* ಮುಖ್ಯಮಂತ್ರಿಗೆ ಸಚಿವರ ಮೇಲೆ ವಿಶ್ವಾಸವಿಲ್ಲದಂತಾಗಿದೆ
* ಪಿಎಂ ಕೇರ್ ವೆಂಟಿಲೇಟರ್‌ಗಳಲ್ಲಿ ಕೆಲವು ಕಂಪನಿ ನೀಡಿರುವ ವೆಂಟಿಲೇಟರ್‌ಗಳು ಸರಿಯಾಗಿಲ್ಲ
* ವೆಂಟಿಲೇಟರ್ ಡಬ್ಬಿಗಳು ಜನರನ್ನು ಕೊಲ್ಲುವ ಡಬ್ಬಿಯಾಗಿವೆ
ಗದಗ(ಮೇ.20): ಸರ್ಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್‌ಫಾಸ್ವ್‌ಗೂ ಆಗಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್.ಕೆ. ಪಾಟೀಲ ಹೇಳಿದ್ದಾರೆ.
undefined
ಸರ್ಕಾರದ ಆರ್ಥಿಕ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಟೀಕೆ ಬಂದಿವೆಯಂತಲ್ಲ, ವ್ಯವಹಾರಿಕವಾಗಿ ಆಲೋಚನೆ ಮಾಡಿ. ಒಂದು ಕಲಾ ತಂಡಕ್ಕೆ 3 ಸಾವಿರ ನೀಡುತ್ತಿದ್ದು, ಇದು ಯಾರಿಗೆ ಸಾಲುತ್ತದೆ. ತಕ್ಷಣವೇ ಬಡವರಿಗೆ ಸದ್ಯ ಘೋಷಿಸಿರುವುದಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಕೊಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್ ವಿಚಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆಯೇ ಸೂಚಿಸಿದ್ದು, ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಕಡೆಗಣಿಸಿದ್ದಾರೆ. ಮುಖ್ಯಮಂತ್ರಿಗೆ ಸಚಿವರ ಮೇಲೆ ವಿಶ್ವಾಸವಿಲ್ಲದಂತಾಗಿದೆ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರನ್ನು ತಿವಿದರು.
ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?
ಈಚೆಗೆ ಪಿಎಂ ಕೇರ್ ವೆಂಟಿಲೇಟರ್ ಡಬ್ಬಾ ಎಂದು ಹೇಳಿಕೆ ನೀಡಿದ್ದ ಶಾಸಕ ಎಚ್.ಕೆ. ಪಾಟೀಲ ಅವರು ಜನರನ್ನು ಭಯ ಬೀಳಿಸುತ್ತಿದ್ದಾರೆ, ಸಿದ್ದರಾಮಯ್ಯ ಹೇಳಿಕೊಟ್ಟಂತೆ ಅವರು ಹೇಳುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ಪ್ರತಿಕ್ರಿಯಿಸಿದ್ದರು. ಇದಕ್ಕೆ ಮರು ಪ್ರತಿಕ್ರಿಯೆ ನೀಡಿರುವ ಎಚ್.ಕೆ. ಪಾಟೀಲ್, ಸಿ.ಸಿ. ಪಾಟೀಲ ಅವರು ನನ್ನನ್ನು ಅರ್ಥ ಮಾಡಿಕೊಂಡಿಲ್ಲ. ನೀವು ಯಡಿಯೂರಪ್ಪ ಹೇಳಿಕೊಟ್ಟಿದ್ದನ್ನೇ ಉತ್ತರ ಕೊಡುತ್ತೀರಾ ಎಂದು ಸಿ.ಸಿ. ಪಾಟೀಲ ಅವರನ್ನು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಅಡಿ ವಿಚಾರಣೆ ನಡೆಯಲಿ...
ಪಿಎಂ ಕೇರ್ ವೆಂಟಿಲೇಟರ್‌ಗಳಲ್ಲಿ ಕೆಲವು ಕಂಪನಿ ನೀಡಿರುವ ವೆಂಟಿಲೇಟರ್‌ಗಳು ಸರಿಯಾಗಿಲ್ಲ. ಮಹಾರಾಷ್ಟ್ರದಲ್ಲೂ ಕೆಲವು ವೆಂಟಿಲೇಟರ್ ಸರಿಯಾಗಿರಲಿಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ವೆಂಟಿಲೇಟರ್ ಆಡಿಟ್ ಮಾಡಬೇಕು ಎಂದು ಹೇಳಿದ್ದನ್ನು ಬಿಜೆಪಿ ನಾಯಕರು ಮರೆತಂತಿದೆ. ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ವೆಂಟಿಲೇಟರ್‌ನಿಂದ ಜೀವ ಉಳಿಸುವ ಕಾರ್ಯವಾಗಬೇಕಾಗಿತ್ತು. ಆದರೆ, ಈ ಡಬ್ಬಿಗಳು ಜನರನ್ನು ಕೊಲ್ಲುವ ಡಬ್ಬಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಚ್.ಕೆ. ಪಾಟೀಲ, ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ಮುಖಾಂತರ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona