
ವಿಧಾನಸಭೆ(ಸೆ.16): ತೀವ್ರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಹಾಳಾಗಿರುವ ಮುಖ್ಯರಸ್ತೆಗಳ ರಿಪೇರಿಗೆ ರಾಜ್ಯ ಸರ್ಕಾರ ಆದ್ಯತೆ ನೀಡದ ಕಾರಣಕ್ಕಾಗಿ ಕಳೆದ ಒಂದೂವರೆ ವರ್ಷದಲ್ಲಿ 15ಕ್ಕಿಂತ ಹೆಚ್ಚಿನ ಮಂದಿ ಸಾವನ್ನಪ್ಪಿದ್ದು, ತಪ್ಪಿನ ಹೆಚ್ಚಿನ ಭಾಗ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್ ಸದಸ್ಯ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ. ಗುರುವಾರ ಸದನದಲ್ಲಿ ಅತಿವೃಷ್ಟಿ ಕುರಿತು ಮಾತನಾಡಿದ ಅವರು, 1983ರವರೆಗೆ ಮತ್ತು 2006ರಿಂದ 2023ರ ಅವಧಿಯಲ್ಲಿ ಆರು ವರ್ಷ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿದ್ದು, ಬೆಂಗಳೂರಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳಲ್ಲಿ ಏನೇ ತಪ್ಪು ಆದರೂ ಹೆಚ್ಚಿನ ಭಾಗ ಬಿಜೆಪಿಗೆ ಸಲ್ಲುತ್ತದೆಯೇ ಹೊರತು ನಮಗಲ್ಲ ಎಂದು ಹೇಳಿದರು.
ಮಳೆ ಬಂದಾಗ ರಸ್ತೆಗುಂಡಿಗಳು ಬೀಳುವುದು ಸಹಜ. ಆದರೆ, ಮಳೆ ನಿಂತ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದು ಬಹಳ ಮುಖ್ಯ. 2020-21ನೇ ಮತ್ತು 2021-22ನೇ ಸಾಲಿನಲ್ಲಿ ಬಿಬಿಎಂಪಿಯಿಂದ 198 ವಾಡ್‌ಗಳಿಗೂ ನಯಾಪೈಸೆ ನೀಡಿಲ್ಲ. 22-23ನೇ ಸಾಲಿನಲ್ಲಿ .60 ಲಕ್ಷ ನೀಡಲಾಗಿದೆ. ಹೈಕೋರ್ಚ್ ಸಹ ರಸ್ತೆಗುಂಡಿಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ. ಸರಿಯಾಗಿ ನಿರ್ವಹಣೆ ಮಾಡದಿರುವ ಹಿನ್ನೆಲೆಯಲ್ಲಿ ಹೈಕೋರ್ಚ್ ಸರ್ಕಾರಕ್ಕೆ ಚಾಟಿ ಬೀಸುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವಲ್ಲಿಯೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರು ಇರುವ ಕ್ಷೇತ್ರ ಮಾತ್ರ ಅಭಿವೃದ್ಧಿಯಾದರೆ ಬೆಂಗಳೂರು ಅಭಿವೃದ್ಧಿಯಲ್ಲ, ಪ್ರತಿಪಕ್ಷದ ಶಾಸಕರು ಇರುವ ಕ್ಷೇತ್ರಗಳು ಸಹ ಅಭಿವೃದ್ಧಿಯಾಗಬೇಕು. ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ಯಾವ ಸರ್ಕಾರ ಎಷ್ಟುಅನುದಾನ ನೀಡಿವೆ ಎಂಬುದರ ಕುರಿತು ಮಾಹಿತಿ ಕೇಳಿದರೆ ನೀಡುತ್ತೇವೆ ಎಂದು ಹೇಳಿದರು. ಆಗ ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ, ಅದನ್ನು ಸರ್ಕಾರವೇ ಮಂಡಿಸಬಹುದು ಎಂದು ಕಿಡಿಕಾರಿದರು.
Bengaluru Flood: ಕೆರೆ ಮುಚ್ಚಲು ಅನುಮತಿ ಕೊಟ್ಟವರಿಗೆ ಶಿಕ್ಷೆ ಆಗಬೇಕಲ್ಲವೇ?: ಸಚಿವ ಅಶೋಕ್
ಐಟಿ-ಬಿಟಿ ಕಂಪನಿಗಳ ವಿರುದ್ಧ ಟೀಕೆ ಬೇಡ
ಮಾತು ಮುಂದುವರಿಸಿದ ರಾಮಲಿಂಗಾರೆಡ್ಡಿ, ಬೆಂಗಳೂರಿಗೆ 110 ಹಳ್ಳಿಗಳು, 2 ಟಿಎಂಸಿಗಳನ್ನು ಸೇರಿಸಿ ವಿಸ್ತರಿಸಲಾಯಿತು. ಈ ವೇಳೆ ಸರ್ಕಾರದಿಂದ ಸರಿಯಾಗಿ ನಿವೇಶನ ಮಾಡಲಿಲ್ಲ. ಖಾಸಗಿಯವರು ರಾಜಕಾಲುವೆ ಒತ್ತುವರಿ ಮಾಡಿ ನಿವೇಶನ ಮಾಡಿದರು. ಪರಿಣಾಮ ಮಳೆ ಬಂದರೆ ತೀವ್ರ ಸಮಸ್ಯೆ ಎದುರಿಸುವಂತಾಯಿತು ಎಂದು ವಿವರಿಸಿದರು.
ಕಾಂಗ್ರೆಸ್ ಅವಧಿಯಲ್ಲಿ 1953 ರಾಜಕಾಲುವೆಗಳು ಒತ್ತುವರಿ ಪತ್ತೆ ಹಚ್ಚಿ, ಈ ಪೈಕಿ 1300 ಒತ್ತುವರಿಯನ್ನು ತೆರವುಗೊಳಿಸಲಾಯಿತು. 653 ಒತ್ತುವರಿ ತೆರವು ಕಾರ್ಯ ಬಾಕಿ ಉಳಿದುಕೊಂಡಿತು. ನಂತರ ಬಂದ ಸರ್ಕಾರಗಳು ಒತ್ತುವರಿ ತೆರವುಗೊಳಿಸಿದ್ದರೆ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದ ಅವರು, ಒತ್ತುವರಿ ಯಾರೇ ಮಾಡಿದರೂ ಕ್ರಮಕೈಗೊಳ್ಳಬೇಕು. ಎಲ್ಲ ಐಟಿ-ಬಿಟಿ ವಿರುದ್ಧ ಟೀಕೆ ಮಾಡುವುದಲ್ಲ. ನಗರದ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ. ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.