ಬೆಳಗಾವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಲೋಕಾ ಸಮರ

By Kannadaprabha NewsFirst Published Sep 16, 2022, 9:11 AM IST
Highlights

ಕರ್ನಾಟಕ ಲೋಕಾಯುಕ್ತರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು, ಅ.30ಕ್ಕೂ ಮುನ್ನ ವರದಿ ನೀಡಲು ಸೂಚನೆ

ಬೆಳಗಾವಿ(ಸೆ.16):  ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಮತ್ತು ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯಾಹತ ಕಲ್ಲು ಗಣಿಕಾರಿಕೆಗಳು ನಿಯಮ ಮತ್ತು ಮಾರ್ಗಸೂಚಿ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿದ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಜಿಲ್ಲಾಡಳತಕ್ಕೆ ನಿರ್ದೇಶನ ನೀಡಿದ್ದಾರೆ.

ಲೋಕಾಯುಕ್ತ ನ್ಯಾ.ಬಿ.ಎಸ್‌. ಪಾಟೀಲ್‌ ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಬೆಳಗಾವಿ ಲೋಕಾಯುಕ್ತ ಅಧೀಕ್ಷಕರಿಗೆ ವರ್ಗಾವಣೆ ಮಾಡಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಪ್ರಕರಣದಲ್ಲಿ ಜಿಲ್ಲಾಧಿಕಾರಿ ಪೊಲೀಸ್‌ ಅಧೀಕ್ಷಕರು, ಬೆಳಗಾವಿ, ಗಣಿ ಮತ್ತು ಭೂವಿಜ್ಞಾನ ಉಪನಿರ್ದೇಶಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಮತ್ತು ಬೈಲಹೊಂಗಲ ತಹಸೀಲ್ದಾರ್‌ ಅವರು ಜನರ, ಮನೆ, ಅಣೆಕಟ್ಟು, ರಸ್ತೆ ಮತ್ತು ಕೃಷಿ ಬೆಳೆಗಳಿಗೆ ಉಂಟಾದ ಹಾನಿಗಳನ್ನು ಪರಿಶೀಲಿಸಲು ಮತ್ತು ಈ ಕಲ್ಲು ಕ್ರಷರ್‌ಗಳ ಪರಿಸರ ಮತ್ತು ಅದರ ವರದಿಯನ್ನು ಅ. 20 ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಬೆಳಗಾವಿ: ಕಲ್ಲು ಗಣಿಗಾರಿಕೆ, ಅಪಾಯದಲ್ಲಿ ಡ್ಯಾಮ್‌..!

ಕಲ್ಲು ಕ್ರಷರಗಳು ಮಾಡಿದ ಉಲ್ಲಂಘನೆಗಳ ಬಗ್ಗೆ ಗಂಭೀರತೆಯನ್ನು ಕಂಡು, ಕರ್ನಾಟಕದ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರು, ತಮ್ಮ ಆದೇಶದಲ್ಲಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ಷರತ್ತುಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ವರದಿಯಿಂದ ಕಂಡುಬರುತ್ತದೆ. 2011ರ ಕರ್ನಾಟಕ ಕಲ್ಲು ಕ್ರಷರ ಕಾಯ್ದೆಯ ಸೆಕ್ಷನ್‌ 6 ರ ಉಪವಿಭಾಗ 6 ರಿಂದ 9 ರವರೆಗೆ ಮಾಲಿನ್ಯ ನಿಯಂತ್ರಣ ಕ್ರಮಗಳು, ನಿಬಂಧನೆಗಳು, ಪರಿಸರ ಸಂರಕ್ಷಣಾ ಕಾಯ್ದೆ ಮತ್ತು ನಿಯಮಗಳನ್ನು ಪಾಲಿಸದೇ ಉಲ್ಲಂಘಿಸಲಾಗಿದೆ. ಜಿಲ್ಲಾಧಿಕಾರಿಗಳು ಪ್ರತಿ ಕಲ್ಲು ಕ್ರಷರನ್ನು ವರ್ಷಕ್ಕೊಮ್ಮೆಯಾದರೂ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿದ್ದರೆ ಕಲ್ಲು ಕ್ರಷರಗಳಿಂದ ಮನೆಗಳಿಗೆ, ಕೃಷಿ ಬೆಳೆಗಳಿಗೆ ಹಾನಿ, ಜನರ ಆರೋಗ್ಯಕ್ಕೆ ಹಾನಿ ಮತ್ತು ಹತ್ತಿರದ ಅಣೆಕಟ್ಟಿಗೆ ಅಪಾಯವನ್ನು ತಡೆಯಬಹುದು. ಮರಿಕಟ್ಟಿಮತ್ತು ಗಣಿಕೊಪ್ಪ ಗ್ರಾಮಗಳಲ್ಲಿರುವ ಕಲ್ಲು ಕ್ರಷರಗಳ ಸಮರ್ಪಕ ಪರಿಶೀಲನೆ ಕೊರತೆ ಇದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಎಲ್ಲ ಕಲ್ಲು ಕ್ರಷರ್‌ಗಳಿಗೆ ನೋಟಿಸ್‌ ನೀಡಿದ್ದು ಬಿಟ್ಟರೆ ಕ್ರಿಮಿನಲ್‌ ಮೊಕದ್ದಮೆಗೆ ಕ್ರಮಕೈಗೊಂಡಿಲ್ಲ. ಆರೋಗ್ಯದ ಅಪಾಯದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ನಿರ್ಧರಿಸಲು ಈ ಕಾಯ್ದೆಯು ಅವಕಾಶ ನೀಡುತ್ತದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪತ್ರಿಕೆಯಲ್ಲಿ ಬಂದಿರುವ ವಿಚಾರಗಳನ್ನು ಪರಿಶೀಲಿಸಿ ಅದಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್‌ ಪಾಟೀಲ ಆದೇಶದಲ್ಲಿ ಡಿಸಿ, ಎಸ್ಪಿ, ಪರಿಸರ ಅಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ. ಅ. 20 ಅಥವಾ ಅದಕ್ಕೂ ಮೊದಲು ವರದಿಯನ್ನು ಸಲ್ಲಿಸಿ. ಈ ಘಟನೆಗಳಿಗೆ ಯಾವ ಅಧಿಕಾರಿಗಳು ಹೊಣೆಗಾರರು ಮತ್ತು ಅವರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿಸಲು ಸೂಚಿಸಿದ್ದಾರೆ. ಈ ನಡುವೆ ಈ ಎರಡು ಗ್ರಾಮಗಳಿಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಲೋಕಾಯುಕ್ತ ಅಧೀಕ್ಷಕಿ ಯಶೋಧಾ ವಂಟಗೂಡಿ ಅವರಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ಗಮನ ಸೆಳೆದಿತ್ತು:

ಜು.25ರಂದು ಗಣಿಗಾರಿಕೆಗೆ ನಲಗುತ್ತಿವೆ ಗ್ರಾಮಗಳು, ಜು.26ರಂದು ಗಣಿಗಾರಿಕೆಯಿಂದ ಕಿತ್ತು ಹೋದ ರಸ್ತೆಗಳು, ಜು.27ರಂದು ಗಣಿಗಾರಿಕೆ ಸ್ಫೋಟದಿಂದ 5 ಕಮೀ ದೂರ ಕಂಪನ!, ಜು.28ರಂದು ಗಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ!, ಜು.29ರಂದು ಅಪಾಯದಲ್ಲಿ ಡ್ಯಾಮ್‌ ಹೀಗೆ ಸತತ ಐದು ವರದಿಗಳನ್ನು ಪ್ರಕಟಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಈ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಧಿಕಾರಿ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ, ಯಾವುದೇ ಭಯವಿಲ್ಲದೇ ಮತ್ತೆ ತಮ್ಮ ದಂಧೆ ಮುಂದುವರೆಸಿದ್ದರು. ಬೈಲಹೊಂಗಲ ತಾಲೂಕಿನ ಮರೀಕಟ್ಟಿಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯಾಹತ ಕಲ್ಲು ಗಣಿಗಾರಿಕೆಯ ಉದ್ಯಮಿಗಳು ಹಗಲು ರಾತ್ರಿ ಎನ್ನದೇ ಮಾಡುತ್ತಿರುವ ಬ್ಲಾಸ್ಟಿಂಗ್‌ದಿಂದಾಗಿ ಸುಮಾರು 5 ಕಿಮೀಗೂ ಅಧಿಕ ದೂರ ಭೂಮಿ ಕಂಪಿಸುತ್ತಿದೆ. ಇದರಿಂದಾಗಿ ಮನೆಯ ಗೋಡೆಗಳು ಬಿರುಕು ಬಿಡುವುದರ ಜತೆಗೆ ಸುತ್ತಮುತ್ತಲಿನ ಎಂಟತ್ತು ಗ್ರಾಮಗಳ ನೆಮ್ಮದಿಯನ್ನೆ ಕಳೆದುಕೊಂಡಿವೆ. ಯಾವ ಕ್ಷಣದಲ್ಲಿ ಮನೆ ಗೋಡೆ ಬೀಳಬಹುದು, ಬಿರುಕು ಬಿಡಬಹುದು, ಚಾವಣಿ ಕುಸಿದು ಬೀಳಬಹುದು ಎಂಬ ಆತಂಕದಿಂದಲೇ ದಿನ ಕಳೆಯುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಉದ್ಯಮಿಗಳು ನಮ್ಮ ಕಾರ್ಯಕ್ಕೆ ಬಳಸುವ ಸ್ಪೋಟಕ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದರಿಂದ ಮರೀಕಟ್ಟಿ ಗ್ರಾಪಂ ವ್ಯಾಪ್ತಿಯ ಗಣಿಕೊಪ್ಪ, ಮರೀಕಟ್ಟಿ, ಶಿಗಿಹಳ್ಳಿ.ಕೆ.ಎಸ್‌., ಪುಲಾರಕೊಪ್ಪ ಹಾಗೂ ನಾವಲಗಟ್ಟಿ ಗ್ರಾಮ, ಪುನರ್ವಸತಿ ಕೇಂದ್ರ ​1 ಸೇರಿದಂತೆ ಸುತ್ತಮುತ್ತಿನ ಗ್ರಾಮಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಅಲ್ಲದೇ ಭೀಕರ ಸ್ಪೋಟದಿಂದಾಗಿ ಗಣಿಕೊಪ್ಪ, ಮರೀಕಟ್ಟಿಸೇರಿದಂತೆ ಇನ್ನೀತರ ಗ್ರಾಮಗಳಲ್ಲಿನ ಅನೇಕ ಬಡವರ ಮನೆಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ಈ ಗ್ರಾಮಗಳ ಜನರು ಪ್ರತಿದಿನ, ಪ್ರತಿಕ್ಷಣವೂ ಆತಂಕದಿಂದಲೇ ಜೀವನ ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ಗಮನ ಸೆಳೆಯಲಾಗಿತ್ತು.
 

click me!