ಬೆಂಗಳೂರು ಆಸ್ಪತ್ರೆಯಲ್ಲಿ ಮರ್ಮಾಂಗಕ್ಕೆ ಸ್ಟಿಚಿಂಗ್ ಹಾಕದೆ ಡಿಶ್ಚಾರ್ಜ್ ಮಾಡಿದ ವೈದ್ಯರು; ನರಳಿ ಪ್ರಾಣಬಿಟ್ಟ ಯುವಕ!

Published : Apr 22, 2026, 12:49 PM IST
Bengaluru Victoria Hospital

ಸಾರಾಂಶ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರ ತೀವ್ರ ನಿರ್ಲಕ್ಷ್ಯದಿಂದ ಶಾ ನವಾಜ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿ, ಹೊಲಿಗೆ ಹಾಕದೆ ಡಿಸ್ಚಾರ್ಜ್ ಮಾಡಿದ್ದರಿಂದ, ಚಿಕಿತ್ಸೆ ಸಿಗದೆ ಫುಟ್‌ಪಾತ್‌ನಲ್ಲೇ ನರಳಿ ಪ್ರಾಣ ಬಿಟ್ಟಿದ್ದಾರೆ. ಕುಟುಂಬ ಬೀದಿಪಾಲಾಗಿದೆ.

ಬೆಂಗಳೂರು (ಏ.22): ಬೆಂಗಳೂರಿನ ಪ್ರತಿಷ್ಠಿತ ಹಾಗೂ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಆಸ್ಪತ್ರೆ ಎಂದೇ ಕರೆಸಿಕೊಳ್ಳುವ ವಿಕ್ಟೋರಿಯಾ ಆಸ್ಪತ್ರೆಯಿಂದ ಅಮಾನವೀಯತೆಯ ಪರಾಕಾಷ್ಠೆ ಮೆರೆದ ಘಟನೆಯೊಂದು ವರದಿಯಾಗಿದೆ. ವೈದ್ಯ ಲೋಕವೇ ತಲೆತಗ್ಗಿಸುವಂತಹ ಈ ಘಟನೆಯಲ್ಲಿ, ವೈದ್ಯರ ಅಚಾತುರ್ಯ ಮತ್ತು ನಿರ್ಲಕ್ಷ್ಯಕ್ಕೆ 45 ವರ್ಷದ ಶಾ ನವಾಜ್ ಎಂಬ ವ್ಯಕ್ತಿ ಬಲಿಯಾಗಿದ್ದಾರೆ. ಚಿಕಿತ್ಸೆ ನೀಡಬೇಕಾದ ವೈದ್ಯರೇ ರೋಗಿಯ ಮರ್ಮಾಂಗವನ್ನು ಕೊಯ್ದು, ಅದಕ್ಕೆ ಕನಿಷ್ಠ ಹೊಲಿಗೆ (Stitching) ಕೂಡ ಹಾಕದೆ ಮನೆಗೆ ಕಳುಹಿಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಘಟನೆಯ ಹಿನ್ನೆಲೆ:

ಮೃತ ಶಾ ನವಾಜ್ ಖಾಸಗಿ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನೇ ನಂಬಿ ಅವರ ಹೆಂಡತಿ ಮತ್ತು ನಾಲ್ವರು ಪುಟ್ಟ ಮಕ್ಕಳಿದ್ದರು. ಸುಮಾರು ಒಂದೂವರೆ ತಿಂಗಳ ಹಿಂದೆ ಶಾ ನವಾಜ್ ಅವರ ಮರ್ಮಾಂಗದಲ್ಲಿ ಸಣ್ಣ ಗಡ್ಡೆಯೊಂದು ಕಾಣಿಸಿಕೊಂಡಿತ್ತು. ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರು ಇನ್ಫೆಕ್ಷನ್ ಆಗಿದೆ ಎಂದು ಹೇಳಿ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದರು.

ಸಮನ್ವಯದ ಕೊರತೆ - ರೋಗಿ ಬಲಿಪಶು:

ಆಪರೇಷನ್ ವಿಭಾಗದ ಸಿಬ್ಬಂದಿ ಶಾ ನವಾಜ್ ಅವರ ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಅದಾದ ಬಳಿಕ ಮುಂದಿನ ಚಿಕಿತ್ಸೆಗಾಗಿ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಇಲ್ಲಿಂದಲೇ ಅಸಲಿ ಆಟ ಶುರುವಾಗಿದ್ದು, ಎರಡು ವಿಭಾಗಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ರೋಗಿ ನರಕಯಾತನೆ ಅನುಭವಿಸುವಂತಾಯಿತು. "ಗಾಯ ಇನ್ನೂ ಆರಿಲ್ಲ, ಈಗಲೇ ಪ್ಲಾಸ್ಟಿಕ್ ಸರ್ಜರಿ ಸಾಧ್ಯವಿಲ್ಲ" ಎಂದು ಹೇಳಿ ಸರ್ಜರಿ ವಿಭಾಗದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.

ಅಮಾನವೀಯತೆಯ ಪರಮಾವಧಿ: ಸ್ಟಿಚಿಂಗ್ ಇಲ್ಲದೆ ಡಿಸ್ಚಾರ್ಜ್!

ರೋಗಿಯ ಸ್ಥಿತಿ ಗಂಭೀರವಾಗಿದ್ದರೂ, ಮರ್ಮಾಂಗದ ಗಾಯದಿಂದ ರಕ್ತ ಸುರಿಯುತ್ತಿದ್ದರೂ ವೈದ್ಯರು ಶಾ ನವಾಜ್ ಅವರನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಡ ಹೇರಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಆಪರೇಷನ್ ಮಾಡಿದ ಜಾಗಕ್ಕೆ ಕನಿಷ್ಠ ಹೊಲಿಗೆಯನ್ನೂ ಹಾಕದೆ ರೋಗಿಯನ್ನು ಆಸ್ಪತ್ರೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಪತಿಯನ್ನು ಕಂಡು ದಿಕ್ಕುತೋಚದಂತಾದ ಪತ್ನಿ, ಮತ್ತೆ ಅಡ್ಮಿಟ್ ಮಾಡಿಕೊಳ್ಳುವಂತೆ ಆಸ್ಪತ್ರೆಯ ಸಿಬ್ಬಂದಿಯ ಕಾಲಿಗೆ ಬಿದ್ದು ಅಂಗಲಾಚಿದ್ದಾರೆ. ಆದರೆ, ಕಲ್ಲಾದ ಅಧಿಕಾರಿಗಳು ರೋಗಿಯನ್ನು ಒಳಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ.

ಫುಟ್‌ಪಾತ್‌ನಲ್ಲೇ ಮೂರು ದಿನಗಳ ನರಕಯಾತನೆ:

ಆಸ್ಪತ್ರೆಯವರು ಹೊರಹಾಕಿದ ನಂತರ, ಅಸಹಾಯಕ ಪತ್ನಿ ತನ್ನ ಪತಿಯನ್ನು ಆಸ್ಪತ್ರೆಯ ಎದುರಿನ ಫುಟ್‌ಪಾತ್‌ನಲ್ಲೇ ಇರಿಸಿಕೊಂಡು ಮೂರು ದಿನಗಳ ಕಾಲ ಹೋರಾಡಿದ್ದಾರೆ. ಮರ್ಮಾಂಗದ ಅತಿಯಾದ ನೋವು ಮತ್ತು ರಕ್ತಸ್ರಾವ ತಾಳಲಾರದೆ ಶಾ ನವಾಜ್ ಫುಟ್‌ಪಾತ್‌ನಲ್ಲೇ ಕಿರುಚುತ್ತಾ ಬಿದ್ದಿದ್ದರು. ಕೊನೆಗೆ ಯಾವುದೇ ಚಿಕಿತ್ಸೆ ಸಿಗದೆ, ಹತ್ತು ದಿನಗಳ ಹಿಂದೆ ಶಾ ನವಾಜ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಶಾ ನವಾಜ್ ಅವರ ಸಾವಿನಿಂದಾಗಿ ಅವರ ಕುಟುಂಬ ಈಗ ಅನಾಥವಾಗಿದೆ. ಮೃತರಿಗೆ ನಾಲ್ಕು ಮಂದಿ ಪುಟ್ಟ ಮಕ್ಕಳಿದ್ದಾರೆ. ಕೇವಲ ನಾಲ್ಕು ತಿಂಗಳ ಹಸುಗೂಸು ಸೇರಿದಂತೆ, 2, 4 ಮತ್ತು 6 ವರ್ಷದ ಮಕ್ಕಳನ್ನು ಹಿಡಿದುಕೊಂಡು ತಾಯಿ ಈಗ ಬೀದಿಗೆ ಬಿದ್ದಿದ್ದಾರೆ. ಮನೆಯ ಯಜಮಾನನನ್ನೇ ಕಳೆದುಕೊಂಡ ಈ ಕುಟುಂಬಕ್ಕೆ ಈಗ ಮುಂದಿನ ದಾರಿ ಕಾಣದಂತಾಗಿದೆ.

ಈ ಘಟನೆಯು ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಬಡವರ ಪಾಲಿನ ಆಸ್ಪತ್ರೆ ಎಂದು ಕರೆಯಿಸಿಕೊಳ್ಳುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಯ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲವೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಅಮಾನವೀಯ ಕೃತ್ಯಕ್ಕೆ ಕಾರಣರಾದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಕಸ್ತೂರಿ ರಂಗನ್ ವರದಿ; ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ: ಸಿಎಂ ಡಿಕೆಶಿ
Captain Abhimanyu: ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್‌ ಕ್ಯಾಪ್ಟನ್‌ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!