ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆಗೆ VHP-ಭಜರಂಗದಳ ಮುತ್ತಿಗೆ : ಲವ್ ಜಿಹಾದ್ ಅರೋಪ

By Suvarna NewsFirst Published Aug 11, 2021, 10:47 AM IST
Highlights
  •  ಮಾಜಿ ಶಾಸಕ ಇದಿನಬ್ಬ ಅವರ ಮಗನ ಮನೆಗೆ ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದ ಮುಖಂಡರ ಮುತ್ತಿಗೆ ಯತ್ನ
  • ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಇರುವ ಇದಿನಬ್ಬ ಪುತ್ರ ಬಿಎಂ ಭಾಷಾ ಮನೆ
  • ಮುತ್ತಿಗೆಗೆ ಮುಖಂಡರು ಯತ್ನಿಸಿದ್ದ ವೇಳೆ ಪೊಲೀಸರು ತಡೆದಿದ್ದು ಹಲವರನ್ನು ಬಂಧಿಸಿದ್ದಾರೆ. 

ಮಂಗಳೂರು (ಆ.11):  ಮಾಜಿ ಶಾಸಕ ಇದಿನಬ್ಬ ಅವರ ಮಗನ ಮನೆಗೆ ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. 

ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಇರುವ ಇದಿನಬ್ಬ ಪುತ್ರ ಬಿಎಂ ಭಾಷಾ ಮನೆಗೆ  ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದ ಮುಖಂಡರ ಮುತ್ತಿಗೆ ಯತ್ನದಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು,  ಹಲವು ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.  

ಇದಿನಬ್ಬ ಮಗ ಭಾಷಾರ ಸೊಸೆ ಜೊತೆ ಮಾತನಾಡಲು ಹೊರಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದು, ಮನೆಯ ಮುಂಭಾಗ ವಿಎಚ್ ಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನಡೆದಿದೆ.  ಬಳಿಕ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪ್ರತಿಭಟನೆ ನಡುವೆ ಮನೆಗೆ ನುಗ್ಗುವ ಪ್ರಯತ್ನ ಮಾಡಿದ ಕಾರ್ಯಕರ್ತರು, ಇದ್ದಿನಬ್ಬರ ಮೊಮ್ಮಗ ಮಡಿಕೇರಿ ಮೂಲದ ಹಿಂದೂ ಯುವತಿಯನ್ನು ಲವ್ ಜಿಹಾದ್ ಮಾಡಿದ್ದಾರೆಂದು ಆರೋಪಿಸಿದರು. 

ಬಂಟ ಸಮುದಾಯದ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿ ಭಯೋತ್ಪಾದನಾ ಚಟುವಟಿಕೆಗೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಜನಜಾಗೃತಿಗಾಗಿ ಉಳ್ಳಾಲದ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ಮಡಿಕೇರಿ ಮೂಲದ ಬಂಟ ಸಮುದಾಯದ ಯುವತಿ ಮರಿಯಮ್ ಆಲಿಯಾಸ್ ದೀಪ್ತಿ ಮಾರ್ಲ ಎಂಬಾಕೆಯನ್ನು ಲವ್ ಜಿಹಾದ್ ನಡೆಸಿ ಅನಾಸ್ ನಿಂದ ದೀಪ್ತಿ ವಿವಾಹ ಮಾಡಲಾಗಿದೆ.  ದೀಪ್ತಿ ಮಾರ್ಲ ಸೇರಿ ಇಡೀ ಕುಟುಂಬದ ವಿರುದ್ಧ ತನಿಖೆ ನಡೆಸಬೇಕು ಎಂದು ವಿಎಚ್ ಪಿ ಆಗ್ರಹಿಸಿದೆ. 
ಐಸಿಸ್‌ ಉಗ್ರರ ನಂಟು ಶಂಕೆ: ಮಾಜಿ ಶಾಸಕನ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್‌!

ಪ್ರಕರಣ ಹಿನ್ನೆಲೆ : ಕನ್ನಡದ ಕಟ್ಟಾಳು ಎಂದೇ ಜನಜನಿತರಾಗಿದ್ದ ಸಾಹಿತಿ, ಮಂಗಳೂರು ಬಳಿಯ ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ.ಇದಿನಬ್ಬ ಅವರ ಮೊಮ್ಮಗ ಅಮ್ಮರ್‌ ಅಬ್ದುಲ್‌ ರಹಮಾನ್‌ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.

ಅಮ್ಮರ್‌ ಅಲ್ಲದೆ, ಬೆಂಗಳೂರಿನ ಶಂಕರ್‌ ವೆಂಕಟೇಶ್‌ ಪೆರುಮಾಳ್‌ ಅಲಿಯಾಸ್‌ ಅಲಿ ಮೌವಿಯಾ, ಕಾಶ್ಮೀರದ ಶ್ರೀನಗರದ ಒಬೈದ್‌ ಹಮೀದ್‌ ಮತ್ತು ಬಂಡಿಪೋರದ ಮುಝಾಮಿಲ್‌ ಹಸನ್‌ ಬಟ್‌ ಅವರನ್ನು ಬಂಧಿಸಲಾಗಿದೆ. ಐಸಿಸ್‌ ಸೇರಿದಂತೆ ಅನೇಕ ಉಗ್ರ ಸಂಘಟನೆಗಳ ನಂಟು ಹೊಂದಿರುವ ಅನುಮಾನದ ಮೇರೆಗೆ ಇವರನ್ನು ಸೆರೆ ಹಿಡಿಯಲಾಗಿದ್ದು, ಬಂಧಿತರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇವರೆಲ್ಲರೂ ಸಿರಿಯಾ ಮೂಲದ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರ ಸಂಘಟನೆಗೆ ಯುವಕರ ನೇಮಕಾತಿ ನಡೆಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಗೆ ಐಸಿಸ್‌, ಜಮ್ಮು-ಕಾಶ್ಮೀರದ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಇತ್ತು. ಮಾತ್ರವಲ್ಲದೆ ಕರ್ನಾಟಕ ಮತ್ತು ಕೇರಳಗಳಲ್ಲಿ ಕೆಲ ಪ್ರಮುಖರ ಕೊಲೆಗೆ ಸಂಚು ರೂಪಿಸಿದ್ದ ಐಸಿಸ್‌ನೊಂದಿಗೆ ನಂಟು ಹೊಂದಿದ್ದ ಇರುವ ಕೇರಳದ ಮಹಮ್ಮದ್‌ ಅಮೀನ್‌ ಜೊತೆಗೆ ಸಂಪರ್ಕ ಇತ್ತು. ಜೊತೆಗೆ ಜಿಹಾದಿ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದರೊಂದಿಗೆ ಹಣಕಾಸು ಸಂಗ್ರಹವನ್ನೂ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿತ್ತು.

click me!