ಜಗತ್ತಿನ ಸೃಷ್ಟಿಗೆ ವಿಶ್ವಕರ್ಮ ಮೂಲಾಧಾರ: ಟಿ.ಪಿ. ರಮೇಶ್‌

By Kannadaprabha News  |  First Published Oct 23, 2022, 8:28 AM IST
  • ಸಮಾಜ ನಿರ್ಮಾಣ, ಜಗತ್ತಿನ ಸೃಷ್ಟಿಗೆ ವಿಶ್ವಕರ್ಮ ಮೂಲಾಧಾರ: ಟಿ.ಪಿ. ರಮೇಶ್‌
  • ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಚಾರ ಮಂಡನೆ

ಮಡಿಕೇರಿ (ಅ.23) ಸಮಾಜಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾದುದು. ಸಮಾಜ ನಿರ್ಮಾಣ ಹಾಗೂ ಜಗತ್ತಿನ ಸೃಷ್ಟಿಗೆ ವಿಶ್ವಕರ್ಮ ಮೂಲಾಧಾರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್‌ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಮಕ್ಕಂದೂರು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ 2021-22ನೇ ಸಾಲಿನ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್‌ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ‘ ಸಮಾಜಕ್ಕೆ ವಿಶ್ವ ಕರ್ಮ ಸಮುದಾಯದ ಕೊಡುಗೆ’ ಎಂಬ ವಿಚಾರದಡಿ ಅವರು ಉಪನ್ಯಾಸ ನೀಡಿದರು.

ವಿಶ್ವಕರ್ಮ ‌ಸಮಾಜವನ್ನು STಗೆ ಸೇರಿಸಲು ಸಂಘಟನೆಗೆ ಮುಂದಾದ ಕೆ.ಪಿ.ನಂಜುಂಡಿ

Latest Videos

undefined

ವಿಶ್ವಕರ್ಮ ಇಲ್ಲದೆ ಜಗತ್ತು ಮುಂದುವರಿಯಲು ಸಾಧ್ಯವಿಲ್ಲ; ಅವರು ಎಲ್ಲರ ಹೃದಯದಲ್ಲಿ ಇರುವವರು. ಸೃಷ್ಟಿಕರ್ತನ ಒಂದು ಭಾಗವೇ ವಿಶ್ವಕರ್ಮ, ಅನೇಕ ಹೆಸರುಗಳಲ್ಲಿ ಕರೆಯಲ್ಪಡುವ ವಿಶ್ವಕರ್ಮರು ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಶಿಲ್ಪಕಲೆ ಮೂಲಕ ದೇವತೆಗಳ ಮೂರ್ತಿ ರಚನೆಯೊಂದಿಗೆ ಭಗವಂತನಿಗೆ ಆಕಾರ ನೀಡಿದವನು. ವೇದ, ಉಪನಿಷತ್ತುಗಳಲ್ಲೂ ಸ್ಥಾನಮಾನವಿದ್ದು, ಶತಮಾನಗಳ ಧಾರ್ಮಿಕ, ಆಧ್ಯಾತ್ಮದಲ್ಲಿ, ರಾಜಪರಂಪರೆಯ ಮೂಲಕವೂ ಸಮಾಜಕ್ಕೆ ಪರಿಚಯದೊಂದಿಗೆ ಸ್ಫೂರ್ತಿ ತುಂಬಿದ ಕಲಾಕಾರ. ಎಲ್ಲ ಕೆಲಸ, ಆಯಾಮಗಳ ನಿರ್ಮಾತೃ ವಿಶ್ವಕರ್ಮ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಕ್ರುದೇವು ಗೌಡ ಮಾತನಾಡಿ, ನೂರು ವರ್ಷದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬರುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ ಉತ್ತಮ ಚಟುವಟಿಕೆಗಳಾಗುತ್ತಿವೆ. ಮಕ್ಕಳಲ್ಲಿ ಬರವಣಿಗೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಇದೀಗ ನಮ್ಮ ಶಾಲೆಯಲ್ಲಿಯೂ ಸಾಹಿತ್ಯದ ಜ್ಯೋತಿ ಬೆಳಗಿದ್ದು, ಮಕ್ಕಳಿಂದ ಉತ್ತಮ ಸಾಹಿತ್ಯಗಳು ಉತ್ತಮವಾಗಿ ಮೂಡಿಬರಲಿ ಎಂದು ಆಶಿಸಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್‌ ಮಾತನಾಡಿ ಹಿರಿಯರು ಸಮಾಜಕ್ಕೆ ಕೊಟ್ಟಿರುವ ಸೇವೆ, ಕೊಡುಗೆಗಳನ್ನು ಇಂದಿನ ಪೀಳಿಗೆ ಹಾಗೂ ಜಿಲ್ಲೆಯ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಪರಿಷತ್ತಿನಲ್ಲಿ ಹಲವಾರು ದತ್ತಿಗಳಿದ್ದು, ಇದೊಂದು ಹಿರಿಯರನ್ನು ನೆನೆಸಿಕೊಳ್ಳುವ ಕಾರ್ಯಕ್ರಮ. ಹಳ್ಳಿ ಶಾಲೆಗಳಲ್ಲಿ. ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪರಿಷತ್ತಿನಲ್ಲಿ ಎಲ್ಲರಿಗೂ ಸದಸ್ಯರಾಗುವ ಅವಕಾಶ ಮುಕ್ತವಾಗಿದ್ದು, ಸದಸ್ಯತ್ವ ಪಡೆದುಕೊಂಡು ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಕೈಜೋಡಿಸುವಂತೆ ಕೋರಿದರು.

ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ, ಸ್ಥಳೀಯರೂ ಆದ ಕುಡೆಕಲ್‌ ಸಂತೋಷ್‌ ಮಾತನಾಡಿ ವಿದ್ಯಾರ್ಥಿಗಳು ಹಿರಿಯರ, ದಾರ್ಶನಿಕರ ವಿಚಾರಧಾರೆಗಳನ್ನು ಮನನ ಮಾಡಿಕೊಂಡು ಸಮಾಜದಲ್ಲಿ ಸಾಧನೆ ಮಾಡುವ ಗುರಿ ಹೊಂದಿರಬೇಕು. ಪ್ರತಿ ವರ್ಷದಂತೆ ಮುಂದಿನ ವರ್ಷ ಕೂಡ ಹತ್ತನೇ ತರಗತಿಯಲ್ಲಿ ಶೇ.100ರ ಸಾಧನೆ ಮಾಡುವಂತೆ ಆಶಿಸಿದರು.

ದತ್ತಿ ನಿಧಿ ದಾನಿ, ಪುಟ್ಟಮ್ಮ ಹಾಗೂ ನಂಜಾಚಾರ್‌ ಅವರ ಪುತ್ರ ಸುಬ್ರಮಣ್ಯ ಮಾತನಾಡಿ ತಂದೆ, ತಾಯಿ ಹೆಸರು ಉಳಿಯಬೇಕು, ಅವರುಗಳ ಆಶೀರ್ವಾದ ಇರಬೇಕೆಂಬ ಉದ್ದೇಶದೊಂದಿಗೆ ಅವರುಗಳ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಲಾಗಿದೆ. ಎಲ್ಲರ ಜೀವನದಲ್ಲೂ ಹುಟ್ಟಿನಿಂದ ಸಾವಿನವರೆಗೆ ವಿಶ್ವಕರ್ಮ ಬೇಕು., ವಿಶ್ವಕರ್ಮನ ಕೊಡುಗೆ ಸಮಾಜಕ್ಕೆ ಬಹಳಷ್ಟಿದೆ ಎಂದು ಹೇಳಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್‌.ಐ. ಮುನೀರ್‌ ಅಹಮ್ಮದ್‌ ಮಾತನಾಡಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಧ್ಯಾಪಕರು ಕೂಡ ಅಧ್ಯಯನ ಮಾಡಬೇಕು. ಪ್ರತಿಭಾವಂತರಿಗೆ ವೇದಿಕೆ ನಿರ್ಮಾಣ ಮಾಡುವ ಉದ್ದೇಶವಾಗಿದ್ದು, ಮಕ್ಕಳು ಕತೆಗಳನ್ನು, ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮತ್ತೋರ್ವ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್‌ ಮಾತನಾಡಿ, ಕನ್ನಡ ಹಾಗೂ ಸಾಹಿತ್ಯ ಬೆಳವಣಿಗೆ ಸರ್ಕಾರಿ ಶಾಲೆಗಳಿಂದಲೇ ಆಗುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್‌ ನವೀನ್‌ ಮಾತನಾಡಿ, ಕಸಾಪದಲ್ಲಿ ಒಟ್ಟು 21 ದತ್ತಿಗಳಿದ್ದು, ನಾಲ್ಕು ದತ್ತಿಗಳನ್ನು ಮಡಿಕೇರಿ ತಾಲೂಕಿಗೆ ನೀಡಲಾಗಿತ್ತು, ಈ ಪೈಕಿ ಎಲ್ಲ ದತ್ತಿ ಕಾರ್ಯಕ್ರಮಗಳು ಪೂರ್ಣಗೊಂಡಿರುವುದಾಗಿ ಹೇಳಿದರು. ಜನರಿಗೆ ಮಾಡಿದ ಸೇವೆಯನ್ನು ಗುರುತಿಸಲು ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪರಿಷತ್ತಿನಲ್ಲಿ ದತ್ತಿ ಸ್ಥಾಪನೆ ಮಾಡಲು ದಾನಿಗಳು ಆಸಕ್ತಿಯಿಂದ ಮುಂದೆ ಬರಬೇಕು. 18 ಮೇಲ್ಪಟ್ಟವರು ಸದಸ್ಯತ್ವ ಪಡೆದು ಪರಿಷತ್ತನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.

ಕಾಡಾನೆ ಹಾವಳಿ ತಡೆಯಲು ತಮಿಳುನಾಡು ಮಾದರಿಯ ರೋಪ್‌ ಫೆನ್ಸ್ ಯೋಜನೆ: ಜಾವೇದ್‌ ಅಕ್ತರ್‌

ಕಾರ್ಯಕ್ರಮದಲ್ಲಿ ದತ್ತಿ ದಾನಿ ರೇಣುಕಾ, ಕಸಾಪ ಜಿಲ್ಲಾ ನಿರ್ದೇಶಕ ವಿ.ಟಿ. ಮಂಜುನಾಥ್‌, ದಾನಿಗಳ ಕುಟುಂಬಸ್ಥರು, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕುಂಬಗೌಡನ ರಂಜಿತ್‌ ಸ್ವಾಗತಿಸಿ, ನಿರೂಪಿಸಿದರು.

click me!