ರಾಮನಗರ: ಅಧಿಕಾರಿಗಳಿಗೆ ಲಂಚ?, ಆರೋಪಿ ವಿಡಿಯೋ ವೈರಲ್‌..!

By Kannadaprabha NewsFirst Published Nov 26, 2023, 11:19 AM IST
Highlights

ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಗೋದಾಮಿನಲ್ಲಿ ಅಕ್ಕಿ ಪರಿಶೀಲಿಸಿ ಬಂಧಿಸುವ ಮೊದಲು ಚಂದ್ರಶೇಖರ್ ಆಪ್ತರೊಂದಿಗೆ ಅಕ್ಕಿ ನಾಪತ್ತೆ ಪ್ರಕರಣ ಕುರಿತು ಮಾತನಾಡಿರುವ ವಿಡಿಯೋವೊಂದು ಹೊರಬಂದಿದೆ.

ವಿಜಯ್ ಕೇಸರಿ

ಚನ್ನಪಟ್ಟಣ(ನ.26):  ಚನ್ನಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನಿಂದ ಅಕ್ಕಿ ಕಳವು ಮಾಡಿ ಪ್ರತಿ ತಿಂಗಳು ಜಿಲ್ಲೆ ಮತ್ತು ತಾಲೂಕಿನ ಅಧಿಕಾರಿಗಳಿಗೆ ಲಂಚದ ಹಣ ರವಾನೆಯಾಗುತ್ತಿತ್ತಾ? ಕೈ ಬದಲಾವಣೆಯಾಗಿ ಅಧಿಕಾರಿಗಳಿಗೆ ಹಣ ತಲುಪುತ್ತಿತ್ತಾ?. ಅಕ್ಕಿ ಕಳವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಟಿಎಪಿಸಿಎಂಎಸ್ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿರುವ ವಿಡಿಯೋವೊಂದರಲ್ಲಿ ಪ್ರಸ್ತಾಪವಾಗಿರುವ ವಿಚಾರಗಳು ಸಂಚಲನ ಸೃಷ್ಟಿಸಿದೆ. ನ.22ರಂದು ಬುಧವಾರ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಗೋದಾಮಿನಲ್ಲಿ ಅಕ್ಕಿ ಪರಿಶೀಲಿಸಿ ಬಂಧಿಸುವ ಮೊದಲು ಚಂದ್ರಶೇಖರ್ ಆಪ್ತರೊಂದಿಗೆ ಅಕ್ಕಿ ನಾಪತ್ತೆ ಪ್ರಕರಣ ಕುರಿತು ಮಾತನಾಡಿರುವ ವಿಡಿಯೋವೊಂದು ಹೊರಬಂದಿದೆ.

ವಿಡಿಯೋದಲ್ಲಿ ಏನಿದೆ:

ಆಹಾರ ಇಲಾಖೆ ಅಧಿಕಾರಿಗಳು ಟಿಎಪಿಸಿಎಂಎಸ್ ಗೋದಾಮು ಪರಿಶೀಲಿಸುವ ವೇಳೆ ಕೆಲ ಆಪ್ತರೊಂದಿಗೆ ಪ್ರಕರಣ ಕುರಿತು ಮಾತನಾಡಿರುವ ಚಂದ್ರಶೇಖರ್, ಪ್ರತಿ ತಿಂಗಳು ಆಹಾರ ಇಲಾಖೆ 50ರಿಂದ 60 ಸಾವಿರ ರು. ಲಂಚ ನೀಡಬೇಕಿತ್ತು. ಲಂಚ ಕೊಡಲು ಹಣ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ್ದಾರೆ.

ಡಿ.ಕೆ.ಶಿವಕುಮಾರ್ ವಿರುದ್ಧ ಮೊಕದ್ದಮೆಗೆ ನಿರಾಕರಿಸಿದ್ದ ಸ್ಪೀಕರ್‌..!

ಪ್ರತಿ ತಿಂಗಳು ಅಕ್ಕಿ ಅಭಾವ:

ಒಂದೇ ಬಾರಿಗೆ ಇಷ್ಟೊಂದು ಅಕ್ಕಿ ನಾಪತ್ತೆಯಾಗಿಲ್ಲ. ಪ್ರತಿ ತಿಂಗಳು 40ರಿಂದ 50 ಕ್ವಿಂಟಲ್ ಅಕ್ಕಿ ದಾಸ್ತಾನು ಕೊರತೆ ಕಂಡು ಬಂದಿದೆ. ಹಿಂದೆ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯಂತೆ ಲೆಕ್ಕ ಹಾಕಿ ವಿತರಿಸುವಾಗ ಈ ವ್ಯವಹಾರ ಸಲಲಿತವಾಗಿ ನಡೆಯುತ್ತಿತ್ತು. ಆದರೆ, ಒಬ್ಬ ವ್ಯಕ್ತಿಗೆ 3 ಕೆ.ಜಿ ಅಕ್ಕಿ ಎಂದು ಬದಲಾದ ಮೇಲೆ ಕಷ್ಟವಾಯಿತು. ಜನರಿಗೆ ಅಕ್ಕಿ ಪೂರೈಸಲು ದಾಸ್ತಾನು ಕಡಿಮೆಯಾಯಿತು ಎಂದು ವಿವರಿಸಿದ್ದಾರೆ. ಇದಕ್ಕೆ ಆತನೊಂದಿಗೆ ಮಾತನಾಡಿರುವ ಆಪ್ತರು ಈ ವಿಚಾರದಲ್ಲಿ ಎಲ್ಲ ಸತ್ಯ ಹೇಳಿ, ಯಾರ್‍ಯಾರು ಶಾಮೀಲಾಗಿದ್ದಾರೆಂದು ತಿಳಿಸುವಂತೆ ಸಲಹೆ ನೀಡಿರುವುದು ವಿಡಿಯೋದಲ್ಲಿದೆ.

ಪರಿಶೀಲಿಸದ ಅಧಿಕಾರಿಗಳು:

ಎದುರಿನ ವ್ಯಕ್ತಿ ಅಧಿಕಾರಿಗಳು ಗೋದಾಮಿನಲ್ಲಿನ ದಾಸ್ತಾನು ಪರಿಶೀಲಿಸಲು ಬರುತ್ತಿರಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಅಧಿಕಾರಿಗಳು ಪರಿಶೀಲಿಸುತ್ತಿರಲಿಲ್ಲ. ಸ್ಟೇಟ್‌ಮೇಂಟ್ ನೋಡಿ ಸಹಿ ಹಾಕಿ ಹೋಗುತ್ತಿದ್ದರು. ಅವರಿಗೆ ತಿಂಗಳ ಹಣ ತಲುಪಿದರೆ ಸಾಕಿತ್ತು ಎಂದು ಹೇಳಿರುವುದು ಬಹಿರಂಗವಾಗಿದೆ.

ಕನಕಪುರದಲ್ಲಿ ಎಸಿ ಕೋರ್ಟ್: ವಕೀಲರ ಹೋರಾಟಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲ

ರಿಜಿಸ್ಟರ್ ಪುಸ್ತಕದಲ್ಲಿ 1 ಹಾಳೆ ಮಾಯ!

ಅನ್ನಭಾಗ್ಯದ ಅಕ್ಕಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದ ಬೆನ್ನೆಲ್ಲೆ ಟಿಎಪಿಸಿಎಂಎಸ್ ಗೋದಾಮಿನಲ್ಲಿದ್ದ ರಿಜಿಸ್ಟರ್ ಪುಸ್ತಕದಲ್ಲಿನ ಒಂದು ಹಾಳೆ ಹರಿದಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆಗಸ್ಟ್ 7ರಂದು ಆಹಾರ ಇಲಾಖೆ ಶಿರಸ್ತೆದಾರರಾದ ಶಾಂತಕುಮಾರಿ, ಟಿಎಪಿಸಿಎಂಸ್ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿ ಗೋದಾಮಿನಿನಲ್ಲಿ 4520.90 ಕ್ವಿಂಟಲ್ ಅಕ್ಕಿ, 1847.07 ಕ್ವಿಂಟಲ್ ರಾಗಿ ದಾಸ್ತಾನಿರುವುದಾಗಿ ದಾಖಲಾತಿ ಪುಸ್ತಕದಲ್ಲಿ ನಮೂದಿಸಿದ್ದಾರೆ. ಇದೇ ವೇಳೆ, ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಅಕ್ಕಿ ಸರಬರಾಜು ಮಾಡುವುದು, ಗೋದಾಮಿನಲ್ಲಿನ ಚೀಲಗಳನ್ನು ಕ್ರಮವಾಗಿ ಜೋಡಿಸುವುದು ಸೇರಿದಂತೆ 8 ಸೂಚನೆಗಳನ್ನ ಪುಸ್ತಕದ 95, 96ನೇ ಪುಟದಲ್ಲಿ ದಾಖಲಿಸಿದ್ದಾರೆ. ಆನಂತರದ 97ನೇ ಪುಟವನ್ನು ರಿಜಿಸ್ಟರ್ ಪುಸ್ತಕದಿಂದ ಹರಿದಿದ್ದು, 98ನೇ ಪುಟ ಖಾಲಿ ಇದೆ. ಹರಿದಿರುವ 97ನೇ ಪುಟದಲ್ಲಿ ಏನು ನಮೂದಾಗಿತ್ತು, ಇದನ್ನು ಹರಿದುಹಾಕಿದವರು ಯಾರು ಎಂಬ ಪ್ರಶ್ನೆ ಮೂಡುತ್ತಿದೆ.
ರಾಮನಗರದ ಕಾರಾಗೃಹದಲ್ಲಿ ಚಂದ್ರಶೇಖರ್

ಅನ್ನಭಾಗ್ಯದ ಅಕ್ಕಿ, ರಾಗಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಟಿಎಪಿಸಿಎಂಎಸ್ ಗೋದಾಮು ವ್ಯವಸ್ಥಾಪಕ ಚಂದ್ರಶೇಖರ್‌ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಶುಕ್ರವಾರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದು, ಸೋಮವಾರ ಚಂದ್ರಶೇಖರ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

click me!