ಕಾಡಾನೆ ದಾಳಿಗೆ ಗ್ರಾಮಸ್ಥರು ತತ್ತರ: ಅಪಾರ ಕೃಷಿ ಹಾನಿ

By Govindaraj SFirst Published Aug 13, 2022, 11:00 PM IST
Highlights

ಬೇಳೂರು ಗ್ರಾಮದ ಸುತ್ತಮುತ್ತಲಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮನೆಯ ಅಂಗಳಕ್ಕೆ ಬರುವ ಕಾಡಾನೆಗಳು ಬಾಳೆಗಿಡ ಹಾಗು ತರಕಾರಿ ಬೆಳೆಯನ್ನು ತಿಂದು ನಾಶಪಡಿಸುತ್ತಿವೆ. 

ಸೋಮವಾರಪೇಟೆ (ಆ.13): ಬೇಳೂರು ಗ್ರಾಮದ ಸುತ್ತಮುತ್ತಲಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮನೆಯ ಅಂಗಳಕ್ಕೆ ಬರುವ ಕಾಡಾನೆಗಳು ಬಾಳೆಗಿಡ ಹಾಗು ತರಕಾರಿ ಬೆಳೆಯನ್ನು ತಿಂದು ನಾಶಪಡಿಸುತ್ತಿವೆ. ಶುಕ್ರವಾರ ಬೆಳಗ್ಗಿನ ಜಾವ ಗ್ರಾಮದ ನಿವಾಸಿ ಶ್ರೀಕಂಠ ಎಂಬವರ ಮನೆಯ ಹಿಂಬಾಗದ ತೋಟಕ್ಕೆ ದಾಳಿಯಿಟ್ಟಕಾಡಾನೆ ತೆಂಗು, ಅಡಕೆ, ಬಾಳೆ ಗಿಡಗಳನ್ನು ನಾಶಪಡಿಸಿದೆ. 

ಮನೆಯ ಹಿಂದೆ ಆಗುತ್ತಿದ್ದ ಶಬ್ದಕ್ಕೆ ಎಚ್ಚರಗೊಂಡ ಶ್ರೀಕಂಠ ಅವರು ಹೊರಗೆ ಬಂದಾಗ ಏಕಾಏಕಿ ಅಟ್ಟಿಸಿಕೊಂಡು ಬಂದಿದೆ. ಮನೆಯೊಳಗೆ ಓಡಿ ತಪ್ಪಿಸಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಗಳ ಆವರಣಕ್ಕೂ ನುಗ್ಗಿರುವ ಆನೆ ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಹುಲ್ಲನ್ನು ತಿಂದು ನಾಶಪಡಿಸಿವೆ. ಮನೆಯ ಸಿಂಟೆಕ್ಸ್‌ ಟ್ಯಾಂಕನ್ನು ಒಡೆದುಹಾಕಿದೆ. ಬೇಳೂರು ಸುತ್ತಮುತ್ತಲಿನಲ್ಲಿ ದಿನನಿತ್ಯ ಹಗಲಿನ ವೇಳೆಯಲ್ಲೇ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಭಯದಿಂದ ಬದುಕುವಂತಾಗಿದೆ ಎಂದು ನಿವಾಸಿ ಜವರ ತಿಳಿಸಿದ್ದಾರೆ.

Weather Today: ಕೊಡಗಿನಲ್ಲಿ ತೀವ್ರ ಗಾಳಿ: ಮಳೆ ಪ್ರಮಾಣ ಇಳಿಮುಖ

ಕಾಡಾನೆ ದಾಳಿಗೆ ಕೇರಳದ ಕೂಲಿ ಕಾರ್ಮಿಕ ಬಲಿ: ತಾಲೂಕಿನ ನುಗು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಸರಗೂರು ತಾಲೂಕಿನ ಹಾದನೂರು ಗ್ರಾಪಂ ಎತ್ತಿಗೆ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಗೆ ಕೇರಳ ರಾಜ್ಯದ ವೈನಾಡು ಜಿಲ್ಲೆ ಪಾಲಮಂಗಲಂ ಮೂಲದ ಕೂಲಿ ಕಾರ್ಮಿಕ ಬಲಿಯಾಗಿದ್ದಾನೆ. ಎತ್ತಿಗೆ ಗ್ರಾಮದಲ್ಲಿ ಇತ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಆನೆ ದಾಳಿ ಮಾಡಿದ ಹಿನ್ನೆಲೆ ಬಾಲನ್‌ (60) ಮೃತಪಟ್ಟಿದ್ದಾರೆ.

ಘಟನೆ ವಿವರ: ಹೆಡಿಯಾಲ ಮತ್ತು ಎಂ.ಸಿ. ತಳಲು ಗ್ರಾಮಕ್ಕೆ ಹೋಗುವ ಕಾಡಂಚಿನ ರಸ್ತೆಯ ಬದಿಯಲ್ಲಿ ಇರುವ ಜಮೀನಿನಲ್ಲಿ ಕಾಡಾನೆಯೊಂದು ಚೆಂಡು ಹೂವಿನ ತೋಟದ ಬೆಳೆಯನ್ನು ನಾಶ ಮಾಡಿ ಹೋಗುತ್ತಿರುವಾಗ ಪಕ್ಕದ ಜಮೀನಿನಲ್ಲಿ ಶುಂಠಿ ಬೆಳೆ ಕಾಯುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ್ದು, ಅಕ್ಕಪಕ್ಕದ ಜಮೀನಿನ ರೈತರು ಹಂದಿಗಳನ್ನು ಕಾಯಲಿಕ್ಕೆ ಎಂದು ನೆಲಗುಳ್ಳು ಕಟ್ಟಿದ್ದು ಅವುಗಳನ್ನು ಸಂಪೂರ್ಣವಾಗಿ ತುಳಿದು ಹೋಗುವ ಸಂದರ್ಭದಲ್ಲಿ ಪರಮೇಶ ಎಂಬವವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಡಿದ ನಂತರ ಕಾಡಾನೆ ಆ ವ್ಯಕ್ತಿಯನ್ನು ಬಿಟ್ಟು, ಗ್ರಾಮದ ರೈತರು ಕಾಡಾನೆಯನ್ನು ಕಾಡಿನೊಳಗೆ ಓಡಿಸಿದರು. ಆ ವೇಳೆಗಾಗಲೇ ಕೂಲಿ ಕಾರ್ಮಿಕ ಮೃತಪಟ್ಟಿದನ್ನು ಗಮನಿಸಿ ಈ ಸಂಬಂಧ ಹೆಡಿಯಾಲ ವಲಯದ ಅರಣ್ಯಾಧಿಕಾರಿ ಹಾಗೂ ನುಗು ವನ್ಯ ಜೀವಿ ವಲಯ ಅರಣ್ಯಾಧಿಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ : ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸಿ ಈ ಸಂಬಂಧ ಪ್ರತಿಭಟಿಸಿದರು. 

ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ವಲಯದ ಎಸಿಎಫ್ ಪರಮೇಶ್‌, ಆರ್‌ಎಫ್‌ಓ ನಿವೇದಿತಾ ಹಾಗೂ ಸಿಬ್ಬಂದಿ ವರ್ಗದವರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನ ಮಾಡಿದರು ಕೂಡ, ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಗ್ರಾಪಂ ಪ್ರಕಾಶ್‌ ಮಾತನಾಡಿ, ಅರಣ್ಯದಂಚಿನಲ್ಲಿರುವ ಸೋಲಾರ್‌, ವಿದ್ಯುತ್‌ ಸಂಪರ್ಕ ಹಾಗೂ ಕಾಡಾನೆಗಳು ಇಳಿಯುವ ಜಾಗದಲ್ಲಿ ಮಣ್ಣು ಎತ್ತಿಸಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಶವ ಪರೀಕ್ಷೆಗಾಗಿ ಮೃತ ದೇಹವನ್ನು ಎಚ್‌.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲು ಸಹಕಾರ ಮಾಡಿಕೊಡಿ ಎಂದು ಸಿಪಿಐ ಆನಂದ ಹಾಗೂ ಸರಗೂರು ಠಾಣೆಯ ಎಸ್‌ಐ ಶ್ರವಣದಾಸ ರೆಡ್ಡಿ ಮನವಿ ಮಾಡಿದರು.

ಅಖಂಡ ಭಾರತದ ಕನಸು ನನಸಿಗೆ ಪಣ ತೊಡಿ: ಜಗದೀಶ್‌ ಕಾರಂತ

ಗ್ರಾಪಂ ಸದಸ್ಯ ಶಿವಲಿಂಗು ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಆನೆ ಕಾವಲಿಗೆ ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ, ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಹಾಗೂ ಸೋಲಾರ್‌ ಅಡವಳಿಸಿಕೊಡಬೇಕೆಂದು ಹಾಗೂ ಹಗಲು ವೇಳೆಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಎರಡು ವಾರಗಳ ಹಿಂದೆ ಹಾದನೂರು, ಒಡೆಯನ ಪುರ ಗ್ರಾಮದಲ್ಲಿ ಇಬ್ಬರು ಮೇಲೆ ಹುಲಿ ದಾಳಿ ಮಾಡಿದ ಬಳಿಕ ಅದರ ಬಗ್ಗೆ ಏನು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

click me!