
ಕನಕಗಿರಿ(ಜೂ.23): ತಾಲೂಕಿನ ಕನಕಾಪುರ ಗ್ರಾಮದಲ್ಲಿ ಕುಡಿವ ನೀರಿನ ಅಭಾವ ತಲೆದೂರಿದ್ದು, ಗ್ರಾಮಸ್ಥರು ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹುಲಿಹೈದರ ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಗ್ರಾಮ ಪಂಚಾಯಿತಿಯಿಂದಲೇ ಈ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಳೆದ 2 ತಿಂಗಳಿಂದ ಈ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದ್ದರಿಂದ ಗ್ರಾಮದಲ್ಲಿ ನೀರಿನ ಅಭಾವ ಉಂಟಾಗಿದೆ. ಸಧ್ಯ ಗ್ರಾಮಸ್ಥರು ಗ್ರಾಮದ ಹೊರವಲಯದ ತೋಟಗಳಿಗೆ ತೆರಳಿ ತಳ್ಳುವ ಗಾಡಿಗಳಲ್ಲಿ ನೀರು ತರುವ ಪರಿಸ್ಥಿತಿ ಎದುರಾಗಿದೆ.
ನಿರುಪಯುಕ್ತ ನೀರಿನ ಘಟಕ:
ಗ್ರಾಮದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದೊಂದು ವರ್ಷದಿಂದ ಬಳಕೆಯಾಗದೆ ನಿರುಪಯುಕ್ತಗೊಂಡಿದೆ. ಇದರಿಂದ ಗ್ರಾಮಸ್ಥರು ಉಪ್ಪು ಮಿಶ್ರಿತ ಬೋರ್‌ವೆಲ್ ನೀರನ್ನೆ ಕುಡಿಯುತ್ತಿದ್ದಾರೆ. ನೀರಿನ ಘಟಕಕ್ಕೆ ವ್ಯಯಿಸಿದ ಲಕ್ಷಾಂತರ ರು. ಸರ್ಕಾರದ ಅನುದಾನ ಪೋಲಾಗಿದೆ ಎನ್ನುವುದು ಇಲ್ಲಿನ ಜನರ ಆರೋಪ. ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
'ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತ ಒಪ್ಪಿಕೊಂಡು ಪಕ್ಷ ಸೇರ್ಪಡೆ'
ಕನಕಾಪುರದ ಪಂಚಾಯಿತಿ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದರಿಂದ ಮೂರು ಕೊಳವೆಬಾವಿಗಳನ್ನು ಸೇರಿಸಿ ನೀರು ಪೂರೈಸಲಾಗುತ್ತಿದೆ. ಬಾಡಿಗೆಗೆ ರೈತರ ಬೋರ್‌ವೆಲ್‌ಗಳು ಸಿಗುತ್ತಿಲ್ಲ. ಹೊಸ ಬೋರ್‌ವೆಲ್ ಕೊರೆಯಿಸಿ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕವನ್ನು ಆದಷ್ಟುಬೇಗ ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ಹುಲಿಹೈದರ ಗ್ರಾಪಂ ಪಿಡಿಒ ರವೀಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಕನಕಾಪುರಕ್ಕೆ ನೀರು ಪೂರೈಸುವುದಕ್ಕಾಗಿ ಬೋರ್‌ವೆಲ್ ಕೊರೆಯಿಸಲು ಜಿಪಂ ಸಿಇಒ ಅನುಮತಿ ನೀಡಿದ್ದು, ಕೂಡಲೇ ಬೊರ್‌ವೆಲ್ ಕೊರೆಯಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸುವಂತೆ ಎಜೆನ್ಸಿಯವರಿಗೆ ಸೂಚಿಸಿದ್ದು, ಕೂಡಲೇ ದುರಸ್ತಿಗೊಳಿಸಲಾಗುವುದು ಎಂದು ಗಂಗಾವತಿ ಗ್ರಾಮೀಣ ನೀರು ಹಾಗೂ ನೈರ್ಮಲ್ಯ ವಿಭಾಗದ ಎಇಇ ಸತೀಶ್ ತಿಳಿಸಿದ್ದಾರೆ.