ಕಲಾದಗಿ ಗ್ರಾಮ ಹಾಗೂ ಗದ್ದನಕೇರಿ ತಾಂಡಾ ಗ್ರಾಮಕ್ಕೆ ಹೊರ ರಾಜ್ಯದಿಂದ ಬಂದವರನ್ನು ಖಜ್ಜಿಡೋಣಿ ಗ್ರಾಮದಲ್ಲಿ ಕ್ವಾರೈಂಟೈನ್ ಮಾಡಿದ್ದಕ್ಕೆ ವಿರೋಧ| ಹೆದ್ದಾರಿ ರಸ್ತೆಗೆ ಮುಳ್ಳು ಕಂಟಿ ಹಚ್ಚಿ ಪ್ರತಿಭಟಣೆ ನಡೆಸಿದ ಗ್ರಾಮಸ್ಥರು| ಕಲಾದಗಿಗೆ ಮಹಾರಾಷ್ಟ್ರದಿಂದ ಓರ್ವ ಹಾಗೂ ಕೊಯಮುತ್ತೂರನಿಂದ ಓರ್ವ ವ್ಯಕ್ತಿ ಆಗಮಿಸಿದ್ದ ಇವರಿಬ್ಬರನ್ನೂ ಗ್ರಾಮದ ಉರ್ದು ಶಾಲೆಯಲ್ಲಿ ಕ್ವಾರೈಂಟೈನ್ ಇರಿಸಲಾಗಿದೆ|
ಬಾಗಲಕೋಟೆ(ಮೇ.14): ಹೊರ ರಾಜ್ಯದಿಂದ ಆಗಮಿಸಿದ ಬೇರೆ ಗ್ರಾಮಗಳ ಜನರನ್ನು ಬಾಗಲಕೋಟೆ ತಾಲೂಕಾಡಳಿತ ಖಜ್ಜಿಡೋಣಿ ಗ್ರಾಮದ ಹಾಸ್ಟೇಲ್‌ನಲ್ಲಿ ಕ್ವಾರೈಂಟೈನ್ ಮಾಡಲು ಮುಂದಾಗಿದ್ದ ಕ್ರಮವನ್ನು ವಿರೋಧಿಸಿ ಹೆದ್ದಾರಿ ರಸ್ತೆ ತಡೆ ನಡೆಸಿದ ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಹೊರ ರಾಜ್ಯದಿಂದ ತಮ್ಮ ಗ್ರಾಮಗಳತ್ತ ಜನರು ಆಗಮಿಸುತ್ತಿದ್ದು ಅಂತವರನ್ನು ಕ್ವಾರೈಂಟೈನ್ ಮಾಡಲಾಗುತ್ತಿದೆ. ಕಲಾದಗಿ ಗ್ರಾಮದ ಇಬ್ಬರು ವ್ಯಕ್ತಿ, ಮುಚಖಂಡಿ ಗ್ರಾಮದ ಓರ್ವರನ್ನು ಸೋಮವಾರ ರಾತ್ರಿ ಗ್ರಾಮದ ಹಾಸ್ಟೇಲ್‌ನಲ್ಲಿ ಕ್ವಾರೈಂಟೈನ್‌ಗೆ ತಂದು ಬಿಡಲಾಗಿತ್ತು. ಕಲಾದಗಿ ಗ್ರಾಮ ಹಾಗೂ ಗದ್ದನಕೇರಿ ತಾಂಡಾ ಗ್ರಾಮಕ್ಕೆ ಹೊರ ರಾಜ್ಯದಿಂದ ಬಂದವರನ್ನು ಖಜ್ಜಿಡೋಣಿ ಗ್ರಾಮದಲ್ಲಿ ಕ್ವಾರೈಂಟೈನ್ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಬೆಳಗ್ಗೆ 9 ಗಂಟೆಗೆ ಹೆದ್ದಾರಿ ರಸ್ತೆಗೆ ಮುಳ್ಳು ಕಂಟಿ ಹಚ್ಚಿ ಪ್ರತಿಭಟಣೆ ನಡೆಸಿದರು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೊರೋನಾ ಕಾಟ: ಬಾಗಲಕೋಟೆಗೆ ಇನ್ನೂ ತಪ್ಪದ ಅಜ್ಮೀರ್ ಆತಂಕ..!
ಸ್ಥಳಕ್ಕೆ ಆಗಮಿಸಿದ ಕಲಾದಗಿ ಪಿಎಸೈ ರವಿ ಪವಾರ ಗ್ರಾಮಸ್ಥರ ಮನ ಒಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಹಿಡಿದ ಪಟ್ಟು ಬದಲಿಸಲಿಲ್ಲ. ಕಲಾದಗಿ ವೈದ್ಯಾಧಿಕಾರಿ ಬಸುರಾಜ ಕರಿಗೌಡರ ಜನರಿಗೆ ಮನವರಿಕೆ ಮಾಡಿ ಕೊಡಲು ಪ್ರಯತ್ನಿಸಿದರೂ ಒಪ್ಪದ ಗ್ರಾಮಸ್ಥರು ನಮ್ಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಜನರನ್ನು ಇಲ್ಲಿ ಕ್ವಾರೈಂಟೈನ್ ಮಾಡಿ ಬೇರೆ ಗ್ರಾಮದವರನ್ನು ನಮ್ಮಲ್ಲಿ ಕ್ವಾರೈಂಟೈನ್ ಮಾಡುವುದು ಬೇಡ ಎಂದು ವಾಗ್ವಾದ ಮಾಡಿ ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ತಾಲೂಕಾಡಳಿತ ಬೇರೆ ಗ್ರಾಮದಿಂದ ತಂದು ಕ್ವಾರೈಂಟೈನ್ ಮಾಡಲಾಗಿದ್ದವರನ್ನು ಬೇರೆಡೆಗೆ ಕರೆದೊಯ್ಯಲಾಯಿತು. ಪೊಲೀಸರು ರಸ್ತೆಯಲ್ಲಿನ ಮುಳ್ಳು ಕಂಟಿ ತೆರವು ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಲಾಯಿತು.
ಹೊರ ರಾಜ್ಯದ ಐವರು: ಹಾಸ್ಟೇಲ್‌ನಲ್ಲಿ ಕ್ವಾರೈಂಟೈನ್
ವಲಸೆ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳಿಗೆ ವಾಪಾಸ್ ಆಗುತ್ತಿದ್ದು, ಖಜ್ಜಿಡೋಣಿ ಗ್ರಾಮ ಪಂಚಾಯತನ 4 ಗ್ರಾಮಗಳಿಗೆ ಹೊರ ರಾಜ್ಯದಿಂದ ಐದು ಜನರನ್ನು ಖಜ್ಜಿಡೋಣಿಯ ಹಾಸ್ಟೇಲ್‌ನಲ್ಲಿ ಕ್ವಾರೈಂಟೈನ್ ಮಾಡಲಾಗಿದೆ. ಖಜ್ಜಿಡೋಣಿಗೆ ಮಹಾರಾಷ್ಟ್ರದಿಂದ ಮೂವರು ಬಂದಿದ್ದು, ಉದಗಟ್ಟಿಗ್ರಾಮಕ್ಕೂ ಪುಣೆಯಿಂದ ಓರ್ವ ವ್ಯಕ್ತಿ ಬಂದಿದ್ದು, ಅಂಕಲಗಿ ಗ್ರಾಮಕ್ಕೆ ಮಹಾರಾಷ್ಟ್ರದ ಮುಂಬೈದಿಂದ ಓರ್ವ ಯುವಕ ಬಂದಿದ್ದು ಇವರೆಲ್ಲರನ್ನು ಖಜ್ಜಿಡೋಣಿಯ ಹಾಸ್ಟೇಲ್‌ನಲ್ಲಿ 14 ದಿನ ಕ್ವಾರೈಂಟೈನ್ ಮಾಡಲಾಗಿದೆ.
ಪ್ರತಿಯೊಬ್ಬ ಆರೋಗ್ಯ ತಪಾಸಣೆ ಮಾಡಲಾಗಿದೆ. ಎಲ್ಲರೂ ಆರೋಗ್ಯಯುತವಾಗಿದ್ದು ಮುನ್ನಚ್ಚರಿಕಾ ಕ್ರಮವಾಗಿ ಕ್ವಾರೈಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಪಿಡಿಒ ಎಸ್.ಬಿ.ಅಂಕೋಲೆ ತಿಳಿಸಿದ್ದಾರೆ. ಕಲಾದಗಿಗೆ ಮಹಾರಾಷ್ಟ್ರದಿಂದ ಓರ್ವ ಹಾಗೂ ಕೊಯಮುತ್ತೂರನಿಂದ ಓರ್ವ ವ್ಯಕ್ತಿ ಆಗಮಿಸಿದ್ದ ಇವರಿಬ್ಬರನ್ನೂ ಗ್ರಾಮದ ಉರ್ದು ಶಾಲೆಯಲ್ಲಿ ಕ್ವಾರೈಂಟೈನ್ ಇರಿಸಲಾಗಿದೆ. ಕೋಲಾಪುರದಿಂದ ಗದ್ದನಕೇರಿ ತಾಂಡಾಕೆ ಓರ್ವ ವ್ಯಕ್ತಿ ಬಂದಿದ್ದು ಈತನನ್ನು ಗ್ರಾಮದ ಶಾಲೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.