* ಕಾರ್ಗಲ್-ಜೋಗ್ ಪಟ್ಟಣ ಪಂಚಾಯಿತಿ ವ್ಯಾಪ್ತಿ ಅವ್ಯವಸ್ಥೆ ಬಯಲು
* ಜಿಲ್ಲಾಡಳಿತ, ತಾಲೂಕು ಆಡಳಿತ, ಪಪಂ ಆಡಳಿತ ವಿರುದ್ಧ ಅಸಮಾಧಾನ
* ಸ್ವಲ್ಪ ಏಮಾರಿದರೂ ಕೆಳಗೆ ಬೀಳುವಂತಹ ಪರಿಸ್ಥಿತಿ
ಶಿವಮೊಗ್ಗ(ಜೂ.01): ಅನಾರೋಗ್ಯಕ್ಕೆ ಒಳಗಾದ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಸಂಪರ್ಕ ರಸ್ತೆ ಹಾಗೂ ಆಂಬ್ಯುಲೆನ್ಸ್ ವಾಹನ ಸೌಲಭ್ಯವಿಲ್ಲದೇ, ಜೋಲಿಯ ಮೂಲಕ ಹೊತ್ತೊಯ್ಯುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಸಾಗರ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದದ ಜನಪರ ಕಾಳಜಿಯನ್ನು ಪ್ರಶ್ನಿಸುವಂತಾಗಿದೆ.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿರುವ ಕಾರ್ಗಲ್-ಜೋಗ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇಂತಹ ದುರವಸ್ಥೆ ಕಂಡುಬಂದಿರುವುದು ವಿಪರ್ಯಾಸ. ಪ.ಪಂ. ವ್ಯಾಪ್ತಿಯ ವಾರ್ಡ್‌ಗಳಲ್ಲಿಯೇ ಇಂಥಾ ದುಸ್ಥಿತಿ ಇದ್ದರೆ, ಇನ್ನು ಕುಗ್ರಾಮಗಳಲ್ಲಿನ ಪರಿಸ್ಥಿತಿ ಏನಿರಬಹುದು ಎಂಬ ಟೀಕೆಗಳೂ ವ್ಯಕ್ತವಾಗಿವೆ. ಆದರೆ, ಈ ಬಗ್ಗೆ ಇದುವರೆಗೆ ಜಿಲ್ಲಾಡಳಿತವಾಗಲೀ, ಸಾಗರ ತಾಲೂಕು ಆಡಳಿತವಾಗಲೀ ಅಥವಾ ಜೋಗ-ಕಾರ್ಗಲ್ ಪ.ಪಂ. ಆಡಳಿತ ವ್ಯವಸ್ಥೆಯಾಗಲೀ ಸ್ಪಷ್ಟನೆ ನೀಡಿಲ್ಲ.
ಏನಿದು ಘಟನೆ?:
ಸಾಗರ ತಾಲೂಕು ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 10ನೇ ವಾರ್ಡ್‌ನಲ್ಲಿ ಸಂಪರ್ಕ ರಸ್ತೆ ಕೊರತೆ ಇದೆ. ಇದರಿಂದಾಗಿ 75 ವರ್ಷದ ಪಾಶ್ರ್ವವಾಯು ಪೀಡಿತ ವೃದ್ಧೆಯೊಬ್ಬಯನ್ನು ಕುಟುಂಬ ಸದಸ್ಯರು ಬಟ್ಟೆಯ ಜೋಲಿಯನ್ನು ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೋಗದ ಚಚ್‌ರ್ ಮೌಂಟ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಸದರಿ ಸ್ಥಳದಲ್ಲಿ ಸೂಕ್ತ ಸಂಪರ್ಕ ರಸ್ತೆಯಿಲ್ಲ. ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯರು ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿಗೆ ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ರಸ್ತೆಯನ್ನು ನಿರ್ಮಿಸಿಕೊಟ್ಟಿಲ್ಲ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಜಕುಮಾರ್ ದೂರುತ್ತಾರೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ
ವಯೋವೃದ್ಧರು ಹಾಗೂ ನಡೆದಾಡಲು ಸಾಧ್ಯವಾಗದವರು ತುರ್ತು ಚಿಕಿತ್ಸೆ ಅಗತ್ಯವಿರುವ ಸಂದರ್ಭದಲ್ಲಿ ಇನ್ನಿಲ್ಲದ ಸಂಕಷ್ಟಅನುಭವಿಸುವಂತಾಗಿದೆ. ಪರಿಣಾಮ ಹೀಗೆ ರೋಗಿಗಳನ್ನು ಜೋಲಿ ಕಟ್ಟಿಕೊಂಡು ಅವರನ್ನು ಸಂಪರ್ಕ ರಸ್ತೆ ಸಿಗುವವರೆಗೂ ಹೊತ್ತಿಕೊಂಡು ಹೋಗಬೇಕಾಗಿದೆ. ಅನಂತರ ವಾಹನಗಳ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತಹ ದಯನೀಯ ಪರಿಸ್ಥಿತಿಯಿದೆ. ಇಲ್ಲಿಯ ಸಂಕಷ್ಟಗಳು ಗೊತ್ತಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ವೃದ್ಧೆಯನ್ನು ಜೋಲಿಯಲ್ಲಿ ಸಾಗಿಸುವ ವೀಡಿಯೋ ನೋಡಿದಾಗ ಸದರಿ ಜಾಗವು ಪ.ಪಂ. ವ್ಯಾಪ್ತಿಯಲ್ಲಿ ಇದ್ದಂತೆ ಅನಿಸುತ್ತಿಲ್ಲ. ಯಾವುದೋ ಕುಗ್ರಾಮದ ಪರಿಸ್ಥಿತಿಯಂತೆ ಕಂಡುಬರುತ್ತಿದೆ. ರಸ್ತೆಗಳಿಲ್ಲ. ರಸ್ತೆಗಳು ಹೋಗಲಿ, ಕನಿಷ್ಠ ನಡೆದು ಹೋಗಲೂ ಉತ್ತಮವಾದ ಜಾಗ ಸಾಲದ ಸ್ಥಿತಿಯಿದೆ. ಸ್ವಲ್ಪ ಏಮಾರಿದರೂ ಕೆಳಗೆ ಬೀಳುವಂತಹ ಪರಿಸ್ಥಿತಿಯಿದೆ. ಇದರ ನಡುವೆ ರೋಗಿಗಳನ್ನು ಹೊತ್ತುಬರಬೇಕು. ಸದರಿ ಬಡಾವಣೆಗೆ ಸರಿಯಾದ ರಸ್ತೆ ಕಲ್ಪಿಸಬೇಕು. ಅನಾಹುತದ ಪರಿಸ್ಥಿತಿಯಲ್ಲಿ ಜೀವ ಉಳಿಸುವಂತಹ ವ್ಯವಸ್ಥೆ ಬೇಕು ಎನ್ನುತ್ತಾರೆ ಸ್ಥಳೀಯರು.