Ballari: ಖಾಸಗಿ ಸೇವೆ ಮಾಡುವ ವಿಮ್ಸ್‌ ವೈದ್ಯರುಗಳಿಗೆ ಬಿಸಿ..!

By Kannadaprabha News  |  First Published Feb 10, 2022, 8:57 AM IST

*  ಪದೇ ಪದೇ ಗೈರಾಗುವ ವೈದ್ಯರ ವಿರುದ್ಧ ಶಿಸ್ತು ಕ್ರಮದ ಮೊದಲ ಹೆಜ್ಜೆ
*  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು
*  ಗೈರಾಗುತ್ತಿರುವ ವೈದ್ಯರ ಮೇಲೆ ಕ್ರಮದ ಹೆಜ್ಜೆ ಇಡುವಂತೆ ಸೂಚಿಸಿದ್ದ ಸಚಿವರು 


ಕೆ.ಎಂ. ಮಂಜುನಾಥ್‌

ಬಳ್ಳಾರಿ(ಫೆ.10):  ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (VIMS) ವೈದ್ಯರ ಖಾಸಗಿ ಸೇವೆಯೇ ಹೆಚ್ಚು. ವಿಮ್ಸ್‌ನ ಕೆಲ ವಿಭಾಗಗಳ ವೈದ್ಯರು(Doctors) ಹಾಜರಾತಿ ಬಳಿಕ ಸ್ಥಳದಲ್ಲಿರುವುದೇ ಅಪರೂಪ ಎಂಬ ಆರೋಪಕ್ಕೆ ಪುಷ್ಟಿಬಂದಿದೆ.

Tap to resize

Latest Videos

ಪದೇ ಪದೇ ಗೈರಾಗುವ ಕೆಲ ವೈದ್ಯರು ಹಾಗೂ ಶುಷ್ರೂಷಕ ಅಧೀಕ್ಷಕರಿಗೆ ವಿಮ್ಸ್‌ ನಿರ್ದೇಶಕರು ಕಾರಣ ಕೇಳಿ ನೊಟೀಸ್‌ ಜಾರಿಗೊಳಿಸಿದ್ದು, ಖಾಸಗಿ ಸೇವೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ವಿಮ್ಸ್‌ ವೈದ್ಯರಲ್ಲೀಗ ನಡುಕು ಶುರುವಾಗಿದೆ.
ವಿಮ್ಸ್‌ ವೈದ್ಯರ ನಡೆ ಹಾಗೂ ಸ್ಥಳೀಯ ಆರೋಗ್ಯ ಸೇವೆ(Health Service), ವಿಮ್ಸ್‌ ನಿರ್ವಹಣೆಯಲ್ಲಿನ ವ್ಯತ್ಯಯದ ದೂರಿನ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ. ಶ್ರೀರಾಮುಲು(B Sriramulu), ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೆ, ಖಾಸಗಿ ಕ್ಲಿನಿಕ್‌ಗಳನ್ನು ಆರಂಭಿಸಿ, ವಿಮ್ಸ್‌ನಲ್ಲಿ ಹೆಚ್ಚು ಗೈರಾಗುತ್ತಿರುವ ವೈದ್ಯರ ಮೇಲೆ ಕ್ರಮದ ಹೆಜ್ಜೆ ಇಡುವಂತೆ ಸೂಚನೆ ನೀಡಿದ್ದರು.

Hijab Row ಹಿಜಾಬ್ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ ಶ್ರೀರಾಮುಲು, ಅಲ್ಪಸಂಖ್ಯಾತ ಮತಗಳಿಗೆ ಹೆದರಿದ್ರಾ?

ಈ ಹಿನ್ನಲೆಯಲ್ಲಿ ಮಂಗಳವಾರ ವಿಮ್ಸ್‌ ಆವರಣದಲ್ಲಿ ಸ್ವಚ್ಛತೆ ಕಾರ್ಯ ಶುರುಗೊಂಡಿತು. ನಿರ್ದೇಶಕರು ವೈದ್ಯಾಧಿಕಾರಿಗಳ ಸಭೆ ನಡೆಸಿದರಲ್ಲದೆ, ಪದೇ ಪದೇ ಗೈರಾಗುವ ವೈದ್ಯರಿಗೆ ನೊಟೀಸ್‌ ಜಾರಿಗೊಳಿಸುವ ನಿಲುವು ತೆಗೆದುಕೊಂಡಿದ್ದರು. ಎಲುಬು ವಿಭಾಗದ ಹಿರಿಯ ವೈದ್ಯರು, ಶುಶ್ರೂಷಕ ಅಧೀಕ್ಷರು ಸೇರಿದಂತೆ ವಿವಿಧ ವಿಭಾಗಗಳ ವೈದ್ಯರಿಗೆ ಕಾರಣ ಕೇಳಿ ನೊಟೀಸ್‌ ಜಾರಿಗೊಳಿಸಲಾಗಿದ್ದು ‘ನೊಟೀಸ್‌ಗೆ ಎರಡು ದಿನದಲ್ಲಿ ಸಮಜಾಯಿಷಿ ನೀಡಬೇಕು. ಕರ್ತವ್ಯ ನಿರ್ಲಕ್ಷ್ಯ ಮುಂದುವರಿದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ’ ಜರುಗಿಸಲಾಗುವುದು ಎಂದು ವಿಮ್ಸ್‌ ನಿರ್ದೇಶಕ ಗಂಗಾಧರಗೌಡ ಅವರು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಸೇವೆಯ ಪ್ರೀತಿ:

ವಿಮ್ಸ್‌ನ ವಿವಿಧ ವಿಭಾಗಗಳ ಅನೇಕ ವೈದ್ಯರು ಖಾಸಗಿ ಕ್ಲಿನಿಕ್‌ಗಳನ್ನು(Private Clinic) ಆರಂಭಿಸಿದ್ದಾರೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ, ಕೆಲ ವೈದ್ಯರು ಮಧ್ಯಾಹ್ನದ ಊಟದ ಸಮಯದ ಒಂದು ತಾಸು ಹಾಗೂ ಸಂಜೆ ವಿಮ್ಸ್‌ ಸೇವೆ ಬಳಿಕ ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದು, ಈ ಪೈಕಿ ಕೆಲವರು ಸೇವಾ ಅವಧಿಯಲ್ಲಿಯೇ ಗೈರಾಗಿ ಖಾಸಗಿ ಕ್ಲಿನಿಕ್‌ಗಳಲ್ಲಿರುತ್ತಾರೆ. ಇದರಿಂದ ವಿಮ್ಸ್‌ಗೆ ಬರುವ ರೋಗಿಗಳು(Patients) ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ(Medical Students) ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಲೇ ಇದ್ದವು. ಆದರೆ, ವೈದ್ಯರು ತಮ್ಮದೇ ಆದ ರಾಜಕೀಯ ಪ್ರಭಾವ ಬಳಸಿ ತಮ್ಮ ವಿರುದ್ಧ ಶಿಸ್ತು ಕ್ರಮ ಆಗದಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಕೆಲ ವೈದ್ಯರು ಖಾಸಗಿ ಕ್ಲಿನಿಕ್‌ ನಡೆಸದಿದ್ದರೂ ವೈಯುಕ್ತಿಕ ಕಾರಣಗಳಿಗಾಗಿ ವಿಭಾಗೀಯ ಮುಖ್ಯಸ್ಥರ ಗಮನಕ್ಕೆ ತರದೆ ಗೈರಾಗುತ್ತಿದ್ದರು. ವಿಮ್ಸ್‌ ವೈದ್ಯರ ಗೈರು ಸಾಮಾನ್ಯ ಎಂಬಂತಾಗಿತ್ತು. ಆದರೆ, ವಿಮ್ಸ್‌ಗೆ ನಿತ್ಯ ಬರುವ ಸಾವಿರಾರು ರೋಗಿಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲುಗೆ ಸಹ ದೂರುಗಳಿದ್ದವು. ಈ ಹಿನ್ನಲೆಯಲ್ಲಿ ಈಚೆಗೆ ವಿಮ್ಸ್‌ಗೆ ಭೇಟಿ ನೀಡಿದ ಜಿಲ್ಲಾ ಸಚಿವ, ವಿಮ್ಸ್‌ನ ‘ವೈದ್ಯಸೇವೆ’ಯನ್ನು ಬಹಿರಂಗವಾಗಿಯೇ ಅನಾವರಣಗೊಳಿಸಿದ್ದರು.

ಜತೆಯಲ್ಲಿಯೇ ಇದ್ದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸಹ ಖಾಸಗಿ ಕ್ಲಿನಿಕ್‌ ನಡೆಸುವ ವೈದ್ಯರ ಕುರಿತು ಸಚಿವರ ಗಮನಕ್ಕೆ ತಂದರು. ಈ ಹಿನ್ನಲೆಯಲ್ಲಿ ಖಾಸಗಿ ಕ್ಲಿನಿಕ್‌ಗೆ ಹೆಚ್ಚು ಗಮನ ನೀಡುತ್ತಿರುವ ವೈದ್ಯರು ಹಾಗೂ ವೈದ್ಯಾಧಿಕಾರಿಗಳಿಗೆ ನೊಟೀಸ್‌(Notice) ನೀಡುವ ಮೂಲಕ ಬಿಸಿ ಮುಟ್ಟಿಸಲಾಗಿದ್ದು, ಇದರಿಂದ ಉಳಿದ ವೈದ್ಯರು ಸಹ ಎಚ್ಚೆತ್ತುಕೊಂಡಿದ್ದಾರೆ. ಆದರೆ, ಇದು ತಾತ್ಕಾಲಿಕ ಎಂಬಂತಾಗಬಾರದು. ಖಾಸಗಿ ಕ್ಲಿನಿಕ್‌ನಲ್ಲಿಯೇ ಹೆಚ್ಚು ಸೇವೆ ನೀಡುವ ವೈದ್ಯರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಮೂಲಕ ವಿಮ್ಸ್‌ನ್ನು ಜನಾರೋಗ್ಯ ಸೇವೆಯ ತಾಣವನ್ನಾಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Congress Politics: ಬಳ್ಳಾರಿ ಯುವ ಕಾಂಗ್ರೆಸ್‌ ಅಧ್ಯಕ್ಷಗೆ ನಲಪಾಡ್‌ ಥಳಿತ

ಪದೇ ಪದೇ ಗೈರಾಗುವ ಎಲುಬು ವಿಭಾಗದ ಹಿರಿಯ ವೈದ್ಯಾಧಿಕಾರಿ, ಶುಶ್ರೂಷಕ ಅಧೀಕ್ಷಕರು ಹಾಗೂ ಖಾಸಗಿ ಕ್ಲಿನಿಕ್‌ ನಡೆಸುವ ವೈದ್ಯರಿಗೆ ಕಾರಣ ಕೇಳಿ ನೊಟೀಸ್‌ ಜಾರಿಗೊಳಿಸಲಾಗಿದೆ. ಇನ್ನು ಮುಂದೆ ರೋಗಿಗಳಿಗೆ ತೊಂದರೆಯಾಗದಂತೆ ನಿಗಾವಹಿಸಲಾಗುವುದು. ಸಮರ್ಪಕ ಸೇವೆ ನೀಡದವರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಅಂತ ಬಳ್ಳಾರಿ ವಿಮ್ಸ್‌ ನಿರ್ದೇಶಕ ಡಾ. ಗಂಗಾಧರಗೌಡ ತಿಳಿಸಿದ್ದಾರೆ. 

ವಿಮ್ಸ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ಖಾಸಗಿ ಕ್ಲಿನಿಕ್‌ನಲ್ಲಿಯೇ ಹೆಚ್ಚಾಗಿರುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ, ಇದು ಆರಂಭ ಶೂರತ್ವ ಅಷ್ಟೇ ಆಗಬಾರದು ಅಂತ ಬಳ್ಳಾರಿ ನಗರದ ಖಾಸಗಿ ಉದ್ಯೋಗಿ ವಿಜಯಶಂಕರ್‌ ಹೇಳಿದ್ದಾರೆ.  
 

click me!