
ರಾಣಿಬೆನ್ನೂರು(ಜೂ.27): ಶವಸಂಸ್ಕಾರಕ್ಕೆ ಸ್ಮಶಾನ ಜಾಗೆ ಇರುವ ಹೊಲದ ಮಾಲೀಕರು ಅಡ್ಡಿಪಡಿಸಿದ್ದರಿಂದ ಮೃತಪಟ್ಟ ಮಹಿಳೆಯೊಬ್ಬರ ಸಂಬಂಧಿಕರು ಹಾಗೂ ಗ್ರಾಮಸ್ಥರು ರೊಚ್ಚಿಗೆದ್ದು ಗ್ರಾಪಂ ಕಚೇರಿ ಮುಂಭಾಗದಲ್ಲಿಯೇ ಸಂಸ್ಕಾರಕ್ಕೆ ಮುಂದಾದ ಘಟನೆ ಶನಿವಾರ ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹನುಮವ್ವ ಸುಭಾಸಪ್ಪ ಅಣ್ಣೀಗೆರಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಆಕೆಯ ಸಂಬಂಧಿಕರು ಗ್ರಾಮದ ರಿ.ಸ.ನಂ. 225ರ ಎರಡು ಎಕರೆ ಸ್ಮಶಾನ ಜಾಗೆಯಲ್ಲಿ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡುತ್ತಿದ್ದರು. ಆಗ ಗ್ರಾಮದವರೇ ಆದ ವಿರೂಪಾಕ್ಷಪ್ಪ ಹೊಳಿಯಪ್ಪ ಮೇಲ್ಮೂರಿ ಎಂಬುವರು ಸ್ಮಶಾನ ಜಾಗೆ ತಮ್ಮದು ಎಂದು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರು. ಆಗ ಮೃತಳ ಸಂಬಂಧಿಕರು ಹಾಗೂ ಗ್ರಾಮಸ್ಥರು ಶವವನ್ನು ಗ್ರಾಪಂ ಕಚೇರಿ ಮುಂಭಾಗಕ್ಕೆ ತಂದಿರಿಸಿ ಅಲ್ಲಿಯೇ ದಹನ ಮಾಡಲು ಮುಂದಾದರು. ವಿಷಯ ಅರಿವಿಗೆ ಬರುತ್ತಿದ್ದಂತೆಯೇ ಮೆಡ್ಲೇರಿ ಭಾಗದ ಉಪ ತಹಸೀಲ್ದಾರ್ ಶಾಮ ಗೊರವರ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ವಿರೂಪಾಕ್ಷಪ್ಪ ಹಾಗೂ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.
ರಾಣೆಬೆನ್ನೂರು: ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿಯೂ ಸಾವು
ನೂರಾರು ವರ್ಷಗಳಿಂದ ರಿ.ಸ.ನಂ. 225ರಲ್ಲಿಯೇ ಶವ ಸಂಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಆದ್ದರಿಂದ ಸದ್ಯ ಅಲ್ಲಿಯೇ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಸ್ಮಶಾನ ಜಾಗೆಗೆ ಸಂಬಂಧಿಸಿದಂತೆ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರಿಂದ ಸ್ಮಶಾನ ಜಾಗೆಯಲ್ಲಿ ಶವ ಸಂಸ್ಕಾರ ನಡೆಸಲಾಯಿತು.
ಗ್ರಾಮೀಣ ಪಿಎಸ್‌ಐ ವಸಂತ, ಕಂದಾಯ ವೃತ್ತ ನಿರೀಕ್ಷಕ ವಾಗೀಶ ಮಳೇಮಠ, ಪಿಡಿಒ ರಂಗಪ್ಪ ಕೊರಕಲಿ, ಗ್ರಾಮಲೆಕ್ಕಾಧಿಕಾರಿ ಚೇತನಾಕುಮಾರಿ, ಗ್ರಾಪಂ ಅಧ್ಯಕ್ಷ ಬಸವರಾಜ ಮೇಲ್ಮುರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.