ಖಾನಾಪುರ: ಅನೈತಿಕ ಚಟುವಟಿಕೆ, ಕಾಡಿನಲ್ಲಿ ಜಲಪಾತಗಳ ವೀಕ್ಷಣೆಗೆ ನಿರ್ಬಂಧ

By Kannadaprabha News  |  First Published Jul 18, 2023, 9:30 PM IST

ಇತ್ತೀಚಿನ ದಿನಗಳಲ್ಲಿ ಜಲಪಾತ ವೀಕ್ಷಣೆಯ ನೆಪದಲ್ಲಿ ಯುವ ಪೀಳಿಗೆಯಿಂದ ಅನೈತಿಕ ಚಟುವಟಿಕೆಗಳು ಮತ್ತು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸನ್ನಿವೇಶಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. 


ಖಾನಾಪುರ(ಜು.18):  ತಾಲೂಕಿನ ನಾಗರಗಾಳಿ, ಜಾಂಬೋಟಿ, ಭೀಮಗಡ ಮತ್ತು ಕಣಕುಂಬಿ ಅರಣ್ಯ ಪ್ರದೇಶಗಳ ವಿವಿಧೆಡೆ ಇರುವ ಜಲಪಾತಗಳ ವೀಕ್ಷಣೆಗೆ ತೆರಳಲು ಅರಣ್ಯ ಇಲಾಖೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ.

ಇತ್ತೀಚಿನ ದಿನಗಳಲ್ಲಿ ಜಲಪಾತ ವೀಕ್ಷಣೆಯ ನೆಪದಲ್ಲಿ ಯುವ ಪೀಳಿಗೆಯಿಂದ ಅನೈತಿಕ ಚಟುವಟಿಕೆಗಳು ಮತ್ತು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸನ್ನಿವೇಶಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ತಾಲೂಕಿನ ಕಾಡಿನಲ್ಲಿರುವ ಜಲಪಾತಗಳ ಚಾರಣಿಗರಿಂದ ಜಲಪಾತ ವೀಕ್ಷಣೆಯ ನೆಪದಲ್ಲಿ ಮದ್ಯಪಾನ, ಧೂಮಪಾನ ಮಾಡವುದು, ಮಾದಕ ವಸ್ತುಗಳನ್ನು ಸೇವಿಸುವುದು, ಅರೆಬೆತ್ತಲಾಗಿ ಸುತ್ತುವುದು, ಅತಿ ವೇಗದಲ್ಲಿ ವಾಹನಗಳನ್ನು ಚಲಾಯಿಸುವುದು, ಜಲಪಾತದ ಬಳಿ ಇರುವ ಅಪಾಯಕರ ಸ್ಥಳಗಳಿಗೆ ತೆರಳುವ ದುಸ್ಸಾಹಸ ಮಾಡುವುದು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹದಿಹರೆಯದ ಯುವಕರು ಮತ್ತು ಯುವತಿಯರು ತಮ್ಮ ಪಾಲಕರಿಗೆ ತಿಳಿಸದೇ ಅರಣ್ಯದೊಳಗೆ ಚಾರಣಕ್ಕೆ ಬರುವುದು ಸೇರಿದಂತೆ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮಾನ-ಪ್ರಾಣ ರಕ್ಷಣೆ ಮತ್ತು ಅರಣ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಫ್ಲಾಟ್ ನೋಂದಣಿ ಮಾಡದೆ ಸತಾಯಿಸಿದ ಬಿಲ್ಡರ್‌ಗೆ ಬಿತ್ತು ಭರ್ಜರಿ ದಂಡ

ಶನಿವಾರ-ಭಾನುವಾರ ಮತ್ತು ರಜಾ ದಿನಗಳಂದು ಜಲಪಾತಗಳ ವೀಕ್ಷಣೆಗೆ ಚಾರಣಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದರಿಂದಾಗಿ ಅರಣ್ಯ ಪ್ರದೇಶದ ಶಾಂತತೆ ಮತ್ತು ಪವಿತ್ರತೆಗೆ ಧಕ್ಕೆ ಉಂಟಾಗುತ್ತಿದೆ. ಇನ್ನುಳಿದ ದಿನಗಳಲ್ಲಿ ಬೆಳಗಾವಿ ಹಾಗೂ ಅಕ್ಕಪಕ್ಕದ ಭಾಗಗಳಿಂದ ಯುವಕರು, ಯುವತಿಯರು ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ತರಗತಿಗೆ ಚಕ್ಕರ್‌ ಹೊಡೆದು ಜಲಪಾತ ವೀಕ್ಷಣೆಗೆಂದು ಅರಣ್ಯದಲ್ಲಿ ಚಾರಣ ಮಾಡುತ್ತಿದ್ದಾರೆ. ಕೆಲವರು ಜಾಲಿ ರೈಡ್‌, ರೀಲಿಂಗ್‌, ಸೆಲ್ಫಿ ಮತ್ತಿತರ ದುಸ್ಸಾಹಸಗಳಿಗೆ ಕೈ ಹಾಕಿ ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮೇಲಧಿಕಾರಿಗಳ ಆದೇಶದಂತೆ ತಾಲೂಕಿನ ಅರಣ್ಯ ಪ್ರದೇಶಗಳಿಗೆ ತೆರಳುವ ಎಲ್ಲ ಮಾರ್ಗಗಳಲ್ಲಿ ನಾಕಾಬಂದಿ ಏರ್ಪಡಿಸಲಾಗಿದೆ. ಸೂಕ್ತ ಸಿಬ್ಬಂದಿ ನಿಯೋಜಿಸಲಾಗಿದೆ ಮತ್ತು ಜಲಪಾತಕ್ಕೆ ತೆರಳುವ ಮುಖ್ಯ ರಸ್ತೆಗಳ ಪಕ್ಕದಲ್ಲಿ ನಿಷೇಧದ ಕುರಿತು ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ವಲಯ ಅರಣ್ಯ ಅಧಿಕಾರಿ ಕವಿತಾ ಈರನಟ್ಟಿ ಹೇಳಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ-ಗೋವಾ ಗಡಿಯ ಚೋರ್ಲಾ ಗ್ರಾಮದ ಬಳಿಯ ಜಲಪಾತ ವೀಕ್ಷಣೆಗೆಂದು ತೆರಳಿದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರುವಂತೆ ಪೊಲೀಸ್‌ ಇಲಾಖೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯವರು ಭಾನುವಾರದಿಂದ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಿದ್ದಾರೆ. ಸಾರ್ವಜನಿಕರ ಪ್ರಾಣ ಕಾಪಾಡುವಲ್ಲಿ ಮುಖ್ಯವಾಗಿರುವ ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಪೊಲೀಸ್‌ ಸಿಬ್ಬಂದಿಯೂ ಸಾಥ್‌ ನೀಡಲಿದ್ದಾರೆ. ನಿರ್ಬಂಧದ ಮಧ್ಯೆಯೂ ಜಲಪಾತ ವೀಕ್ಷಣೆಗೆ ತೆರಳುವವರ ವಿರುದ್ಧ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲಿವೆ ಅಂತ ಖಾನಾಪುರ ಠಾಣೆ ಪಿಐ ಮಂಜುನಾಥ ನಾಯ್ಕ ತಿಳಿಸಿದ್ದಾರೆ. 

click me!