
ಶಾಲೆಯಲ್ಲಿ ಶೇ.100 ರಷ್ಟು ಸಾಧನೆಗೈದು, ಹಸಿರು ಸಾಧನೆ ಮಾಡಿರುವ ಶಿವಮೊಗ್ಗ ಜಿಲ್ಲೆಯ ಕೊಡ್ಲೂರು ತಾಲೂಕಿನ ಶಾಲಾ ಶಿಕ್ಷಣ ಸಾಧನೆಯೊಂದು ಬೆಳಕಿದೆ ಬಂದಿದೆ. ಅಷ್ಟೆ ಅಲ್ಲ ಮೊದಲಿಗೆ ಅವರ ಹಸಿರು ಸಾಧನೆ ಎಲ್ಲರಿಗೂ ಪ್ರೇರಣೆಯಾಗುವಂತಿದೆ. ಅಷ್ಟೇ ಅಲ್ಲ ಅದರಿಂದ ಬರುವ ಆದಾಯದಿಂದಲೇ ಶಾಲಾ ಅಭಿವೃದ್ಧಿ ಮಾಡುತ್ತಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಈ ಶಾಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ 'ಕೊಂಡ್ಲೂರು ಸರ್ಕಾರಿ ಪ್ರೌಢಶಾಲೆ' ಇದು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರಿನ ಶಾಲೆಯಾಗಿದೆ. ಈ ಶಾಲೆಯಲ್ಲಿ ಈಗ ತಾಲೂಕು ಮಾತ್ರವಲ್ಲ, ಇಡೀ ಜಿಲ್ಲೆಗೆ ಮಾದರಿಯಾಗಿದೆ. ಶೈಕ್ಷಣಿಕ ಸಾಧನೆಯಲ್ಲೂ, ಹಸಿರು ಸಾಧನೆಯಲ್ಲೂ ಎಲ್ಲರನ್ನೂ ಮೀರಿಸುವಂತಿದೆ.
ಯಾವುದೇ ಸ್ವಾರ್ಥವಿಲ್ಲದೇ, ಅವಿರತ ಶ್ರಮದಿಂದ ದುಡಿದ ಫಲವಾಗಿ ಇಂದು ಪಾಳು ಬಿದ್ದ ಭೂಮಿ ಹಸಿರು ಆವರಣವಾಗಿ ಮಿನುಗುವಂತೆ ಆಗಿದೆ. ಶಾಲೆಯ ಒಟ್ಟು 8 ಎಕರೆ ಕ್ಯಾಂಪಸ್‌ನಲ್ಲಿ ಶಿಕ್ಷಕರ ಅವಿರತ ಶ್ರಮದಿಂದಾಗಿ 1 ಎಕರೆ ಅಡಿಕೆ ತೋಟ, 3 ಎಕರೆ ಗೋಡಂಬಿ ತೋಟ ಹಾಗೂ ಸುಮಾರು 40 ತೆಂಗಿನ ಮರಗಳು ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ ಇದರಿಂದ ಬರುವ ಆದಾಯ ಆ ಶಾಲೆ ಅಭಿವೃದ್ಧಿಗೆ ಬಳಕೆಯಾಗುತ್ತಿದೆ.
ಈ ತೋಟದಿಂದ ಕಳೆದ 3 ವರ್ಷಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಖಾತೆಗೆ ವಾರ್ಷಿಕ 2 ಲಕ್ಷ ರೂಪಾಯಿವರೆಗೆ ಆದಾಯ ಬರುತ್ತಿದೆ. ಪ್ರಭಾರ ಮುಖ್ಯೋಪಾಧ್ಯಾಯರಾದ ಸಂಪತ್ ಎಚ್.ವಿ. ಅವರು 2015 ರಿಂದ ಈ ಶಾಲೆಗಾಗಿ ದುಡಿಯುತ್ತಿದ್ದಾರೆ. ಪ್ರತಿದಿನ ಮುಂಜಾನೆ ಮತ್ತು ತಡರಾತ್ರಿ ತೋಟದಲ್ಲಿ ಕೆಲಸ ಮಾಡುವುದು, ಮೋಟಾರ್ ಆನ್ ಮಾಡುವುದು, ಔಷಧಿ ಸಿಂಪಡಿಸುವುದನ್ನು ಇವರೇ ಮಾಡುತ್ತಾರೆ. ತಮ್ಮ ಸ್ವಂತ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸುತ್ತಿದ್ದಾರೆ.
ಇಂಗ್ಲಿಷ್ ಶಿಕ್ಷಕಿ ಸೌಮ್ಯ ಜಿ. ಸೇರಿ ಶಾಲೆಯ ಇತರ ಸಿಬ್ಬಂದಿಗಳಾದ ಮಂಜುಳಾ ಬಿ. ಗೌಡ್ರು, ಸಾಯಿದಾ ಬೇಗಂ, ವೀಣಾ ಪಿ., ಶೀಲಾ ಪಿ.ಒ., ಗಂಗಾಧರ್ ಮುಂತಾದವರು ಪ್ರತಿದಿನ ಬೆಳಿಗ್ಗೆ 7:30ಕ್ಕೆ ಬಂದು ಗಿಡಗಳಿಗೆ ನೀರು ಹಾಕುವುದು ಹಾಗೂ ತೋಟದ ಆರೈಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಆ ಹಸಿರು ಸಾಧನೆಯ ಭಾಗಿದಾರರಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಕೂಡ ಬಿಡುವಿನ ವೇಳೆಯಲ್ಲಿ ಶಿಕ್ಷಕರೊಂದಿಗೆ ತೋಟದ ಕೆಲಸದಲ್ಲಿ ಕೈಜೋಡಿಸಿ ಪ್ರಾಯೋಗಿಕ ಜ್ಞಾನ ಪಡೆಯುತ್ತಿದ್ದಾರೆ.
ಕೇವಲ ಹಸಿರು ತೋಟ ಮಾತ್ರವಲ್ಲದೆ, ಶೈಕ್ಷಣಿಕವಾಗಿಯೂ ಈ ಶಾಲೆ ತಾಲೂಕಿನಲ್ಲೇ ಅತ್ಯುತ್ತಮ ಶ್ರೇಣಿಯಲ್ಲಿದೆ. ಎಸ್ಎಸ್ಎಲ್ ಸಿ (SSLC) ಪರೀಕ್ಷೆಯಲ್ಲಿ ನಿರಂತರವಾಗಿ 100% ಫಲಿತಾಂಶ ದಾಖಲಿಸುತ್ತಿದ್ದು, ಈ ಬಾರಿ 91.4% ಸರಾಸರಿ ಅಂಕಗಳೊಂದಿಗೆ ಮುಂಚೂಣಿಯಲ್ಲಿದೆ. ಈಗ ಮುಂದು ಇರುವ ಗುರಿ ಎಂದರೆ, ತೋಟದಿಂದ ಬರುವ ಆದಾಯವನ್ನು ಶಾಲೆಯ ಮೂಲಸೌಕರ್ಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮಧ್ಯಾಹ್ನದ ಊಟ ನೀಡಲು ಬಳಸುವ ಗುರಿ ಹೊಂದಲಾಗಿದೆ ಎನ್ನುವುದನ್ನು ಶಾಲೆಯ ಮೂಲಗಳು ತಿಳಿಸಿವೆ.