ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯ ಹಾಗೂ ಪಿಡಿಓ ನಡುವೆ ಶನಿವಾರ ಮಾರಾಮಾರಿ ನಡೆದಿದೆ. ಗ್ರಾಪಂ ಸದಸ್ಯರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಖಂಡಿಸಿ ವಿಧಾನ ಪರಿಷತ್ತು ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಕಡೂರು (ಅ.30) : ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯ ಹಾಗೂ ಪಿಡಿಓ ನಡುವೆ ಶನಿವಾರ ಮಾರಾಮಾರಿ ನಡೆದಿದೆ. ಗ್ರಾಪಂ ಸದಸ್ಯರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಖಂಡಿಸಿ ವಿಧಾನ ಪರಿಷತ್ತು ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಖರಾಯಪಟ್ಟಣ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಇದೇ ವೇಳೆಯಲ್ಲಿ ಕಡೂರು- ಚಿಕ್ಕಮಗಳೂರು ಮಾರ್ಗದಲ್ಲಿ ರಸ್ತೆ ತಡೆ ನಡೆಸಿದರು.
ಮಹಿಳಾ ಪಿಡಿಓಗೆ ಜೀವ ಬೆದರಿಕೆ ಹಾಕಿದ್ರಾ ಕೈ ಮುಖಂಡ ಪರಮೇಶ ಕಾಳೆ?
ಪಿಡಿಓ ಪದ್ಮಣ್ಣ ಗಾವಡೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವಸಂತಕುಮಾರ್ ನಡುವೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಾರಾಮಾರಿ ನಡೆದಿದೆ. ಕರ್ತವ್ಯನಿರತ ಸಂದರ್ಭದಲ್ಲಿ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಕಾರಣಕ್ಕಾಗಿ ವಸಂತಕುಮಾರ್ ವಿರುದ್ಧ ಪದ್ಮಣ್ಣ ಗಾವಡೆ ಅವರು ದೂರು ನೀಡುತ್ತಿದ್ದಂತೆ ಪೊಲೀಸರು ವಸಂತಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನಾಗೇನಹಳ್ಳಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಖರಾಯಪಟ್ಟಣ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ವಸಂತಕುಮಾರ್ ಮೇಲೆ ಹಲ್ಲೆ ಮಾಡಿರುವ ಪಿಡಿಓ ವಿರುದ್ಧ ಪ್ರಕರಣ ದಾಖಲು ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಸಿ, ಸುಮಾರು 1 ಗಂಟೆ ಕಾಲ ರಸ್ತೆ ತಡೆ ನಡೆಸಿದರು.
ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ವಸಂತಕುಮಾರ್ ಅವರು ಗ್ರಾಮದ ಕಾಮಗಾರಿಯ ವಿಚಾರವನ್ನು ಕೇಳಲು ಹೋದಾಗ ಪಿಡಿಒ ಏಕಾಏಕಿ ಕೈ ಮಾಡಿದ್ದಾರೆ. ವಸಂತಕುಮಾರ್ ಸಖರಾಯಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಅನಂತರ ಕಡೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಹೋಗುತ್ತಿದ್ದರು. ಆಗ ಅವರನ್ನು ತಡೆದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ACB Raid: ರೈತನಿಂದ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು
ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಗ್ರಾಪಂ ಸದಸ್ಯರಿಗೂ ರಕ್ಷಣೆæ ಇಲ್ಲ. ಕಾಂಗ್ರೆಸ್ ಸದಸ್ಯ ಎಂದು ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ. ಗೌರವಾನ್ವಿತ ಸದಸ್ಯರಿಗೆ ರಕ್ಷಣೆ ಇಲ್ಲದ ಮೇಲೆ ಜನಸಾಮಾನ್ಯರ ಗತಿಯೇನು ಎಂದು ಪೊಲೀಸರ ಮೇಲೆ ಹರಿಹಾಯ್ದರು.
ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ನಾಗರಾಜ್ ಸಮಾಧಾನಪಡಿಸಿ ಸಂಚಾರವನ್ನು ಸುಗಮಗೊಳಿಸಿ ಪ್ರತಿಭಟನಾಕಾರರ ಮನವೊಲಿಸಿದರು. ಸರ್ಕಾರಿ ಅಧಿಕಾರಿ ಮೇಲೆ ಕೈ ಮಾಡಿದ್ದಕ್ಕೆ ಕೇಸು ದಾಖಲಾಗಿದೆ. ಮುಂದಿನ ತನಿಖೆ ನಡೆಸಿ, ನ್ಯಾಯ ಒದಗಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.