ಮಲೆನಾಡಿನಲ್ಲಿ ಪಶು ಇಲಾಖೆ ಖಾಲಿ ಖಾಲಿ: ಹಲವು ವರ್ಷಗಳಿಂದ ಭರ್ತಿಯಾಗದ ಹುದ್ದೆಗಳು!

By Kannadaprabha News  |  First Published Jun 17, 2023, 1:22 PM IST

ಸಿಬ್ಬಂದಿ ಕೊರತೆಯಿಂದ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಸೊರಗಿ ಹೋಗಿದೆ. ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಗಿಂತ ಹೆಚ್ಚು ಹುದ್ದೆಗಳನ್ನು ಹಲವು ವರ್ಷಗಳಿಂದ ಸರ್ಕಾರ ತುಂಬಿಲ್ಲ


ಗೋಪಾಲ್‌ ಯಡಗೆರೆ

ಶಿವಮೊಗ್ಗ (ಜೂ.17) ಸಿಬ್ಬಂದಿ ಕೊರತೆಯಿಂದ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಸೊರಗಿ ಹೋಗಿದೆ. ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಗಿಂತ ಹೆಚ್ಚು ಹುದ್ದೆಗಳನ್ನು ಹಲವು ವರ್ಷಗಳಿಂದ ಸರ್ಕಾರ ತುಂಬಿಲ್ಲ. ಆದರೆ, ಇಲಾಖೆಯಲ್ಲಿ ಪ್ರತಿ ವರ್ಷ ಒಂದೊಂದಾಗಿ ಹೊಸ ಯೋಜನೆಗಳು ಸೇರ್ಪಡೆಯಾಗುತ್ತಿವೆ. ಇರುವ ಸಿಬ್ಬಂದಿಯೇ ಆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದ ಹೊಣೆ ಹೊತ್ತಿದೆ. ಆದರೆ, ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ.

Tap to resize

Latest Videos

ಜಿಲ್ಲೆಯ ಹಲವು ತಾಲೂಕುಗಳಲ್ಲಿ ನಾಲ್ಕೈದು ಪಶು ಆಸ್ಪತ್ರೆಗಳಿಗೆ ಒಬ್ಬ ವೈದ್ಯರಿದ್ದಾರೆ. ಕೆಲವೆಡೆ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಆ ವೈದ್ಯರು ವಾರಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಅವರ ಕೈಲಾದಷ್ಟುಕೆಲಸ ಮಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಜಾನುವಾರುಗಳಿಗೆ ರೋಗ ಬಂದಾಗ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಹಲವೆಡೆ ಜಾನುವಾರುಗಳು ಮೃತಪಟ್ಟಿವೆ. ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ, ಹೆಚ್ಚಿನ ಆಸ್ಪತ್ರೆಗಳಲ್ಲಿ ಒಬ್ಬ ವೈದ್ಯರೇ ಕೆಲಸ ನಿರ್ವಹಿಸುತ್ತಿರುವುದರಿಂದ ಅವರ ಮೇಲೆ ಗೂಬೆ ಕೂರಿಸುವುದರಲ್ಲಿ ಅರ್ಥವಿಲ್ಲ ಎಂದು ಅವರೇ ಸಮಾಧಾನ ಕೂಡ ಮಾಡಿಕೊಳ್ಳುವಂತಹ ಪರಿಸ್ಥಿತಿ ಇದೆ.

ಈಗಿನ ಪಠ್ಯ ಸಮಿತಿ ಜೊತೆ ಚರ್ಚೆಗೆ ಸಿದ್ಧ: ರೋಹಿತ್‌ ಚಕ್ರತೀರ್ಥ

ಕುರಿ, ಮೇಕೆ, ದನ ಹಾಗೂ ಕರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಲಾಗುತ್ತದೆ. ಸಿಬ್ಬಂದಿ ಕೊರತೆಯಿಂದ ಎಷ್ಟೋ ಸಲ ನಿಗದಿತ ಸಮಯಕ್ಕೆ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಇನ್ನೂ ಹಲವೆಡೆ ರೈತರೇ ಖುದ್ದು ದೂರದ ಕೇಂದ್ರಗಳಿಗೆ ಸ್ವಂತ ಖರ್ಚಿನಲ್ಲಿ ತೆರಳಿ ಲಸಿಕೆ ಹಾಕಿಸಿಕೊಳ್ಳುತ್ತಾರೆ.

ಶಿವಮೊಗ್ಗ ಮಲೆನಾಡು ಪ್ರದೇಶ. ಇಲ್ಲಿ ಕೃಷಿ ಆಧಾರಿತ ಚಟುವಟಿಕೆಗಳು ಹೆಚ್ಚು. ಇಂಥ ಕಡೆ ಪಶು ಸಂಗೋಪನೆ ಸೇರಿದಂತೆ ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡುವ ಹೊಣೆಯೂ ಇಲಾಖೆ ಮೇಲಿರುತ್ತದೆ. ಆದರೆ, ಅಂಥ ಕೆಲಸ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಇಲ್ಲವೆಂದರೆ ಏನು ಮಾಡಲು ಸಾಧ್ಯ ಎಂಬಂತಹ ಪರಿಸ್ಥಿತಿ ಇದೆ.

413 ಹುದ್ದೆ ಖಾಲಿ:

ಜಿಲ್ಲೆಯ ಪಶು ಇಲಾಖೆಯಲ್ಲಿ 682 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ ಕೇವಲ 269 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಬರೊಬ್ಬರಿ 413 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ 6,39,216 ಜಾನುವಾರುಗಳಿವೆ. 167 ಪಶು ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಮಂಜೂರಾದ 121 ಪಶು ವೈದ್ಯಾಧಿಕಾರಿ ಹುದ್ದೆಗಳಲ್ಲಿ 86 ಹುದ್ದೆ ಭರ್ತಿಯಾಗಿದ್ದು, 35 ಖಾಲಿ ಉಳಿದಿವೆ. ತಾಂತ್ರಿಕ ಸಿಬ್ಬಂದಿ ವರ್ಗ 265 ಹುದ್ದೆಗಳಲ್ಲಿ 123 ಭರ್ತಿಯಾಗಿದ್ದು, 142 ಹುದ್ದೆಗಳು ಖಾಲಿ ಇವೆ. ಲಿಪಿಕ ಸಿಬ್ಬಂದಿ ವರ್ಗ 27ರ ಪೈಕಿ 17 ಹುದ್ದೆಗಳು ಭರ್ತಿಯಾಗಿದ್ದು, 10 ಖಾಲಿ ಉಳಿದಿವೆ. 269 ಡಿ.ದರ್ಜೆ ನೌಕರರ ಪೈಕಿ 43 ಹುದ್ದೆಗಳು ಭರ್ತಿಯಾಗಿದ್ದು, 226 ಹುದ್ದೆಗಳು ಖಾಲಿ ಉಳಿದಿವೆ.

ಸರ್ಕಾರ ಬಂದು 20 ದಿನ ಆಗಿಲ್ಲ, ಯಾವ ಕಮಿಷನ್‌ ತೆಗೆದುಕೊಳ್ಳುವುದು: ಎಚ್‌ಡಿಕೆ ವಿರುದ್ಧ ಸಚಿವ ವೆಂಕಟೇಶ್‌ ಕಿಡಿ

ಶಿವಮೊಗ್ಗ ಜಿಲ್ಲೆಯಲ್ಲಿ ಹುದ್ದೆಗಳ ವಿವರ

  • 167- ಪಶು ಆರೋಗ್ಯ ಕೇಂದ್ರಗಳು
  • 682-ಮಂಜೂರಾದ ಹುದ್ದೆ
  • 269- ಭರ್ತಿಯಾದ ಹುದ್ದೆ
  • 413 -ಖಾಲಿ ಉಳಿದ ಹುದ್ದೆ

ಸರ್ಕಾರ ಹೊಸ ಯೋಜನೆಗಳು ಬರುತ್ತಲೇ ಇರುತ್ತವೆ. ಲಸಿಕೆಗಾಗಿ ಸದ್ಯ ಗುತ್ತಿಗೆ ಆಧಾರ ನೌಕರರಿಗೆ ತರಬೇತಿ ನೀಡಿ ಅವರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಪಶು ಇಲಾಖೆಯಲ್ಲಿ ಅರ್ಧಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಪ್ರತಿ ಸಲನೂ ನಾವು ಸರ್ಕಾರಿಗೆ ಈ ಬಗ್ಗೆ ಮನವಿ ಮಾಡುತ್ತಲೇ ಬರುತ್ತಿದ್ದೇವೆ.

-ಡಾ.ಶಿವಯೋಗಿ ಯಲಿ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಶಿವಮೊಗ್ಗ.

click me!