2ನೇ ದಿನ ವಾಹನಗಳ ಸಂಚಾರ ಹೆಚ್ಚಳ| ಪೀಣ್ಯ, ಶಿವಾಜಿನಗರ ಸೇರಿ ಹಲವೆಡೆ ಜನರ ಓಡಾಟ| ಅನೇಕ ಕಡೆ 11 ಗಂಟೆಯಾದರೂ ಅಂಗಡಿಗಳು ಓಪನ್| ಕೆಲವು ಕಡೆ ಅರ್ಧ ಬಾಗಿಲು ತೆರೆದು ಮುಲಾಜಿಲ್ಲದೆ ವ್ಯಾಪಾರ| 2ನೇ ದಿನ 1700 ವಾಹನ ಜಪ್ತಿ|
ಬೆಂಗಳೂರು(ಏ.30): ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಜನತಾ ಕರ್ಫ್ಯೂ ಒಂದೇ ದಿನಕ್ಕೆ ತಣ್ಣಗಾದಂತೆ ಕಾಣುತ್ತಿದೆ. ಎರಡನೇ ದಿನವಾದ ಗುರುವಾರ ನಗರದಲ್ಲಿ ವಾಹನಗಳ ಸಂಚಾರ, ಜನರ ಓಡಾಟ ಹೆಚ್ಚಾಗಿದ್ದು ಜನತಾ ಕರ್ಫ್ಯೂ ಇದ್ದರೂ ಇಲ್ಲದಂತಾಗಿತ್ತು.
ಕರ್ಫ್ಯೂ ಜಾರಿಯಾದ ಮೊದಲ ದಿನ ಜನತೆ ಮನೆಗಳಿಂದ ಹೊರ ಬಂದಿರಲಿಲ್ಲ. ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಆದರೆ, ಗುರುವಾರ ಬಿಎಂಟಿಸಿ ಬಸ್ ಹೊರತು ಪಡಿಸಿ ಕಾರು, ದ್ವಿಚಕ್ರ ವಾಹನ, ಆಟೋ ರಿಕ್ಷಾಗಳ ಸಂಚಾರ ಎಂದಿನಂತಿತ್ತು. ಸರ್ಕಾರ ಗಾರ್ಮೆಂಟ್ ಸೇರಿದಂತೆ ಆಯ್ದ ಉದ್ದಿಮೆಗಳ ಚಟುವಟಿಕೆ ನಡೆಸಲು ಅನುಮತಿ ನೀಡಿದೆ. ಬ್ಯಾಂಕ್, ಆರೋಗ್ಯ, ಕಂದಾಯ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವುಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ತುಸು ಹೆಚ್ಚೇ ಇತ್ತು.
undefined
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆಗೆ ಅವಕಾಶ ನೀಡಿದ್ದರೂ, ಅನೇಕ ಕಡೆ ಅದರಲ್ಲೂ ವಸತಿ ಪ್ರದೇಶಗಳಲ್ಲಿ 11 ಗಂಟೆಯಾದರೂ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಲಾಗುತ್ತಿತ್ತು. ಇನ್ನೂ ಕೆಲವರು ಅರ್ಧ ಬಾಗಿಲು ತೆರೆದು ವಹಿವಾಟು ನಡೆಸಿದರು.
ತವರು ರಾಜ್ಯಗಳಿಗೆ ತೆರಳಲು ರೈಲ್ವೆ ನಿಲ್ದಾಣದಲ್ಲೇ ಕಾರ್ಮಿಕರ ಠಿಕಾಣಿ
ಶಿವಾಜಿನಗರ, ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಜನರು ಯಾವ ಹೆದರಿಕೆ ಇಲ್ಲದೇ ಓಡಾಡುತ್ತಿದ್ದರು. ಯಲಹಂಕ, ಪೀಣ್ಯ ಸೇರಿದಂತೆ ಕೆಲ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಸಂಚರಿಸುತ್ತಿದ್ದು, ಸಿಗ್ನಲ್‌ಗಳ ಬಳಸಿ ಸಂಚಾರಿ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿನ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರ್ವೀಸ್ ರಸ್ತೆ ಯಲ್ಲಿ ಹೆಚ್ಚಿನ ಪ್ರಮಾಣದ ಲಾರಿಗಳು, ಟ್ಯಾಕ್ಸಿಗಳು ಮತ್ತು ಆಟೋಗಳು ಸಂಚರಿಸಿದವು.
ಮಾರುಕಟ್ಟೆಗಳಲ್ಲಿ ಜನ ಸಾಗರ:
ಬೆಳಗ್ಗೆ 6ರಿಂದ 10 ಗಂಟೆಯವರೆಗೂ ಮಾತ್ರ ಅಗತ್ಯ ವಸ್ತುಗಳ ವ್ಯಾಪಾರ ನಡೆಸಬೇಕು ಎಂದು ನಿಬಂರ್‍ಂಧವಿದೆ. ಆದರೆ, ನಗರದ ಬಹುತೇಕ ಮಾರುಕಟ್ಟೆಗಳಲ್ಲಿ 11 ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವದನ್ನು ಮರೆತು ವ್ಯಾಪಾರ ನಡೆಸುತ್ತಿದ್ದರು.
ಕೆ.ಆರ್.ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಶಿವಾಜಿನಗರದ ರಸೆಲ್ ಮಾರುಕಟ್ಟೆಯಲ್ಲಿ 10 ಗಂಟೆ ನಂತರವೂ ಜನ ದಟ್ಟಣೆಯಿತ್ತು. ಕೊನೆಗೆ ಪೊಲೀಸರು ಬಂದು ಎಚ್ಚರಿಸಿ ವ್ಯಾಪಾರ ಬಂದ್ ಮಾಡಿ ಜನರಿಗೆ ಮನೆಗೆ ಹೋಗುವಂತೆ ಸೂಚಿಸಿದರು.
ಬಿಕೋ ಎನ್ನುತ್ತಿದ್ದ ಮೆಜೆಸ್ಟಿಕ್:
ಬಸ್ ಸಂಚಾರವಿಲ್ಲದ ಪರಿಣಾಮ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳು ಖಾಲಿಯಾಗಿದ್ದವು. ಬೇರೆ ಬೇರೆ ಊರುಗಳಿಂದ ರೈಲಿನ ಮೂಲಕ ಬಂದ ಪ್ರಯಾಣಿಕರು ದುಬಾರಿ ದರ ತೆತ್ತು ಆಟೋ ಮೂಲಕ ಮನೆಗಳತ್ತ ಪ್ರಯಾಣ ಬೆಳೆಸಿದರು.
ಕುದುರೆ ಮೇಲೆ ಬಂದ ಯುವಕ
ನಗರದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ಸಂಬಂಧಿಕರ ಮದುವೆಗೆ ಹೋಗಲೆಂದು ಯುವಕನೋರ್ವ ಕುದುರೆಯನ್ನೇರಿ ಬಂದ ಪ್ರಸಂಗ ನಡೆಯಿತು. ಕುದುರೆ ಮೇಲೆ ಬಂದ ಯುವಕನ್ನು ತಡೆದ ಪೊಲೀಸರು ರಸ್ತೆಗಿಳಿಯಬಾರದು ಎಂಬುದು ಗೊತ್ತಿದ್ದರು ಏಕೆ ಬಂದೆ ಎಂದು ದಭಾಯಿಸಿದ್ದಾರೆ. ಈ ವೇಳೆ ಸಂಬಂಧಿಕರ ವಿವಾಹಕ್ಕೆ ಹೋಗಬೇಕು ಸರ್, ವಾಹನಗಳಿಲ್ಲ. ಬೇರೆ ದಾರಿಯಿಲ್ಲದೆ ಬಂದಿದ್ದೇನೆ ಎಂದು ವಿವರಿಸಿದ್ದಾನೆ. ಬಳಿಕ ಕುದರೆಯನ್ನು ವಶಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಅರಿತ ಪೊಲೀಸರು ಯುವಕನನ್ನು ಕಳುಹಿಸಿದ್ದಾರೆ.
ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿ
ಕರ್ಫ್ಯೂ ಹಿನ್ನೆಲೆಯಲ್ಲಿ ಶೇ.50ರಷ್ಟು ಸಿಬ್ಬಂದಿಯಿಂದ ಸೇವೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ನಿಯಮಗಳನ್ನು ಜಾರಿ ಮಾಡಿದೆ. ಆದರೆ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಕೆಲ ಗಾರ್ಮೆಂಟ್ಸ್‌ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಕರೆಸಿಕೊಂಡು ಕೆಲಸ ಮಾಡಿಸಿದ್ದಾರೆ. ಜೊತೆಗೆ, ಕೊರೋನಾ ನಿಯಂತ್ರಣಕ್ಕೆ ಯಾವುದೇ ರೀತಿಯ ನಿಯಮಗಳನ್ನು ಜಾರಿ ಮಾಡದೆ ಸೇವೆ ಮಾಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿದ್ದಾರೆ.
2ನೇ ದಿನ 1700 ವಾಹನ ಜಪ್ತಿ
ಜನತಾ ಕರ್ಫ್ಯೂ ಹೇರಿದ್ದರೂ ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 1700ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಗರದ ಎಂಟು ವಿಭಾಗದಲ್ಲಿ ಪೊಲೀಸರು ಬೆಳಗ್ಗೆ 10 ಗಂಟೆಯಿಂದ ರಾತ್ರಿ ಎಂಟು ಗಂಟೆವರೆಗೆ ಈ ವಾಹನಗಳನ್ನು ಜಪ್ತಿ ಮಾಡಲಾಗಿದೆ. 1530 ದ್ವಿಚಕ್ರ ವಾಹನ, 80 ತ್ರಿಚಕ್ರ ಹಾಗೂ 97 ನಾಲ್ಕು ಚಕ್ರ ವಾಹನ ಸೇರಿ ಒಟ್ಟು 1707 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona