
ಧಾರವಾಡ: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮಕ್ಕಳು, ವೃದ್ಧರು ಸೇರಿ 15ಕ್ಕೂ ಅಧಿಕ ಜನರ ಮೇಲೆ ಹುಚ್ಚುನಾಯಿ ದಾಳಿ ಮಾಡಿ ಗಾಯಗೊಳಿಸಿದ್ದು ಹುಚ್ಚುನಾಯಿಯನ್ನು ಸೋಮವಾರ ಜನರೇ ಅದನ್ನು ಹೊಡೆದು ಕೊಂದು ಹಾಕಿದ್ದಾರೆ.
ಭಾನುವಾರ ರಾತ್ರಿ ಕಾಣಿಸಿಕೊಂಡ ಹುಚ್ಚು ನಾಯಿ, ಪಾದಚಾರಿಗಳು, ಮನೆ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ಎಗರಿದೆ. ಮನಬಂದಂತೆ ಕಚ್ಚಿದೆ. ಒಂದೇ ರಾತ್ರಿ ನಾಯಿಯ ಉಪಟಳ ವಿಪರೀತವಾಗಿದೆ. ಹೀಗೆ ದಾಳಿ ಮಾಡುತ್ತಿದ್ದ ನಾಯಿಯನ್ನು ಭಾನುವಾರ ರಾತ್ರಿ ಹೆದರಿಸಿ ಸಾರ್ವಜನಿಕರೇ ಓಡಿಸಿದ್ದಾರೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಬೆಳಗ್ಗೆ ಗ್ರಾಮದಲ್ಲಿ ಸಂಚರಿಸುತ್ತಿದ್ದ ಮಹಿಳೆಯೋರ್ವಳ ಮೇಲೆ ಮತ್ತೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.
ನಾಯಿ ದಾಳಿಯಿಂದ ಹಲವರಿಗೆ ಕೈ, ಕಾಲು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ. ಗಾಯಗೊಂಡವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಕೆಲವರನ್ನು ಹುಬ್ಬಳ್ಳಿ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಪಾಯವಿಲ್ಲ ಎಂದು ವೈದ್ಯಾಧಿಕಾರಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಹುಚ್ಚುನಾಯಿ ಬಂದಿದೆ ಎಂಬ ಮಾಹಿತಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮನೆಯಿಂದ ಮಕ್ಕಳನ್ನು ಹೊರಗೆ ಬಿಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಸೋಮವಾರ ಗ್ರಾಮಸ್ಥರೇ ನಾಯಿಯನ್ನು ಬೆನ್ನತ್ತಿ ಹೊಡೆದು ಕೊಂದಿದ್ದಾರೆ.
ಗ್ರಾಮದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಚಿಕನ್ ಸೆಂಟರ್‌ಗಳೇ ಕಾರಣ. ಮಾಂಸದ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುತ್ತಿದ್ದು ಅದನ್ನು ತಿನ್ನುವ ನಾಯಿಗಳು ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನದ ಸುತ್ತಮುತ್ತನಲ್ಲಿ ಬೀಡುಬಿಟ್ಟಿವೆ ಎಂದು ಗ್ರಾಮಸ್ಥ ಅರುಣ ತಾಳಿಕೋಟಿ ಆರೋಪಿಸಿದ್ದಾರೆ. ಚಿಕನ್ ಅಂಗಡಿ ತೆರುವುಗಳಿಸಿ ಬೇರೆಡೆ ಸ್ಥಳಾಂತರಿಸಬೇಕು. ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ತೆರಳಲು ಹಾಗೂ ಪಕ್ಕದಲ್ಲಿ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ಭಯಮುಕ್ತರಾಗಿ ಶಾಲೆಗೆ ಹೋಗಲು ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥ ಅಶೋಕ ರಜಪೂತ ಹೇಳಿದರು.