
ಸಾಗರ: ತಾಲೂಕಿನ ಪಡವಗೋಡು ಗ್ರಾಮದಲ್ಲಿ ರಸ್ತೆ ಅಭಿವೃದ್ದಿಗೆ ಆಡಳಿತ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ ರೈತ ಸಂಘದ ಸಹಯೋಗದೊಂದಿಗೆ ಗ್ರಾಮಸ್ಥರೇ ರಸ್ತೆ ದುರಸ್ತಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕಳೆದ ಒಂದೂವರೆ ವರ್ಷದಿಂದ ಪಡವಗೋಡು ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿತ್ತು. ರಸ್ತೆ ದುರಸ್ತಿಪಡಿಸಲು ಸ್ಥಳೀಯ ಗ್ರಾಮ ಪಂಚಾಯ್ತಿಗೆ, ತಾಲ್ಲೂಕು ಪಂಚಾಯ್ತಿ, ಶಾಸಕರಿಗೆ ಮನವಿ ಸಲ್ಲಿಸಿದ್ದಾಗ್ಯೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರೈತ ಸಂಘಕ್ಕೆ ವಿಷಯ ತಿಳಿಸಿದ್ದರು. ಶುಕ್ರವಾರ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಜೆಸಿಬಿ, ಟಿಪ್ಪರ್ ಬಳಸಿ ಶ್ರಮದಾನ ಮಾಡಿ ಸುಮಾರು ಎರಡು ಕಿ.ಮೀ. ರಸ್ತೆಯನ್ನು ಅಭಿವೃದ್ದಿ ಪಡಿಸಿ ಆಡಳಿತಕ್ಕೆ ಸಡ್ಡು ಹೊಡೆದಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಗ್ರಾಮೀಣ ಭಾಗಗಳು ಅಭಿವೃದ್ದಿ ಆಗದೆ ಹೋದರೆ ದೇಶ ಅಭಿವೃದ್ದಿ ಆಗುವುದಿಲ್ಲ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಪಡವಗೋಡು ಗ್ರಾಮದಲ್ಲಿ ಎರಡು ರಸ್ತೆಗಳು ಸಂಪೂರ್ಣ ಹಾಳಾಗಿತ್ತು. ಮನವಿ ನೀಡಿದರೂ ಸ್ಪಂದಿಸದೆ ನಿರ್ಲಕ್ಷ್ಯ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಂತ ಹಣ ಹಾಕಿ ರೈತ ಸಂಘದ ನೇತೃತ್ವದಲ್ಲಿ ರಸ್ತೆ ಅಭಿವೃದ್ದಿಯನ್ನು ಪ್ರತಿಭಟನೆ ರೂಪದಲ್ಲಿ ನಿರ್ವಹಿಸಿದೆ ಎಂದು ಹೇಳಿದರು.
ರೈತ ಸಂಘದ ಕಾರ್ಯಾಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಎಲ್ಲಾ ಪಕ್ಷಗಳು ಆಡಳಿತ ನಡೆಸಿದ್ದು ಸ್ಥಳೀಯ ಸಂಸ್ಥೆಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಯದೆ ಇರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದಿAದ ಯಾವುದೇ ಅನುದಾನ ಬರುತ್ತಿಲ್ಲ. ಇದರಿಂದ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಪಡವಗೋಡು ಗ್ರಾಮ ಪಂಚಾಯ್ತಿಯಲ್ಲಿ ಅಭಿವೃದ್ದಿ ನಿಂತ ನೀರಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಶವ ಸಾಗಿಸಲು ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಇದನ್ನು ಮನಗಂಡು ಗ್ರಾಮಸ್ಥರ ಮನವಿ ಮೇರೆಗೆ ರೈತ ಸಂಘ ಕೈಜೋಡಿಸಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ ಎಂದರು.
ಗ್ರಾಮಸ್ಥ ಮಂಜುನಾಥ ಗೌಡ ಮಾತನಾಡಿದರು. ಮೇಘರಾಜ್ ಪಡವಗೋಡು, ಅಜ್ಜಪ್ಪ ಪಡವಗೋಡು, ಸಂತೋಷ್, ಲಿಂಗರಾಜ್, ಮಹೇಶ್, ಉಮೇಶ್, ನವೀನ್, ರಾಮಚಂದ್ರ, ಶಶಿಕಲಾ, ಸುಜಾತ ಇತರರು ಹಾಜರಿದ್ದರು.