
ಹಾಸನ (ಅ.11): ಹಾಸನ ಜಿಲ್ಲಾಧಿಕಾರಿ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕವಾಗಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಈ ಮೂಲಕ ರಾಜಕಾರಣಿ ಹಾಗೂ ಐಎಎಸ್ ಅಧಿಕಾರಿಯ ನಡುವಿನ ಈ ತಿಕ್ಕಾಟ ಈಗ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಾಸನ ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನೇರವಾಗಿ ಜಿಲ್ಲಾಧಿಕಾರಿಯನ್ನೇ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.
'ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಸಿನಲ್ಲಿ (KPSC) ಅಮಾನತು ಆಗಬೇಕಿದ್ದ ಅಧಿಕಾರಿಯನ್ನು ತಂದು ಹಾಸನಕ್ಕೆ ಜಿಲ್ಲಾಧಿಕಾರಿಯನ್ನಾಗಿ ಕೂರಿಸಿದ್ದಾರೆ. ಇವರ ಬಂಡವಾಳವನ್ನು ನಾನೀಗ ಬಿಚ್ಚಿಡಬೇಕಾ? ಸರ್ಕಾರ ಯಾರನ್ನು ರಕ್ಷಣೆ ಮಾಡುತ್ತಿದೆ?' ಎಂದು ಗುಡುಗಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆಯು ಹಾಸನ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.
ಹೆಚ್‌ಡಿಕೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ಡಿಸಿ ಲತಾಕುಮಾರಿ ಅವರು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. 'ನೀವು ನನ್ನ ಮೇಲೆ ಸುಳ್ಳುಗಳಿಂದ ದಾಳಿ ಮಾಡಬಹುದು,
ಆದರೆ ಸುಳ್ಳುಗಳಿಂದ ನನ್ನನ್ನು ಒಡೆಯಲಾಗದು. 'ಸುಳ್ಳು ದಾಳಿ ಮಾಡುತ್ತವೆ, ಸತ್ಯ ಉಳಿಸುತ್ತದೆ' (You can attack me with lies, But you cannot break me with lies. Lies attack, truth protect) ಎಂದು ಬರೆದುಕೊಂಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಮತ್ತು ಜೆಡಿಎಸ್ ನಾಯಕರ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಘರ್ಷಣೆಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡ ಹಲವು ಅಧಿಕಾರಿಗಳ ವರ್ಗಾವಣೆ ಮತ್ತು ಕಾರ್ಯವೈಖರಿ ಕುರಿತು ಹೆಚ್‌ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಕೇಂದ್ರ ಸಚಿವರ ಮಟ್ಟದ ನಾಯಕರೊಬ್ಬರ ಆರೋಪಕ್ಕೆ, ಜಿಲ್ಲೆಯ ಅತ್ಯುನ್ನತ ಅಧಿಕಾರಿಯೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ತಿರುಗೇಟು ನೀಡಿರುವುದು ಜಿಲ್ಲಾಡಳಿತ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.