
ಹೊಸಪೇಟೆ: ಮಳೆಗಾಗಿ ದೇವರನ್ನೇ ಬೈದು ಬೇಡಿಕೊಳ್ಳುವ ವಿಶಿಷ್ಟ ಆಚರಣೆಯೊಂದು ಹೊಸಪೇಟೆಯಲ್ಲಿ ಶನಿವಾರ ನಡೆಯಿತು.
ಹೊಸಪೇಟೆಯ ಜಿಲ್ಲಾಸ್ಪತ್ರೆ ಬಳಿಯಿರುವ ಕಾಟಮಯ್ಯ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಹಾಗೂ ಗಂಗೆ ಪೂಜೆ ನೆರವೇರಿಸಲಾಯಿತು. ಮಳೆ ಬರಲಿ ಎಂಬ ಆಶಯದಿಂದ ಕಾಟಮಯ್ಯನನ್ನು ಬೈದು ದೇವರನ್ನು ಒಲಿಸಿಕೊಳ್ಳುವ ವಿಶಿಷ್ಟ ಸಂಪ್ರದಾಯವನ್ನು ಭಕ್ತರು ಆಚರಿಸಿದರು.
ಈ ವೇಳೆ ಕಾಟಮಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿ, ಹುಗ್ಗಿ, ಬದನೆಕಾಯಿ, ಅನ್ನಸಾಂಬಾರ್ ಸೇರಿದಂತೆ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಪೂಜೆ ಬಳಿಕ ನೂರಾರು ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಮಳೆ ಉತ್ತಮವಾಗಿ ಸುರಿದು ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ನಡೆದ ಈ ವಿಶಿಷ್ಟ ಆಚರಣೆ ಗಮನ ಸೆಳೆಯಿತು.
ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಡಾ. ಮಲ್ಲಿಕಾರ್ಜುನ ಮಾನ್ಪಡಿ ಅವರು ಶ್ರೀ ನುಲಿಯ ಚಂದಯ್ಯನವರ ಕುರಿತು ಮತ್ತು ಈ.ಅಶ್ವಿನಿ ಕೇಶವ ಅವರು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಿಡಿಪಿಯು ನಾಗರಾಜ್ ಹವಲ್ದಾರ್ ಮಾತನಾಡಿದರು. ಕಾನೂನು ಸಲಹೆಗಾರ ಕೆ. ಬಸವರಾಜ್, ವಕೀಲರಾದ ಕೆ. ಕಮಲಾಪುರ ಹುಲ್ಲಗಪ್ಪ, ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ. ಜಗದೀಶ, ಖಜಾಂಚಿ ಚಿತವಾಡಗಿ ಹುಲುಗಪ್ಪ, ಕಾರ್ಯದರ್ಶಿ ನಾಗೇನಹಳ್ಳಿ ಹುಲುಗಪ್ಪ ಸೇರಿದಂತೆ ಸಮಾಜದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಎಸ್.ಸಿ. ಎಸ್.ಪಿ, ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತೇಜಿಸಲು ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ ನೀಡಲಾಗುತ್ತದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿಗೆ 6 ಹಾಗೂ ಪರಿಶಿಷ್ಟ ಪಂಗಡಕ್ಕೆ 4 ಸೇರಿ ಒಟ್ಟು 10 ಗುರಿಗಳಿಗೆ ಈಗಾಗಲೇ ಅಭ್ಯರ್ಥಿಗಳ ಅರ್ಹತಾ ಪಟ್ಟಿ, ಅನರ್ಹ ಪಟ್ಟಿ, ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ಹಾಗೂ 2024-25ನೇ ಸಾಲಿನಲ್ಲಿ ಬಾಕಿ ಉಳಿದ ಪರಿಶಿಷ್ಟ ಜಾತಿಯ 4 ಗುರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಮಲಾಪುರದ ಲೋಟಸ್ ಮಹಲ್ ಹತ್ತಿರ ಇರುವ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರನ್ನು ಅಥವಾ ಕಮಲಾಪುರ ಕಚೇರಿಯ ದೂರವಾಣಿ ಸಂಖ್ಯೆ 08394295640ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.