವುದಿಲ್ಲವೇ ? ಎಂದು ಪ್ರಶ್ನಿಸಿ ತೀವ್ರ ತರಾಟೆ ತೆಗೆದುಕೊಂಡರು. ಸ್ಥಳದಲ್ಲೇ ಹಾಜರಿದ್ದ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಅವರಿಗೆ ಈ ಬಗ್ಗೆ ತರಾಟೆ ತೆಗೆದುಕೊಂಡರು. ಕೊಳೆತ ಕಸದಿಂದ ಸಾಕಷ್ಟು ರೋಗಗಳು ಅರಡುತ್ತವೆ. ಇದು ತಿಳಿದಿದ್ದರು ಏಕೆ ಕಸ ವಿಲೇವಾರಿ ಮಾಡಿಸಿಲ್ಲ. ಕೆಲಸ ಮಾಡಲು ನಿಮಗೆ ಆಗದಿದ್ದರೆ ಇಲ್ಲಿ ಇರಬಾರದು ಹೊರಟು ಬಿಡಬೇಕು ಎಂದು ಹರಿಹಾಯ್ದರು.

ನಂತರ ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಂಡ ಕವಾಡಿಗರಹಟ್ಟಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಶೌಚಾಲಯಗಳನ್ನು ನಿರ್ಮಿಸಿ ಕೊಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

Chitradurga: ಕವಾಡಿಗರಹಟ್ಟಿಗೆ ಸಚಿವ ರಹೀಂ ಖಾನ್ ಭೇಟಿ: ಅಧಿಕಾರಿಗಳೊಂದಿಗೆ ಸಭೆ!

ಕಾಲರಾಗೆ ತುತ್ತಾದ ಮಂಜುಳ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮನೆಯ ಸ್ಥತಿ, ಅನೈರ್ಮಲ್ಯದ ವಾತಾವರಣ ಕಂಡು ಶೌಚಾಲಯದ ಬಗ್ಗೆ ಪ್ರಶ್ನಿಸಿದರು. ಬಯಲು ಬಹಿರ್ದೆಸೆಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದರು. ಸ್ಥಳದಲ್ಲೇ ಇದ್ದ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಅವರಿಗೆ ಈ ಬಗ್ಗೆ ತರಾಟೆ ತೆಗೆದುಕೊಂಡರು. ಜಿಲ್ಲಾ ಆಸ್ಪತ್ರೆ ಹಾಗೂ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಕುಡಿದು ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದರು.

click me!