ಲಾಕ್‌ಡೌನ್‌ ನಿಯಮ ಪಾಲಿಸಲು ಹೇಳಿದ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ

Kannadaprabha News   | Asianet News
Published : Apr 16, 2020, 08:42 AM IST
ಲಾಕ್‌ಡೌನ್‌ ನಿಯಮ ಪಾಲಿಸಲು ಹೇಳಿದ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ

ಸಾರಾಂಶ

ಐವರು ಪೊಲೀಸ್‌ ಸಿಬ್ಬಂದಿ, ಒಬ್ಬ ಗೃಹರಕ್ಷಕ ದಳದ ಸಿಬ್ಬಂದಿಗೆ ಗಾಯ| ಹಾವೇರಿ ಜಿಲ್ಲೆ ಸವಣೂರಿನಲ್ಲಿ ರಾತ್ರಿ ನಡೆದ ಘಟನೆ, ಉದ್ವಿಗ್ನ ಸ್ಥಿತಿ|ಸ್ಥಳದಲ್ಲಿ ಬಿಗಿಭದ್ರತೆ, ಮಹಿಳೆ ಸೇರಿ ಒಂದೇ ಕೋಮಿನ 10 ಮಂದಿ ಸೆರೆ|ಮೊಕ್ಕಾಂ ಹೂಡಿದ ಹಿರಿಯ ಪೊಲೀಸ್‌ ಅಧಿಕಾರಿಗಳು|

ಹಾವೇರಿ/ಸವಣೂರು(ಏ.16): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ದಿವಾದ ಹೇಳಿದ್ದಕ್ಕೆ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಐವರು ಪೊಲೀಸರು ಸೇರಿ ಆರು ಮಂದಿ ಗಾಯಗೊಂಡಿದ್ದು, ಈ ಸಂಬಂಧ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಮನೆಯ ಎದುರು ಗುಂಪಾಗಿ ಕೂತಿದ್ದ ಒಂದೇ ಕೋಮಿನ 50ಕ್ಕೂ ಹೆಚ್ಚು ಮಂದಿಗೆ ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಒಳಕ್ಕೆ ಹೋಗಿ ಎಂದು ಬುದ್ದಿವಾದ ಹೇಳಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಐವರು ಪೊಲೀಸರಲ್ಲದೆ, ಒಬ್ಬ ಗೃಹ ರಕ್ಷಕ ದಳದ ಸಿಬ್ಬಂದಿಗೂ ಗಾಯಗಳಾಗಿವೆ. ಆರೂ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಆಗಿದ್ದೇನು?: 

ತಾಪಂ ಇಒ ಮುನಿಯಪ್ಪ ಅವರು ರಾತ್ರಿ 8 ಗಂಟೆ ಸುಮಾರಿಗೆ ಮೂವರು ಪೊಲೀಸರು, ಒಬ್ಬ ಗೃಹ ರಕ್ಷಕ ದಳದ ಸಿಬ್ಬಂದಿಯೊಂದಿಗೆ ತೆಗ್ಗಿಹಳ್ಳಿ ಗ್ರಾಮಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ರಸ್ತೆ ಪಕ್ಕದಲ್ಲಿ ಗುಂಪು ಗುಂಪಾಗಿ ಜನ ಸೇರಿದ್ದನ್ನು ಕಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಿಳಿಹೇಳಿದ್ದಾರೆ. ಜಿಲ್ಲಾದ್ಯಂತ 144 ಸೆಕ್ಷನ್‌ ಜಾರಿಯಲ್ಲಿದ್ದು, 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಮನೆಯೊಳಗೆ ಹೋಗಿ ಎಂದು ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೆರಳಿದ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಒಂದೇ ಕುಟುಂಬದ ಆರಕ್ಕೂ ಹೆಚ್ಚು ಮಂದಿ ಹಲ್ಲೆಗೂ ಯತ್ನಿಸಿದ್ದಾರೆ.

ತಕ್ಷಣ ಮಾಹಿತಿ ಪಡೆದ ಸವಣೂರು ಸವಣೂರು ಸಿಪಿಐ ಶಶಿಧರ ಅವರು ಮತ್ತಷ್ಟು ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಯಾಕೆ ಗಲಾಟೆ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ಇನ್ಸ್‌ಪೆಕ್ಟರ್‌ ಸೇರಿ ಎಲ್ಲ ಪೊಲೀಸರ ಮೇಲೂ ಗುಂಪು ಏಕಾಏಕಿಯಾಗಿ ಮುಗಿಬಿದ್ದು ಹಲ್ಲೆ ನಡೆಸಿದೆ. ಈ ವೇಳೆ ಪೊಲೀಸರ ಮರ್ಮಾಂಗ, ಕೈ, ತಲೆ ಸೇರಿದಂತೆ ಎಲ್ಲೆಂದರಲ್ಲಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಹಿಳೆ ಸೇರಿ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸ್‌ ಪಡೆ ರವಾನಿಸಲಾಗಿದ್ದು, ಹಿರಿಯ ಪೊಲೀಸ್‌ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಗಾಯಗೊಂಡ ಪೊಲೀಸರನ್ನು ಸವಣೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
 

PREV
click me!

Recommended Stories

ಮಾಜಿ ಪ್ರೇಯಸಿ ಬರ್ತಿದ್ದಂತೆ ನವ ವಧು-ವರರು ಎಸ್ಕೇಪ್; ನಾನು ಇವನನ್ನೇ ಮದುವೆಯಾಗಬೇಕು ಎಂದು ರಂಪಾಟ!
ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್