ಹಳ್ಳಿಗಳಲ್ಲಿ ಕೊರೋನಾ ಟೆಸ್ಟ್‌ ಮಾಡಿಸಲು ಹಿಂಜರಿಕೆ

By Kannadaprabha NewsFirst Published May 20, 2021, 8:37 AM IST
Highlights

* ಗ್ರಾಮೀಣದಲ್ಲಿ ಸಾಯುವವರ ಸಂಖ್ಯೆ ಜಾಸ್ತಿ
* ಗ್ರಾಮೀಣ ಪ್ರದೇಶದಲ್ಲಿ ಸಾಯುವವರ ಲೆಕ್ಕವೇ ಸಿಗುತ್ತಿಲ್ಲ
* ಜನಜಾಗೃತಿ ಮಾಡಿಸಿ- ಪ್ರಜ್ಞಾವಂತರ ಒತ್ತಾಯ
 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.20): ಭಾಳ ಗಟ್ಟಿಮುಟ್ಟಿ ಇದ್ದರ್ರಿ.. ಎರಡು ದಿನಾ ಅದೇನಾಯ್ತು ಏನೋ ಜ್ವರಾ ಅಂತ ಮಲಗಿಕೊಂಡ ನೋಡ್ರಿ.. ಆಮೇಲೆ ಮೇಲೇಳಲೇ ಇಲ್ಲ. ಶಿವನಪಾದ ಸೇರಿಕೊಂಡ! ಸ್ವಲ್ಪ ಮೈ ಕೈ ನೋವು ಅಂತ ಇದ್ದ. ಅದೇನಾಯ್ತು ನಿನ್ನೆ ರಾತ್ರಿ ಸಿರಿಯಸ್‌ ಆದ. ಆಸ್ಪತ್ರೆಗೆ ಕರಕೊಂಡು ಹೋಗಬೇಕೆನ್ನುವಷ್ಟರಲ್ಲೇ ರಸ್ತೆಯೊಳಗೆ ಕೊನೆಯುಸಿರೆಳೆದ. ಹುಡುಗಿ ನಿಶ್ಚಯ ಮಾಡಿದ್ದೀವಿ. ಇನ್ನೊಂದು ತಿಂಗಳಾದಾಗ ಮದುವೆ ಮಾಡಬೇಕ ಅಂದುಕೊಂಡಿದ್ದೀವಿ. ಆದ್ರ ಅಷ್ಟರೊಳಗ ಅವ್ನ ಹೋಗಿಬಿಟ್ಟನೋಡ್ರಿ. ಯಾಕ ಸತ್ತ ಅನ್ನೊಂದು ತಿಳಿವಲ್ತು..!

ಇದು ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕೇಳಿ ಬರುತ್ತಿರುವ ಸಾವಿನ ಸುದ್ದಿಗಳು. ಅವರಿಗೇನು ಕೊರೋನಾ ಆಗಿತ್ತಾ ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ಅವರು ಟೆಸ್ಟ್‌ ಮಾಡಿಸಿರಲಿಲ್ಲ. ಎರಡೇ ದಿನದಲ್ಲಿ ಸಾವನ್ನಪ್ಪಿದರು. ಇದನ್ನೆಲ್ಲ ಕೇಳಿದರೆ ಇವರು ಕೊರೋನಾದಿಂದ ಮೃತಪಟ್ಟವರು ಎಂದು ಹೇಳಲು ಬರಲ್ಲ. ಏಕೆಂದರೆ ಕೊರೋನಾ ಟೆಸ್ಟ್‌ ಮಾಡಿಸಿರಲಿಲ್ಲ. ಆದರೆ ಕೊರೋನಾ ಲಕ್ಷಣಗಳಿಂದ ಅಸು ನೀಗಿದವರು ಎಂಬುದು ಮಾತ್ರ ದಿಟ. ಹೀಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

"

ಒಂದೆಡೆ ಕೊರೋನಾದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ಇತರೆ ಕಾರಣಗಳಿಂದ ಮರಣ ಹೊಂದುವವರ ಸಂಖ್ಯೆಯೂ ಇದೇ ಮಾದರಿಯಲ್ಲಿ ಏರಿಕೆಯಾಗುತ್ತಿರುವುದು ಗ್ರಾಮೀಣ ಪ್ರದೇಶದಲ್ಲಿ ತಲ್ಲಣವನ್ನುಂಟು ಮಾಡುತ್ತಿದೆ. ಮಿಶ್ರಿಕೋಟಿ ಎಂಬ ಗ್ರಾಮದಲ್ಲಿ ಕಳೆದ 17 ದಿನಗಳಲ್ಲಿ ಬರೋಬ್ಬರಿ 22 ಜನ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರಲ್ಲಿ 7 ಜನ ಕೊರೋನಾದಿಂದ ಎಂದು ದೃಢವಾಗಿದ್ದರೆ, ಇನ್ನುಳಿದ 15 ಜನ ಅನ್ಯಕಾರಣಗಳಿಂದ ಮೃತಪಟ್ಟಿದ್ದಾರೆ. ಇನ್ನೂ ನವಲೂರು ಗ್ರಾಮದಲ್ಲೂ 20 ದಿನಗಳ ಆಸುಪಾಸಿನಲ್ಲಿ ಒಟ್ಟು 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದು ಬರೀ ಎರಡು ಗ್ರಾಮಗಳ ಕಥೆಯಷ್ಟೇ ಅಲ್ಲ. ಇಡೀ ಜಿಲ್ಲೆಯ ಹಳ್ಳಿಗಳ ಪರಿಸ್ಥಿತಿ ಇದೆ. ಹಳ್ಳಿಗಳಲ್ಲಿ ದಿನಂಪ್ರತಿ ಸಾಯುವವರ ಸಂಖ್ಯೆ ಹೆಚ್ಚಳಲಾಗುತ್ತಿದೆ. ಒಂದೊಂದು ಹಳ್ಳಿಗಳಲ್ಲಿ ಒಬ್ಬರಾದರೂ ಮರಣ ಹೊಂದುತ್ತಿದ್ದಾರಂತೆ. ಆದರೆ, ಯಾರಿಗೂ ಹೇಳದೇ ಕೇಳದೇ ದಫನ್‌ ಮಾಡುವ ಕಾರ್ಯವೂ ಅಲ್ಲಿಂದ ಅಲ್ಲಿಗೆ ನಡೆಯುತ್ತಿದೆ.

ಧಾರವಾಡದಲ್ಲಿ ಕಾಣ್ತಿಲ್ಲ ಲಾಕ್‌ಡೌನ್‌ ವಾತಾವರಣ

ಕಾರಣವೇನು?

ದುಡಿಯಲು ತೆರಳಿದ್ದ ಕಾರ್ಮಿಕರಿಗೆಲ್ಲರೂ ಇದೀಗ ಮರಳಿ ತವರಿಗೆ ಬಂದು ತಲುಪಿದ್ದಾರೆ. ಹೀಗೆ ಬಂದವರ ಪೈಕಿ ಕೆಲವರಷ್ಟೇ ಕೆಲವೊಂದಿಷ್ಟುಕ್ವಾರಂಟೈನ್‌ ಆಗಿದ್ದಾರೆ. ಕೆಲವರು ತಾವೇ ಖುದ್ದಾಗಿ ಆಸ್ಪತ್ರೆಗೆ ತೆರಳಿ ಟೆಸ್ಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಆದರೆ ಬಹುತೇಕರು, ಯಾವುದೇ ಟೆಸ್ಟ್‌ ಮಾಡಿಸಿಕೊಳ್ಳುವ ಗೋಜಿಗೂ ಹೋಗಿಲ್ಲ. ಕ್ವಾರಂಟೈನ್‌ ಅಂತೂ ದೂರದ ಮಾತು.

ಬೆಳಗ್ಗೆ ಎದ್ದ ತಕ್ಷಣ ಗುಟಕಾ, ಎಲೆ ಅಡಿಕೆ ಹಾಕಿಕೊಂಡು ಬರುತ್ತೇನೆ ಎಂದು ಹೊರಬೀಳುವವರ ಸಂಖ್ಯೆ ನಮ್ಮಲ್ಲೇನೂ ಕಮ್ಮಿಯಿಲ್ಲ. ಇದು ಯಾರಾದರೊಬ್ಬರಿಗೆ ಕೊರೋನಾ ಬಂದಿದ್ದರೂ ಅವರು ಊರೆಲ್ಲ ಹಬ್ಬಿಸುತ್ತಿದ್ದಾರೆ. ಕ್ವಾರಂಟೈನ್‌ ನಿಯಮಾವಳಿಯೇ ಪಾಲನೆಯಾಗುತ್ತಿಲ್ಲ. ಇನ್ನೂ ಜಿಲ್ಲಾಡಳಿತ, ತಾಲೂಕಾಡಳಿತ ಆಯಾ ಗ್ರಾಪಂಗಳು ಬರೀ ಧ್ವನಿವರ್ಧಕಗಳ ಮೂಲಕ ಟೆಸ್ಟ್‌ ಮಾಡಿಸಿಕೊಳ್ಳಿ, ಬೇರೆ ಊರಿಂದ ಬಂದವರು ಕ್ವಾರಂಟೈನ್‌ ಆಗಿ ಎಂದು ಜನಜಾಗೃತಿಯನ್ನೇನೋ ಮಾಡಿದರು. ಆದರೆ ಕಳೆದ ವರ್ಷದಂತೆ ಈ ವರ್ಷ ಬೇರೆ ರಾಜ್ಯ ಅಥವಾ ಊರಿಂದ ಬಂದವರನ್ನು ಹಿಡಿದು ಟೆಸ್ಟ್‌ ಮಾಡಿಸುವುದಾಗಲಿ, ಕ್ವಾರಂಟೈನ್‌ ಮಾಡುವ ಗೋಜಿಗೆ ಹೋಗಲಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶಕ್ಕೆ ಮರಳಿ ಬಂದವರೆಲ್ಲರೂ ಬೇಕಾಬಿಟ್ಟಿಯಾಗಿ ಓಡಾಡಿದರು. ಇದರ ಪರಿಣಾಮ ಇಡೀ ಊರೆಲ್ಲ ಹಬ್ಬುತ್ತಿದೆ.

ಟೆಸ್ಟ್‌ಗೆ ಹಿಂಜರಿಕೆ:

ಹೀಗೆ ಹಳ್ಳಿ ಹಳ್ಳಿಗಳಿಗೆ ಕೊರೋನಾ ಹಬ್ಬುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ತಾವಾಗಿಯೇ ಟೆಸ್ಟ್‌ ಮಾಡಿಸಿಕೊಳ್ಳಲು ಮಾತ್ರ ಜನತೆ ಮುಂದೆ ಬರುತ್ತಿಲ್ಲ. ನೆಗಡಿ, ಕೆಮ್ಮು, ಜ್ವರ, ಮೈ ಕೈ ನೋವು ಕಾಣಿಸಿಕೊಂಡರೂ ಇದು ಕೊರೋನಾ ಅಲ್ಲ ಎಂಬ ನಿರ್ಲಕ್ಷ್ಯ ಭಾವನೆ ತಾಳುತ್ತಿದ್ದಾರೆ. ಎಲ್ಲಿ ಟೆಸ್ಟ್‌ ಮಾಡಿಸಿಕೊಳ್ಳಲು ಹೋದರೆ ಕೊರೋನಾ ಪಾಸಿಟಿವ್‌ ಬಂದಿದೆ ಎಂದು ಹೇಳಿ ಬಿಡುತ್ತಾರೋ ಎಂಬ ಭೀತಿ ಎಲ್ಲರಲ್ಲೂ ಮನೆ ಮಾಡಿದೆ. ಈ ಬಗ್ಗೆ ಕೇಳಿದರೆ ಎಲ್ಲಿ ಸಾರ್‌, ಟೆಸ್ಟ್‌ ಮಾಡಿಸೋಕೆ ಹೋದರೆ ಕೊರೋನಾ ಪಾಸಿಟಿವ್‌ ಎಂದರೆ ಏನು ಮಾಡೋದು? ಮರಳಿ ವಾಪಸ್‌ ಬರುತ್ತೇವೆ ಎಂಬ ನಂಬಿಕೆ ಕೂಡ ಇಲ್ಲ. ಅದಕ್ಕೆ ಟೆಸ್ಟ್‌ ಮಾಡಿಸಿಕೊಳ್ಳೊಕೆ ಹೋಗುತ್ತಿಲ್ಲ ಎಂದು ಹೇಳುವುದು ಮಾಮೂಲಿಯಾಗಿದೆ. ಇದರ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಆಗಾಗ ಮರಣ ಹೊಂದುತ್ತಿದ್ದರೂ ಅದರ ಲೆಕ್ಕ ಸರ್ಕಾರಕ್ಕೆ ಸಿಗುತ್ತಲೇ ಇಲ್ಲ.

ಜನಜಾಗೃತಿ ಮೂಡಿಸಿ:

ಗ್ರಾಪಂ ಮಟ್ಟದಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಮಾಡಬೇಕು. ವಲಸೆ ಬಂದವರು ಸರಿಯಾಗಿ ಕ್ವಾರಂಟೈನ್‌ ಆಗುತ್ತಿದ್ದಾರೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಗ್ರಾಮಮಟ್ಟದಲ್ಲಿ ರಾರ‍ಯಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಿಸಬೇಕು. ಪಾಸಿಟಿವ್‌ ಬಂದಿದ್ದರೆ ಅವರ ಆತ್ಮಸ್ಥೈರ್ಯ ಹೆಚ್ಚಿಸಿ ಗ್ರಾಮದಲ್ಲೇ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಇದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಬೇಕು ಎಂಬ ಒಕ್ಕೊರಲಿನ ಆಗ್ರಹ ಪ್ರಜ್ಞಾವಂತರದ್ದು.

ಹೌದು, ಗ್ರಾಮೀಣ ಪ್ರದೇಶದಲ್ಲಿ ಸಾಯುವವರ ಸಂಖ್ಯೆ ತೀರಾ ಹೆಚ್ಚಾಗುತ್ತಿದೆ. ಇದು ಕೊರೋನಾದಿಂದ ಆಗುತ್ತಿದೆಯೋ? ಅನ್ಯ ಕಾರಣಗಳಿಂದ ಸಾಯುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿ ಕಾರ್ಯಗಳಾಗುತ್ತಿಲ್ಲ. ಅಲ್ಲಿ ವೈದ್ಯಕೀಯ ಸೌಲಭ್ಯಗಳೂ ಅಷ್ಟೊಂದಿಲ್ಲ. ಮೊದಲು ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರ ಟೆಸ್ಟ್‌ ಮಾಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ನಾಗರಾಜ ಛಬ್ಬಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!