ಮಕ್ಕಳನ್ನು ಹೊರಗೆ ಹಾಕಿ ಉರ್ದು ಶಾಲೆಗೆ ಬೀಗ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ; ಮನವಿ ಸಲ್ಲಿಕೆ

Published : Jun 13, 2026, 09:14 AM IST
Urdu School

ಸಾರಾಂಶ

Urdu School: ವಿಜಯಪುರ ಜಿಲ್ಲೆಯ ನಾಗೂರ ಉರ್ದು ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.  ಇದು ಶಾಲೆಯನ್ನು ಮುಚ್ಚುವ ಹುನ್ನಾರ ಎಂದು ಆರೋಪಿಸಿದ್ದಾರೆ.

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರು ಇಲ್ಲದಿರುವುದನ್ನು ಕಂಡು ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ನಾಗೂರ ಗ್ರಾಮದ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಇದರಲ್ಲಿ ಕನ್ನಡ ಬೋಧಿಸುವ ಶಿಕ್ಷಕರು ಆರು ತಿಂಗಳ ಹಿಂದೆ, ಮೇ 31ರಂದು ಉರ್ದು ಬೋಧಿಸುವ ಓರ್ವ ಶಿಕ್ಷಕರು ನಿವೃತ್ತರಾಗಿದ್ದಾರೆ. ಒಬ್ಬ ಶಿಕ್ಷಕರ ಮಗ ತೀರಿಕೊಂಡಿದ್ದ ಹಿನ್ನೆಲೆ ಮೂರು ತಿಂಗಳ ಕಾಲ ರಜೆ ಮೇಲೆ ಹೋಗಿದ್ದಾರೆ. ಶಾಲೆಯಲ್ಲಿ ಒಬ್ಬರೇ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಈ ಶಾಲೆ ಏಕೋಪಾಧ್ಯಾಯ ಶಾಲೆಯಾಗಿದೆ.

ಬಿ.ಎಲ್.ಓ ಸೇವೆಯಿಂದ ಮುಕ್ತಗೊಳಿಸುವಂತೆ ಮನವಿ ಸಲ್ಲಿಕೆ

ಓರ್ವ ಶಿಕ್ಷಕಿಯನ್ನು ಬಿ.ಎಲ್.ಓ ಆಗಿ ನೇಮಕ ಮಾಡಲಾಗಿದೆ. ಇವರನ್ನು ಬಿ.ಎಲ್.ಓ ದಿಂದ ಮುಕ್ತಗೊಳಿಸಿ ಮಕ್ಕಳಿಗೆ ಪಾಠ ಹೇಳು ಬಿಡುವಂತೆ ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಕ್ಷೇತ್ರಶಿಕ್ಷಣಾಧಿಕಾರಿ, ತಹಸೀಲ್ದಾರಗೆ ಮನವಿ ಸಲ್ಲಿಸಿದ್ದಾರೆ. ಇದರ ಕುರಿತು ಮತಕ್ಷೇತ್ರದ ಶಾಸಕರ ಗಮನಕ್ಕೂ ತರಲಾಗಿದೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. 

ಶುಕ್ರವಾರ ಬಸವನಬಾಗೇವಾಡಿಯಲ್ಲಿ ಬಿ.ಎಲ್.ಓ ತರಬೇತಿ ಇದ್ದ ಹಿನ್ನೆಲೆಯಲ್ಲಿ ಶಿಕ್ಷಕಿ ತರಬೇತಿಗೆ ಹೋಗಿದ್ದರಿಂದ ಶಾಲೆಯಲ್ಲಿ ಒಬ್ಬರೂ ಶಿಕ್ಷಕರಿಲ್ಲದ್ದಕ್ಕೆ ಬೇಸರವಾಗಿ ಶಾಲಾ ಮಕ್ಕಳನ್ನು ಹೊರಗೆ ಹಾಕಿ ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊದೀನಸಾಬ ಲೋದಿ ತಿಳಿಸಿದರು.

16 ಮಕ್ಕಳಿರುವ ಶಾಲೆ

ಒಂದರಿಂದ ಆರನೇ ತರಗತಿಯವರೆಗೆ ಶಾಲೆಯಲ್ಲಿ 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಇಲ್ಲದ್ದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಗ್ರಾಮದಲ್ಲಿ ಒಟ್ಟು ಆರು ಶಾಲೆಗಳಿದ್ದು, ಪುರುಷ ಶಿಕ್ಷಕರನ್ನು ಬಿ.ಎಲ್.ಓ. ಮಾಡದೇ ಇರುವ ಓರ್ವ ಶಿಕ್ಷಕಿಯನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಉರ್ದು ಶಾಲೆಯನ್ನು ಮುಚ್ಚುವ ಹುನ್ನಾರ ಕಂಡುಬರುತ್ತಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಂದೇನವಾಜ ವಾಲೀಕಾರ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ರಾಜು ಮುಲ್ಲಾ, ನಬೀಸಾಬ ಕೊರಬು, ಬಂದೇನವಾಜ ರಗಟಿ, ರಾಜೇಸಾಬ ಚಪ್ಪರಬಂದ, ಹಾಜಿಮಲ್ಲಂಗ ಕವಲಗಿ, ರಾಜಬೀ ವಾಲೀಕಾರ, ದಾವಲಬಿ ಮುಜಾವರ, ಹಾಜಿಮಲ್ಲಂಗ ವಾಲೀಕಾರ, ರಾಜು ಮುಜಾವರ, ಅಮೋಘಿ ಪೂಜಾರಿ ಇದ್ದರು.

ಇದನ್ನೂ ಓದಿ: ಶಾಲಾ ಆರಂಭ 15 ನಿಮಿಷ ಮುಂದೂಡಿ, ಮುಕ್ತಾಯದ ಸಮಯದಲ್ಲಿ ಬದಲಾವಣೆ ಬೇಡ; ಶಿಕ್ಷಕರ ಮನವಿ

PREV
Read more Articles on
click me!

Recommended Stories

Shivamogga: ಗ್ರಾಮಸ್ಥರೇ ಎರಡು ಕಿಲೋ ಮೀಟರ್ ರಸ್ತೆ ನಿರ್ಮಿಸಿ ವಿನೂತನ ಪ್ರತಿಭಟನೆ!
Bengaluru Rains: ಪದೇ ಪದೇ ಜಾಲವೃತಗೊಳ್ಳುವ 10 ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ