ಹೊಸಪೇಟೆ: ಹಾಸ್ಟೆಲ್‌ನಲ್ಲಿ ಚಿಕನ್‌ ಊಟ ಸೇವಿಸಿ 34 ವಿದ್ಯಾರ್ಥಿನಿಯರು ಅಸ್ವಸ್ಥ!

By Kannadaprabha NewsFirst Published Aug 11, 2023, 8:37 AM IST
Highlights

ಹೊಸಪೇಟೆ ನಗರದ ಮೆಟ್ರಿಕ್‌ ನಂತರದ ಬಾಲಕಿಯರ ಎಸ್ಟಿಹಾಸ್ಟೆಲ್‌ನ 29 ವಿದ್ಯಾರ್ಥಿನಿಯರು ಚಿಕನ್‌ ಊಟ ತಿಂದು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಸಚಿವ ಜಮೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯನಗರ (ಆ.11):  ಹೊಸಪೇಟೆ ನಗರದ ಮೆಟ್ರಿಕ್‌ ನಂತರದ ಬಾಲಕಿಯರ ಎಸ್ಟಿ ಹಾಸ್ಟೆಲ್‌ನ 29 ವಿದ್ಯಾರ್ಥಿನಿಯರು ಚಿಕನ್‌ ಊಟ ತಿಂದು ಅಸ್ವಸ್ಥರಾಗಿದ್ದು, ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಿಸಲಾಗಿದೆ. ಇನ್ನೂ ಐವರು ವಿದ್ಯಾರ್ಥಿನಿಯರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಗರದ ಜಂಬುನಾಥ ರಸ್ತೆಯಲ್ಲಿರುವ ಪರಿಶಿಷ್ಟಪಂಗಡ ಇಲಾಖೆಗೆ ಸೇರಿರುವ ಬೀರಲಿಂಗೇಶ್ವರ ಮೆಟ್ರಿಕ್‌ ನಂತರದ ಬಾಲಕಿಯರ ವಸತಿನಿಲಯದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ.

ಚಿಕನ್‌ ಊಟ ಸೇವನೆ: ಹಾಸ್ಟೆಲ್‌ನಲ್ಲಿ ತಯಾರು ಮಾಡಿದ ಕೋಳಿ ಸಾರಿನ ಊಟವನ್ನು ಬುಧವಾರ ರಾತ್ರಿ ವಿದ್ಯಾರ್ಥಿನಿಯರು ಸೇವನೆ ಮಾಡಿ ಮಲಗಿಕೊಂಡಿದ್ದಾರೆ. 148 ವಿದ್ಯಾರ್ಥಿನಿಯರ ಪೈಕಿ 17 ವಿದ್ಯಾರ್ಥಿನಿಯರು ಸಸ್ಯಾಹಾರ ಸೇವನೆ ಮಾಡಿದ್ದಾರೆ. ತಡರಾತ್ರಿ ಏಕಾಏಕಿ ಆರು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಇನ್ನೂ ಕೆಲ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಒಟ್ಟು 29 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದು, ಐವರು ವಿದ್ಯಾರ್ಥಿನಿಯರು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆ.14ರೊಳಗೆ ಕರ್ನಾಟಕದಲ್ಲಿ 1300 ಅನಧಿಕೃತ ಶಾಲೆ ಬಂದ್‌

ವೈದ್ಯರ ಚಿಕಿತ್ಸೆ ಬಳಿಕ ಇದೀಗ ವಿದ್ಯಾರ್ಥಿನಿಯರಲ್ಲಿ ಚೇತರಿಕೆ ಕಂಡಿದೆ. ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಪ್ರಾಧಿಕಾರ ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಮಕ್ಕಳು ಸೇವಿಸಿದ ಆಹಾರ ಮತ್ತು ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ವರದಿ ಆಧರಿಸಿ ಈ ಘಟನೆಗೆ ಕಾರಣರಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪರಿಶಿಷ್ಟಕಲ್ಯಾಣಾಧಿಕಾರಿ ಶಾಷು ಮೋದಿನ್‌ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌, ವಿಷಯ ತಿಳಿಯುತ್ತಲೇ ಆಸ್ಪತ್ರೆಗೆ ದೌಡಾಯಿಸಿ ಬಂದು ಮಕ್ಕಳ ಆರೋಗ್ಯ ವಿಚಾರಿಸಿದರು. ಘಟನೆಗೆ ನಿಖರ ಕಾರಣದ ಮಾಹಿತಿಯನ್ನು ಕಲೆಹಾಕಿ ನೀಡುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರಿಗೆ ಸೂಚಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ದಿವಾಕರ್‌, ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ, ತೀವ್ರ ನಿಗಾ ವಹಿಸುವಂತೆ ವೈದ್ಯರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಸದಾಶಿವ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಮತ್ತಿತರರಿದ್ದರು.

3ನೇ ಮಗು ಮಾಹಿತಿ ಮುಚ್ಚಿಟ್ಟ ಸರ್ಕಾರಿ ಶಾಲೆ ಶಿಕ್ಷಕ ಕೆಲಸದಿಂದ ಅಮಾನತು!

ಹೊಸಪೇಟೆಯ ಎಸ್ಟಿಹಾಸ್ಟೆಲ್‌ನ 29 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಬರಿಗೊಂಡ ಐವರು ವಿದ್ಯಾರ್ಥಿನಿಯರಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ನೀರು, ಚಿಕನ್‌ ಊಟ ಟೆಸ್ಟ್‌ಗೆ ಕಳುಹಿಸಲಾಗಿದೆ. ರಕ್ತದ ಮಾದರಿ ಕೂಡ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

ಎಂ.ಎಸ್‌. ದಿವಾಕರ್‌ ಜಿಲ್ಲಾಧಿಕಾರಿ, ವಿಜಯನಗರ

34 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಈ ಪೈಕಿ 29 ವಿದ್ಯಾರ್ಥಿನಿಯರು ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಐವರು ವಿದ್ಯಾರ್ಥಿನಿಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಮೇಲೆ ತೀವ್ರ ನಿಗಾ ಇಡಲಾಗಿದೆ.

ಡಾ. ಸಲೀಂ, ಜಿಲ್ಲಾ ಆರೋಗ್ಯಾಧಿಕಾರಿ, ವಿಜಯನಗರ

click me!