ಕಾಡಾನೆ ಹಾವಳಿ ತಡೆಯಲು ತಮಿಳುನಾಡು ಮಾದರಿಯ ರೋಪ್ ಫೆನ್ಸ್ ಯೋಜನೆ: ಜಾವೇದ್ ಅಕ್ತರ್
ಕಾಡಾನೆ ಹಾವಳಿ ತಡೆಯಲು ತಮಿಳುನಾಡು ಮಾದರಿಯ ರೋಪ್ ಫೆನ್ಸ್ ಯೋಜನೆ. ಮಡಿಕೇರಿಯಲ್ಲಿ ಕೊಡಗು ಬೆಳೆಗಾರರ ಸಂಘದ 143ನೇ ವಾರ್ಷಿಕ ಮಹಾಸಭೆಯಲ್ಲಿ ಜಾವೇದ್ ಅಕ್ತರ್ ಹೇಳಿಕೆ.
ಮಡಿಕೇರಿ (ಅ.16): ವನ್ಯಜೀವಿ- ಮಾನವ ನಡುವಿನ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರೋಪ್ ಫೆನ್ಸ್ ಅಳವಡಿಕೆಯನ್ನು ಪ್ರಾಯೋಗಿಕವಾಗಿ 5 ಕೋಟಿ ರು. ವೆಚ್ಚದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದರು. ನಗರದಲ್ಲಿ ಕೊಡಗು ಕಾಫಿ ಬೆಳೆಗಾರರ ಸಂಘದ 143ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಮುಖವಾಗಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದ್ದು ಬಜೆಟ್‌ನಲ್ಲಿ ನಿಗದಿಪಡಿಸಿರುವ 5 ಕೋಟಿ ರು.ಗೆ ಹೆಚ್ಚುವರಿಯಾಗಿ ಮತ್ತೆ 5 ಕೋಟಿ ರು. ಅನುದಾನವನ್ನು ಕಾಡಾನೆ ಹಾವಳಿ ತಡೆಗೆ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ಅಳವಡಿಸಿ ಯಶಸ್ವಿಯಾಗಿರುವ ರೋಪ್ ಫೆನ್ಸ್ ತಂತ್ರಜ್ಞಾನವನ್ನು ಈ ಅನುದಾನ ಬಳಸಿಕೊಂಡು ಶೀಘ್ರದಲ್ಲಿಯೇ ಪ್ರಾಯೋಗಿಕವಾಗಿ ರಾಜ್ಯದ ನಾಗರಹೊಳೆಯಲ್ಲಿಯೂ ಅಳವಡಿಸಲಾಗುತ್ತದೆ ಎಂದ ಅವರು, ವನ್ಯಜೀವಿಗಳಿಂದ ಕೃಷಿ ಜಮೀನು ಹಾನಿಗೆ ಶೇ.100ರಷ್ಟುಪರಿಹಾರ ನೀಡಲು ವಾಸ್ತವ ನೆಲೆಗಟ್ಟಿನಲ್ಲಿ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಕಾಫಿ ಆಂತರಿಕ ಬಳಕೆ ಹೆಚ್ಚಬೇಕು: ಭಾರತೀಯ ಕಾಫಿಯನ್ನು ಆಂತರಿಕ ಬಳಕೆಗೆ ಹೆಚ್ಚು ಬಳಸಬೇಕು. ವಿದೇಶಿ ಸಂಸ್ಥೆಗಳೂ ಈಗಾಗಲೇ ಭಾರತದಾದ್ಯಂತ ಕಾಫಿ ಮಳಿಗೆ ಪ್ರಾರಂಭಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಫಿ ದೊರಕುವಂತಾಗಿದೆ. ಹೀಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾಗಿಲ್ಲ. ಹಳ್ಳಿಗಳಲ್ಲಿಯೂ ನಗರಗಳ ಮಾದರಿಯಲ್ಲಿ ಕಾಫಿ ಪೇಯ ಮಾರಾಟದ ಸಣ್ಣ ಅಂಗಡಿಗಳು ತೆರೆದರೆ ಕಾಫಿಯ ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಜಾವೇದ್ ಅಕ್ತರ್ ಅಭಿಪ್ರಾಯಪಟ್ಟರು.
2015- 16ನೇ ಸಾಲಿನಲ್ಲಿ 3.05 ಮೆಟ್ರಿಕ್ ಟನ್ ಉತ್ಪಾದಿಸಲ್ಪಡುತ್ತಿದ್ದ ಭಾರತೀಯ ಕಾಫಿ 2022- 23ನೇ ಸಾಲಿನಲ್ಲಿ ದಾಖಲೆಯ 4 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಕಾಫಿ ಬೆಳೆಗಾರರರಿಗೆ ಆರ್ಥಿಕವಾಗಿಯೂ ಉತ್ತಮ ವರ್ಷವಾಗುವ ಆಶಾಕಿರಣ ಮೂಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಜಾವೇದ್ ಅಕ್ತರ್, ಭಾರತದಲ್ಲಿನ ಅರೆಬಿಕಾ ಕಾಫಿ ಇಂದಿಗೂ ವಿಶ್ವದಲ್ಲಿಯೇ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿರುವುದು ಭಾರತದ ಕಾಫಿಯ ಗುಣಮಟ್ಟದ ಶ್ರೇಷ್ಟತೆಗೆ ಉದಾಹರಣೆಯಾಗಿದೆ ಎಂದರು.
ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಬಂದು ದಾಂಧಲೆ ನಡೆಸಲು ಕಾಡಿನಲ್ಲಿ ಅವುಗಳಿಗೆ ಪ್ರಮುಖ ಆಹಾರ ಕೊರತೆಯೇ ಕಾರಣವಾಗಿದೆ. ಕಾಡಿನಲ್ಲಿ ವನ್ಯಜೀವಿಗಳಿಗೆ ಅಗತ್ಯವಾದ ಆಹಾರದ ವ್ಯವಸ್ಥೆಗೂ ರಾಜ್ಯ ಅರಣ್ಯ ಇಲಾಖೆಯು ಗಂಭೀರವಾದ ಚಿಂತನೆ ಹರಿಸಿದೆ ಎಂದು ಅವರು ಹೇಳಿದರು.
ಉಪಾಸಿಯ ಅಧ್ಯಕ್ಷ ಜೆಫ್ರಿ ರೆಬೆಲ್ಲೋ ಮಾತನಾಡಿ, ಕೊಲಂಬಿಯಾ, ಇಥೋಪಿಯಾ ಮಾದರಿಯಲ್ಲಿಯೇ ಭಾರತದ ಗ್ರೀನ್ ಕಾಫಿಯನ್ನು ಭಾರತೀಯ ಕಾಫಿಯ ಮಾದರಿಯನ್ನಾಗಿಸಿ ಕಾಫಿಗೆ ಜಾಗತಿಕ ಮಾರುಕಟ್ಟೆಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಭಾರತದ ಅತ್ಯುತ್ತಮ ಗುಣಮಟ್ಟದ ಕಾಫಿಗೆ ಜಾಗತಿಕ ಮಟ್ಟದಲ್ಲಿ ಮೌಲ್ಯವರ್ಧನೆಯೊಂದಿಗೆ ಭಾರತೀಯ ಶುದ್ದ ಕಾಫಿಗೆ ಬೇಡಿಕೆ ಹೆಚ್ಚಾಗಲಿದೆ. ಭಾರತೀಯ ಕಾಫಿ ಈಗಾಗಲೇ ತನ್ನ ಸ್ವಾದದ ಮೂಲಕ ವಿಶ್ವಮಟ್ಟದಲ್ಲಿ ರಾಯಲ್ ಕಾಫಿ ಎಂದು ಮನ್ನಣೆ ಹೊಂದುವಂತಾಗಿದೆ ಎಂದರು.
ಕಾಫಿಯೊಂದಿಗೆ ಪರ್ಯಾಯ ಬೆಳೆ ಯೋಜನೆ: ಮುಂದಿನ ದಿನಗಳಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ಯೋಜನೆ ರೂಪಿಸಿ ಕಾಫಿ ತೋಟಗಳ ನಡುವೆ ಪರ್ಯಾಯವಾಗಿ ತೋಟಗಾರಿಕಾ ಬೆಳೆ ಬೆಳೆಸುವಿಕೆ. ಸಂಬಾರ ಮಂಡಳಿ ಜತೆ ಯೋಜನೆ ರೂಪಿಸಿ ವಿವಿಧ ಸಂಬಾರ ಪದಾರ್ಥಗಳನ್ನು ಬೆಳೆಸುವಿಕೆ, ಔಷಧೀಯ ಸಸ್ಯಗಳನ್ನು ಬೆಳೆಸುವಿಕೆಗೆ ಯೋಜನೆ ರೂಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಉಪಾಸಿಗೆ ಸೇರಿದ ಜಾಗದಲ್ಲಿಯೇ ಇವುಗಳನ್ನು ಬೆಳೆದು ನಂತರದ ಹಂತದಲ್ಲಿ ಆಸಕ್ತ ಬೆಳೆಗಾರರ ತೋಟಗಳಲ್ಲಿಯೂ ಪರ್ಯಾಯ ಬೆಳೆ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದೂ ಜೆಫ್ರಿ ರೆಬೆಲ್ಲೋ ಮಾಹಿತಿ ನೀಡಿದರು.
ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಿರಂಜನ ಮೂರ್ತಿ ಮಾತನಾಡಿ, ಕಾಡಿನಲ್ಲಿ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಬಿದಿರು ಮೆಳೆ ಪ್ರಮಾಣ ಕಡಮೆಯಾಗಿರುವುದು ಕೂಡ ಕಾಡಾನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣವಾಗಿದೆ. ಇದನ್ನು ನಿವಾರಿಸಲು ಕೊಡಗು ಜಿಲ್ಲೆಯಲ್ಲಿ 15 ಸಾವಿರ ಮೆಟ್ರಿಕ್ ಟನ್‌ಗಳಷ್ಟುಬಿದಿರು ಸಸಿ ನೆಡಲಾಗಿದೆ. 1 ಸಾವಿರದಷ್ಟುಕೊಳಗಳು ಕಾಡಿನೊಳಗಿದ್ದು ಇವುಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ ಎಂದರು.
ಕೊಡಗು ಜಿಲ್ಲೆಯಲ್ಲಿರುವ 1300 ಕಾಡಾನೆಗಳ ಪೈಕಿ 200ರಷ್ಟುಆನೆಗಳು ನಾಡಿನತ್ತ ಬಂದು ಸಮಸ್ಯೆ ಸಷ್ಟಿಸುತ್ತಿವೆæ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಹುಲಿ ದಾಳಿಯನ್ನು ನಿಯಂತ್ರಿಸಲು ಈಗಾಗಲೇ 3 ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿಸಿದ ನಿರಂಜನ್, ಈ ವರ್ಷ 3 ಕಾಡಾನೆಗಳು ತೋಟಗಳ ನಡುವೆ ತಳಮಟ್ಟದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಅಸುನೀಗಿವೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕೂಡ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ ವನ್ಯಜೀವಿಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರಕಾರ್ಯಪಡೆ ಅತ್ಯಂತ ವೇಗವಾಗಿ ಸಂಕಷ್ಟಕ್ಕೊಳಗಾದವರಿಗೆ ಸ್ಪಂದಿಸುತ್ತಿದೆ ಎಂದೂ ಅವರು ಹೇಳಿದರು.
Ramanagara; ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು
ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ. ಮೋಹನ್ ದಾಸ್, ಕೊಡಗಿನಲ್ಲಿ ಕೃಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಪ್ರಧಾನ ಮಂತ್ರಿ ಫಸಲು ಭಿಮ ಯೋಜನೆಯಲ್ಲಿ ಇತರ ಬೆಳೆಗಳನ್ನು ಪರಿಗಣಿಸಿರುವಂತೆಯೇ ಕಾಫಿಯನ್ನೂ ವಿಮೆಯಡಿ ತರಬೇಕೆಂದೂ ಬೆಳೆಗಾರರ ಸಂಘಟನೆಗಳು ಸರ್ಕಾರಕ್ಕೆ ಒತ್ತಡ ಹೇರಿದೆ ಎಂದೂ ಮೋಹನ್ ದಾಸ್ ವಿವರಿಸಿದರು.
Ramanagara; ಒಂಟಿ ಸಲಗ ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ
ಕೊಡಗು ಬೆಳೆಗಾರರ ಸಂಘದ ಕಾರ್ಯದರ್ಶಿ ಸಿ.ಕೆ. ಬೆಳ್ಯಪ್ಪ, ಉಪಾಧ್ಯಕ್ಷ ಸಿ.ಯು. ಅಶೋಕ್ ವೇದಿಕೆಯಲ್ಲಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಕೊಡಗು ಬೆಳೆಗಾರರ ಸಂಘದ ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.