ಕಡೂರು (ಅ.23) : ಡುಗೊಲ್ಲರನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಈ ಸಂಬಂಧ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಕಾಡುಗೊಲ್ಲರ ಸಂಘ ಹಾಗೂ ಜಿಲ್ಲಾ ಸಂಘದ ಆಶ್ರಯದಲ್ಲಿ ಪರಿಶಿಷ್ಟಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
A Narayanaswamy: ಕಾಡುಗೊಲ್ಲರಿಗೆ ಎಸ್‌ಟಿ ಮೀಸಲು ಕೊಡಿಸಲು ಯತ್ನ
ಸಂಘಟಿತ ಹೋರಾಟ ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಈ ವಿಚಾರದಲ್ಲಿ ಕಾಡುಗೊಲ್ಲರ ಸಮಾಜದೊಂದಿಗೆ ತನು, ಮನ, ಧನ ಎಲ್ಲ ರೀತಿಯಲ್ಲೂ ನಿಂತುಕೊಳ್ಳುತ್ತೇವೆ. ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವವರೆಗೆ ಕಾಯ, ವಾಚಾ, ಮನಸಾ ನಿಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ಇದು ಹೇಳಿದಷ್ಟುಸುಲಭದಲ್ಲ. ಹಾಗೆಯೇ ಅಸಾಧ್ಯವಾದದ್ದೂ ಅಲ್ಲ. ನಾವು ಸಂಘಟಿತ ಹೋರಾಟವನ್ನು ನಿರಂತರವಾಗಿ ಮಾಡಿದರೆ ಮಾತ್ರ ಕಲ್ಲು ಸಹ ಕರಗುತ್ತದೆ. ವಿಧಾನಸಭೆ ಒಳಗೂ ಹೊರಗೂ ಹೋರಾಟಕ್ಕೆ ಧ್ವನಿಯಾಗುತ್ತೇವೆ ಎಂದರು.
ನಮ್ಮನ್ನು ನೀವು ನಿಮ್ಮನ್ನು ನಾನು ನಮ್ಮವರು ಎಂದು ಭಾವಿಸಿದ ಮೇಲೆ ನಾವೆಲ್ಲರೂ ಒಂದೇ. ದೇಹ ಎರಡಿರಬಹುದು, ಜೀವ ಒಂದೆ ಎನ್ನುವಂತೆ ನಿಮ್ಮೊಂದಿಗೆ ನಿಂತು ಹೋರಾಟಕ್ಕೆ ಬಲ ಕೊಡುತ್ತೇವೆ. ಈ ಸಮುದಾಯವು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿವಾಗಿ ಹಿಂದುಳಿದಿದೆ. ಈ ಸಮುದಾಯಕ್ಕೆ ಬಲ ಕೊಡುವುದು ನಮ್ಮ ಕರ್ತವ್ಯ ಎಂದರು.
ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಚಿಕ್ಕಮಗಳೂರು ಪಂಚ ಪಾಂಡವರ ಜಿಲ್ಲೆ. ಇಲ್ಲಿ ಶಾಸಕ ಸಿ.ಟಿ.ರವಿ ಅರ್ಜುನ ಇದ್ದಂತೆ ಅವರೊಂದಿಗೆ ನಾನು ಭೀಮನಂತೆ ನಿಂತು ಕಾಡುಗೊಲ್ಲರ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತೇನೆ ಎಂದರು.
ಸದನವೇ ನಮ್ಮ ಯುದ್ಧಭೂಮಿ ಅಲ್ಲಿ ಕಾಡುಗೊಲ್ಲರ ಸಮಾಜದ ಬೇಡಿಕೆಗೆ ಧ್ವನಿಗೂಡಿಸುವ ಮೂಲಕ ಎಲ್ಲ ರೀತಿ ಬೆಂಬಲ ನೀಡುತ್ತೇವೆ. ನಮ್ಮ ಕ್ಷೇತ್ರದ ಗೆದ್ಲೆಹಳ್ಳಿ, ಗೊಲ್ಲರಟ್ಟಿ ಗ್ರಾಮಗಳ ರಸ್ತೆ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಮುಂಬರುವ ಚುನಾವಣೆಗೆ ಮತ ಕೇಳುವ ಮುನ್ನ ಆ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಚಿಕ್ಕಮಗಳೂರು ಜಿಲ್ಲಾ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಡಿ.ಪ್ರಭುದೇವ್ ಮಾತನಾಡಿ, ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಯಾವುದೇ ಅನುಕೂಲಗಳಿಲ್ಲ. ಖಾರ, ಮುದ್ದೆ ತಿಂದುಕೊಂಡು ಕುರಿ, ದನ ಕಾಯುತ್ತಿದ್ದೇವೆ. ನಮಗೂ, ಕುರಿಗಳಿಗೂ ಯಾವುದೇ ಭದ್ರತೆ ಇಲ್ಲ. ಉಮಾಪತಿ ಹೊರತುಪಡಿಸಿ ಯಾರೊಬ್ಬರೂ ನಮ್ಮ ಜನಾಂಗದಿಂದ ಶಾಸಕರಾಗಿಲ್ಲ. ಹೀಗಾಗಿ ಎಸ್‌ಟಿಗೆ ಸೇರ್ಪಡಿಸಲು ಒತ್ತಾಯಿಸುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಯಾರೊಬ್ಬರೂ ನಮ್ಮ ಸಮಸ್ಯೆ ಆಲಿಸಲಿಲ್ಲ. ಆದರೆ ಶಾಸಕ ಸಿ.ಟಿ.ರವಿ ಅವರನ್ನು ಕಾಣಲು ಹೋದಾಗ ಅವರು ಸ್ಪಂದಿಸಿದ ರೀತಿ ನಿಜಕ್ಕೂ ನಮಗೆ ಸಂತೋಷ ತಂದಿದೆ ಎಂದು ಹೇಳಿದರು.
ಕಾಡುಗೊಲ್ಲ ಸಮುದಾಯ ಎಸ್‌ಟಿ ಸೇರ್ಪಡೆಗೆ ಕ್ರಮ
ಸಮಾವೇಶದಲ್ಲಿ ಪೊಲೀಸ್ ಇಲಾಖೆಯ ಎಸಿಪಿ ಬೆಂಗಳೂರಿನ ಬಸವರಾಜು, ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ರಾಜ್ಯ ಸಂಘದ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ದೇವರಾಜು, ಈರಪ್ಪ, ಶಂಕರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ತಮ್ಮಣ್ಣ, ಬೆಂಗಳೂರು ನಗರಾಧ್ಯಕ್ಷ ರಾಮಣ್ಣ, ಸುಂಕಪ್ಪ,ಸಣ್ಣ ಬಾಲಪ್ಪ, ರವಿಕುಮಾರ್, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ನಾಗರಾಜು, ಬಸವರಾಜು, ತೆಂಗು ಮತ್ತು ನಾರು ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ರಾಮಣ್ಣ, ಈಶ್ವರಳ್ಳಿ ಮಹೇಶ್, ಕಾಡುಗೊಲ್ಲರ ಸ್ಥಳೀಯ ಮುಖಂಡ ನೀಲೆನಹಳ್ಳಿ ಜಗನಾಥ್, ದಾಸಪ್ಪ, ಪಾದಮನೆ ದಿನೇಶ್ ಇದ್ದರು.