ಕೊರೋನಾ ಸ್ಮಶಾನಕ್ಕೆ ಗ್ರಾಮಸ್ಥರ ತೀವ್ರ ವಿರೋಧ: ಅಧಿಕಾರಿಗಳಿಗೆ ಘೇರಾವ್‌

By Kannadaprabha NewsFirst Published Apr 30, 2021, 7:44 AM IST
Highlights

ಕೊರೋನಾ ಸೋಂಕಿತರ ಅಂತ್ಯಕ್ರಿಯೆ ನಡೆಸಲು ಯಲಹಂಕ ಸಮೀಪದ ಮಾವಳ್ಳಿಪುರದಲ್ಲಿ ತೆರೆದ ಸ್ಮಶಾನ ನಿರ್ಮಾಣಕ್ಕೆ ಮುಂದಾದ ಬಿಬಿಎಂಪಿ| ಸ್ಥಳ ಪರಿಶೀಲನೆ ಬಂದ ಅಧಿಕಾರಿಗಳಿಗೆ ಜೊತೆ ಮಾತಿನ ಚಕಮಕಿ| ಆತಂಕದ ವಾತಾವರಣ ಸೃಷ್ಟಿ| ಪೊಲೀಸರ ಮಧ್ಯಪ್ರವೇಶ| 

ಬೆಂಗಳೂರು(ಏ.30):  ಕೊರೋನಾ ಸೋಂಕಿತರ ಮೃತದೇಹಗಳನ್ನು ಸುಡಲು ಯಲಹಂಕದ ಮಾವಳ್ಳಿಪುರದಲ್ಲಿ ತೆರೆದ ಸ್ಮಶಾನ ನಿರ್ಮಿಸುವ ಉದ್ದೇಶದಿಂದ ಗುರುವಾರ ಸದರಿ ಸ್ಥಳದ ಪರಿಶೀಲನೆಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಘೇರಾವ್‌ ಹಾಕಿದ ಘಟನೆ ಜರುಗಿತು.

ಮಾವಳ್ಳಿಪುರದಲ್ಲಿ ಪಾಲಿಕೆಗೆ ಸೇರಿದ 20 ಎಕರೆ ಜಾಗವಿದ್ದು, 2012ರ ವರೆಗೂ ಸದರಿ ಜಾಗವನ್ನು ತ್ಯಾಜ್ಯ ಭೂಭರ್ತಿಗೆ ಬಳಸಿಕೊಳ್ಳಲಾಗುತ್ತಿತ್ತು. ಬಳಿಕ ವಾಯುಮಾಲಿನ್ಯ ವಿಚಾರವಾಗಿ ನ್ಯಾಯಾಲಯವು ಸದರಿ ಜಾಗದಲ್ಲಿ ತ್ಯಾಜ್ಯ ಸುರಿಯದಂತೆ ಆದೇಶಿಸಿರುವ ಈ ಹಿನ್ನೆಲೆಯಲ್ಲಿ ಜಾಗ ಖಾಲಿ ಇತ್ತು. ನಗರದಲ್ಲಿ ಕೊರೋನಾ ಸೋಂಕಿತರ ಸಾವು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೋವಿಡ್‌ ಮೃತದೇಹಗಳ ದಹನಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಸದರಿ ಖಾಲಿ ಜಾಗದಲ್ಲಿ ಕೋವಿಡ್‌ ಮೃತದೇಹಗಳ ದಹನಕ್ಕೆ ತೆರೆದ ಸ್ಮಶಾನ ನಿರ್ಮಿಸಲು ಸದರಿ ಸ್ಥಳದ ಪರಿಶೀಲನೆಗೆ ತೆರಳಿದ್ದರು.

ಈ ವೇಳೆ ಸದರಿ ಜಾಗದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಘೇರಾವ್‌ ಹಾಕಿದರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದರು.

ಬೆಂಗಳೂರು ಸುತ್ತ 23 ಕಡೆ ಅವಕಾಶ, ಸ್ಮಶಾನದ ಪಟ್ಟಿ ಕೊಡಬೇಕಾದ ದುಸ್ಥಿತಿ!

ಪರಿಣಾಮಗಳಿಗೆ ಯಾರು ಹೊಣೆ?:

ಸದರಿ ಜಾಗದ ಸುತ್ತಮುತ್ತ 12 ಹಳ್ಳಿಗಳು ಬರುತ್ತವೆ. ಈಗಾಗಲೇ ವಾಯುಮಾಲಿನ್ಯ ದೃಷ್ಟಿಯಿಂದ ಈ ಜಾಗದಲ್ಲಿ ತ್ಯಾಜ್ಯವನ್ನು ಸುರಿಯದಂತೆ ನ್ಯಾಯಾಲಯ ಆದೇಶಿಸಿದೆ. ಇದೀಗ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಮೃತದೇಹಗಳನ್ನು ಇಲ್ಲಿ ದಹನ ಮಾಡುವುದರಿಂದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತದೆ. ಅದರಲ್ಲೂ ಕೋವಿಡ್‌ ಸೋಂಕಿತರ ಮೃತದೇಹ ದಹನದಿಂದ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿ ಗ್ರಾಮಸ್ಥರಿಗೂ ಸೋಂಕು ಹರಡಲೂಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಸ್ಮಶಾನ ನಿರ್ಮಾಣ ಮಾಡಬಾರದು ಎಂದು ಸ್ಥಳೀಯರು ಒತ್ತಾಯಿಸಿದರು.

ಮನವೊಲಿಕೆಗೆ ಬಗ್ಗದ ಗ್ರಾಮಸ್ಥರು:

ಇದಕ್ಕೆ ಅಧಿಕಾರಿಗಳು, ಇಲ್ಲಿ ಹೆಚ್ಚುವರಿ ಸ್ಮಶಾನ ನಿರ್ಮಿಸುತ್ತೇವೆ. ಸದ್ಯಕ್ಕೆ ಕೊರೋನಾ ಸೋಂಕಿತರ ಮೃತದೇಹಗಳ ದಹನಕ್ಕೆ ಪಾಲಿಕೆಯ ಹಾಲಿ ಚಿತಾಗಾರಗಳೇ ಸಾಕಾಗುತ್ತವೆ. ಒಂದು ವೇಳೆ ಈ ಚಿತಾಗಾರಗಳಿಗೆ ಒತ್ತಡ ಹೆಚ್ಚಾದರೆ ಮಾತ್ರ ಅಂತ್ಯಕ್ರಿಯೆಗೆ ಈ ಸ್ಮಶಾನ ಬಳಸಿಕೊಳ್ಳಲಾಗುವುದು. ಇನ್ನು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಅಂತ್ಯಕ್ರಿಯೆ ಕಾರ್ಯ ನೆವೇರಿಸುವುದಾಗಿ ಸ್ಥಳೀಯರ ಮನವೊಲಿಸಲು ಮುಂದಾದರು. ಇದ್ಯಾವುದಕ್ಕೂ ಬಗ್ಗದ ಸ್ಥಳೀಯರು, ಸ್ಮಶಾನ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!