Bengaluru: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕನಿಂದ 3.75 ಲಕ್ಷ ದೋಚಿದ ಯುವತಿ

Published : Aug 31, 2026, 06:07 AM IST
Dating App

ಸಾರಾಂಶ

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಪೂನಂ ಎಂಬ ಯುವತಿಯು, ಶೇಬಿನ್ ಬೇಬಿ ಎಂಬ ಯುವಕನನ್ನು ಪಬ್‌ಗೆ ಆಹ್ವಾನಿಸಿ ಅಪಹರಿಸಿದ್ದಾಳೆ. ನಂತರ ತನ್ನ ಸಹಚರರೊಂದಿಗೆ ಸೇರಿ ಯುವಕನಿಂದ ಸುಮಾರು ₹3.75 ಲಕ್ಷ ದೋಚಿ ಪರಾರಿಯಾಗಿದ್ದು, ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಡೇಟಿಂಗ್ ಆ್ಯಪ್‌ ಮೂಲಕ ಪರಿಚಯವಾದ ಯುವಕನನ್ನು ಅಪಹರಿಸಿರುವ ಯುವತಿಯೊಂದಿಗೆ ಇದ್ದ ದುಷ್ಕರ್ಮಿಗಳ ಗುಂಪು ಆತನಿಂದ 3.75 ಲಕ್ಷ ರು. ದೋಚಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಪಹರಣಕ್ಕೆ ಒಳಗಾದ ಚಂದಾಪುರ ನಿವಾಸಿ ಶೇಬಿನ್ ಬೇಬಿ ನೀಡಿದ ದೂರಿನ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪೂನಂ ಎಂಬ ಮಹಿಳೆ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಕೆಲವು ತಿಂಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದರು. ಆಗ ಪೂನಂ ಹೆಸರಿನ ಯುವತಿಯ ಪರಿಚಯ ಮಾಡಿಕೊಂಡಿದ್ದರು. ಇಬ್ಬರು ಪರಸ್ಪರ ಮೊಬೈಲ್ ಸಂಖ್ಯೆ ಹಂಚಿಕೊಂಡು ಮಾತುಕತೆ ಪ್ರಾರಂಭಿಸಿದ್ದರು.

ಆ.19ರಂದು ದರೋಡೆ

ಆರೋಪಿ ಯುವತಿ, ಆ.19ರಂದು ರಾತ್ರಿ 9.45ರ ವೇಳೆಗೆ ಪಬ್‌ಗೆ ಯುವಕನಿಗೆ ಬರಲು ಸೂಚಿಸಿದ್ದಳು. ಆಕೆಯ ಸೂಚನೆಯಂತೆ ಪಬ್ ಮುಂಭಾಗ ಯುವಕ ಕಾಯುತ್ತ ನಿಂತಿದ್ದ. ಆಗ ಕಾರಿನಲ್ಲಿ ಬಂದ ಯುವತಿ, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಆತನನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿದ್ದಳು.

ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದ ವೇಳೆ ಮಾರ್ಗ ಮಧ್ಯ ಮೂತ್ರ ವಿಸರ್ಜನೆ ಮಾಡಬೇಕೆಂದು ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ಆಕೆ ಕಾರಿನಿಂದ ಇಳಿದು ಕೆಳಗೆ ಹೋದಳು, ಕೆಲವೇ ನಿಮಿಷಗಳಲ್ಲಿ ನಾಲ್ವರು ಇದ್ದ ಗ್ಯಾಂಗ್‌ನವರು, ಶೇಬಿನ್ ಅವರನ್ನು ಬೆದರಿಸಿ, ಅದೇ ಕಾರಿನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲಿಂದ ಬೂದು ಬಣ್ಣದ ಬೇರೊಂದು ಕಾರಿನಲ್ಲಿ ಕೂರಿಸಿಕೊಂಡು ನಗರದ ಸುತ್ತ ಸುತ್ತಾಡಿಸಿ ಒಟ್ಟು 3.75 ಲಕ್ಷ ರು.ಹಣ ದೋಚಿದ್ದಾರೆ.

ಈ ಸಂಬಂಧ ಪೊಲೀಸರು ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‌ಗಳ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ವಂಚಕ ಜಾಲದ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.

45 ಸಾವಿರ ರು.ಡ್ರಾ ಮಾಡಿದ್ದರು

ದುಷ್ಕರ್ಮಿಗಳು, ದೂರುದಾರ ಶೇಬಿನ್ ಅವರನ್ನು ಅಪಹರಿಸಿ ನಗರದಲ್ಲಿ ಸುತ್ತಾಡುತ್ತಿದ್ದ ವೇಳೆ ಅವರ ಜೇಬಿನಲ್ಲಿದ್ದ 7 ಸಾವಿರ ನಗದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಬಳಿಕ ಮಾರ್ಗ ಮಧ್ಯೆ ಕಂಡು ಬಂದ ಎಟಿಎಂ ಬಳಿ ಕಾರು ನಿಲ್ಲಿಸಿ ಬಲವಂತವಾಗಿ 45 ಸಾವಿರ ರು.ಗಳನ್ನು ಬಿಡಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೊಲ್ ಹಾಕಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಲಕ್ಷಾಂತರ ರು. ಹಣ ವರ್ಗಾವಣೆ

ರಾತ್ರಿಯಿಡಿ ಹೆದರಿಸಿ ಕಾರಿನಲ್ಲೇ ಸುತ್ತಾಡಿಸಿ, ಕ್ರೆಡಿಟ್ ಕಾರ್ಡ್‌ನ ಪಾಸ್‌ವರ್ಡ್ ಬದಲಿಸಿದ ಆರೋಪಿಗಳು, ಬರೊಬ್ಬರಿ 3.21 ಲಕ್ಷ ರು.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಆ.20 ರ ಬೆಳಗ್ಗೆ 10 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದ ಸಮೀಪ ಬಿಟ್ಟು ಪರಾರಿಯಾಗಿದ್ದರು.

ಇದನ್ನೂ ಓದಿ: ChatGPTಗೆ ಇವೆಲ್ಲಾ ಪ್ರಶ್ನೆ ಕೇಳ್ತೀರಾ? ಕಂಬಿ ಎಣಿಸಬೇಕಾಗತ್ತೆ ಹುಷಾರ್​- ಪೊಲೀಸರ ಎಚ್ಚರಿಕೆ

PREV
Read more Articles on
click me!

Recommended Stories

ಇಡ್ಲಿ ಮಾರುವ ಬೆಂಗಳೂರಿನ ನಿಂಗಮ್ಮಗೆ ಮೋದಿ ಮೆಚ್ಚುಗೆ; ಮನ್‌ ಕೀ ಬಾತಲ್ಲಿ ಪ್ರಸ್ತಾಪ
ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ದೈವಿಕ ಸಂಗಮ: ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದ ಕೇಜ್ರಿವಾಲ್, ಭಗವಂತ್ ಮಾನ್