ಏಕಾಂಗಿಯಾಗಿ ಪ್ರತಿಭಟನೆಗಿಳಿದ ವಿಡಿಯೋಗ್ರಾಫರ್

By divya perlaFirst Published Jul 17, 2019, 10:54 AM IST
Highlights

ಮೈಸೂರಿನ ವಿಡಿಯೋಗ್ರಾಫರ್‌ ಒಬ್ಬರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನಾ ಧರಣಿ ಕುಳಿತಿದ್ದಾರೆ. 2018ರ ವಿಧಾನಸಭಾ ಚುನಾವಣೆಯ ಚಿತ್ರೀಕರಣ ಬಾಕಿ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.

ಮೈಸೂರು(ಜು.17): ಕಳೆದ 2018ರ ವಿಧಾನಸಭಾ ಚುನಾವಣೆಯ ಚಿತ್ರೀಕರಣ ವೆಚ್ಚದ ಹಣ ಪಾವತಿಯಲ್ಲಿನ ವಂಚನೆ ಖಂಡಿಸಿ, ಬಾಕಿ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿ ಮೈಸೂರಿನ ವಿಡಿಯೋಗ್ರಾಫರ್‌ ಒಬ್ಬರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರತಿಭಟನಾ ಧರಣಿ ಕುಳಿತಿದ್ದಾರೆ.

ತಾಲೂಕು ಕಚೇರಿ ಮಿನಿ ವಿಧಾನಸೌಧದ ಮುಂಭಾಗ ಗಾಂಧಿ ಭಾವಚಿತ್ರ ಹಾಗೂ ಕ್ಯಾಮೆರಾದೊಂದಿಗೆ ಮಂಗಳವಾರದಿಂದಲೇ ಪ್ರತಿಭಟನಾ ಧರಣಿ ಆರಂಭಿಸಿರುವ ಮೈಸೂರು ಕುವೆಂಪುನಗರದ ನಿವಾಸಿ ಎಸ್‌.ಪಿ. ಕಲ್ಯಾಣಸುಂದರ್‌ ಅವರು ಚುನಾವಣಾ ಕರ್ತವ್ಯವನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡಿದ್ದರೂ ವೆಚ್ಚದ ಬಿಲ್‌, ಹಣ ಪಾವತಿಯಲ್ಲಿ ತಾಲೂಕು ಕಚೇರಿ ಅಧಿಕಾರಿಗಳು ಮಾಡಿರುವ ವಂಚನೆ ಸರಿಪಡಿಸಿ, ಬಾಕಿ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ವಿಡಿಯೋಗ್ರಾಫರ್‌ ಎಸ್‌.ಪಿ. ಕಲ್ಯಾಣಸುಂದರ್‌ ಮಾತನಾಡಿ, ಕಳೆದ 2018ರ ಮೇ 12ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 25 ದಿನಗಳ ಕಾಲ ವಿಡಿಯೋ ಚಿತ್ರೀಕರಣವನ್ನು 16 ಮಂದಿಯಿಂದ ಮಾಡಿಸಿ ತಾಲೂಕು ಆಡಳಿತಕ್ಕೆ ಕೊಟ್ಟಿದ್ದೇನೆ. 13 ದಿನಗಳಿಗೆ ಮಾತ್ರ ಬಿಲ್‌ ಹಣ ಪಾವತಿ ಮಾಡಿಕೊಟ್ಟ ತಾಲೂಕು ಕಚೇರಿ ಅಧಿಕಾರಿಗಳು ಇನ್ನುಳಿದ 12 ದಿನಗಳಿಗೆ ಬೇರೆಯವರ ಹೆಸರಿಗೆ ಬಿಲ್‌ ಮಾಡಿ ಮೋಸ ಮಾಡಿದ್ದಾರೆ. ಈ ಸಂಬಂಧ ತಹಸಿಲ್ದಾರ್‌ ಅವರಿಗೂ ದೂರು ನೀಡಿದ್ದೇನೆ. ಕೆಲಸ ಮಾಡಿದ ಹುಡುಗರು ನನಗೆ ದುಡಿಮೆಯ ಹಣ ನೀಡುವಂತೆ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಆಗಿರುವ ಮೋಸ ಸರಿಪಡಿಸಿ ಬಾಕಿ ಹಣ ನೀಡುವವರೆಗೂ ಪ್ರತಿಭಟನಾ ಧರಣಿ ನಡೆಸುತ್ತೇನೆ ಎಂದು ತಿಳಿಸಿದರು.

ಕ್ಯಾರೇ ಎನ್ನದ ಅಧಿಕಾರಿಗಳು:

ಚುನಾವಣೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಟ್ಟು ವೆಚ್ಚದ ಹಣವನ್ನು ನೀಡದೆ ವಂಚನೆ ಮಾಡಿರುವುದನ್ನು ಖಂಡಿಸಿ ಬಾಕಿ ಹಣಕ್ಕಾಗಿ ಸೋಮವಾರದಿಂದ ಧರಣಿ ಕುಳಿತಿದ್ದರೂ ತಹಸೀಲ್ದಾರ್‌ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಕ್ಯಾರೆ ಅನ್ನುತ್ತಿಲ್ಲ. ನನ್ನ ಅಹವಾಲನ್ನು ಸ್ವೀಕರಿಸಿಲ್ಲ. ದುಡಿಮೆಯ ಹಣ ಕೈ ಸೇರುವವರೆಗೂ ಧರಣಿಯಿಂದ ಕದಲುವುದಿಲ್ಲವೆಂದು ಎಸ್‌.ಪಿ. ಕಲ್ಯಾಣಸುಂದರ ಎಚ್ಚರಿಸಿದ್ದಾರೆ.

 

click me!