ಬೆಳಗಾವಿ: ನೀರಿಲ್ಲದೇ ಪಾತಾಳ ಕಂಡ ಹಿಡಕಲ್‌ ಅಣೆಕಟ್ಟು..!

By Kannadaprabha News  |  First Published Jun 17, 2023, 12:46 PM IST

51 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಇದೀಗ ಬರೀ 4 ಟಿಎಂಸಿ ನೀರಿದ್ದು ಅದರಲ್ಲಿ 2 ಟಿಎಂಸಿ ಡೆಡ್‌ ಸ್ಟೋರೆಜ್‌ ಇದೆ. ಪ್ರತಿದಿನ ಜಾಕವೆಲ್‌ ಮೂಲಕ ಘಟಪ್ರಭಾ ನದಿಗೆ 60 ಕ್ಯುಸೆಕ್ಸ್‌ ನೀರು ಹರಿಬಿಡಲಾಗುತ್ತಿದೆ. ಜತೆಗೆ ಬೆಳಗಾವಿ, ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. 


ರವಿ ಕಾಂಬಳೆ/ಎ.ಎಂ.ಕರ್ನಾಚಿ

ಹುಕ್ಕೇರಿ/ಯಮಕನಮರಡಿ(ಜೂ.17): ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದೆನಿಸಿರುವ 3 ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಹಿಡಕಲ್‌ ಅಣೆಕಟ್ಟಿನಲ್ಲಿ (ರಾಜಾ ಲಖಮಗೌಡ ಸರದೇಸಾಯಿ) ದಿನೇ ದಿನೇ ನೀರು ಖಾಲಿಯಾಗಿ ಪಾತಾಳ ಕಂಡಿದ್ದು, ಜಲಾಶಯ ನೆಚ್ಚಿರುವ ರೈತರು ಕಂಗಲಾಗಿದ್ದಾರೆ.

Tap to resize

Latest Videos

ಹಿಂದಿನ 2 ವರ್ಷಕ್ಕೆ ಹೋಲಿಸಿದರೆ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜೀವಸೆಲೆಯಾಗಿರುವ ಹಿಡಕಲ್‌ ಜಲಾಶಯದ ನೀರಿನಮಟ್ಟ ಬಹಳಷ್ಟು ಕ್ಷೀಣಿಸಿದೆ. ಇದರಿಂದಾಗಿ ಸಹಜವಾಗಿ ಆತಂಕ ಎದುರಾಗಿದೆ. ಈ ವರ್ಷ ಜಲಾಶಯ ಭರ್ತಿ ಆಗುತ್ತದೆ ಎಂಬುದೇ ಸಂಶಯವಾಗಿದೆ. ಒಂದು ವೇಳೆ ತುಂಬಿದರೂ ತಡವಾಗಿ ತುಂಬಬಹುದು ಎಂದೂ ಊಹಿಸಲಾಗಿದೆ.

ಅನ್ನದಾತರಿಗೆ ರೋಹಿಣಿ ಮಳೆ ಆಘಾತ, ಆತಂಕದ ಛಾಯೆ..!

51 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಇದೀಗ ಬರೀ 4 ಟಿಎಂಸಿ ನೀರಿದ್ದು ಅದರಲ್ಲಿ 2 ಟಿಎಂಸಿ ಡೆಡ್‌ ಸ್ಟೋರೆಜ್‌ ಇದೆ. ಪ್ರತಿದಿನ ಜಾಕವೆಲ್‌ ಮೂಲಕ ಘಟಪ್ರಭಾ ನದಿಗೆ 60 ಕ್ಯುಸೆಕ್ಸ್‌ ನೀರು ಹರಿಬಿಡಲಾಗುತ್ತಿದೆ. ಜತೆಗೆ ಬೆಳಗಾವಿ, ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಒಂದು ವೇಳೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೂ ಜುಲೈ ಅಂತ್ಯದವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದು ಎನ್ನುತ್ತದೆ

ಜಲಸಂಪನ್ಮೂಲ ಇಲಾಖೆ.

ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದಿದ್ದರೆ 1977 ರಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಜಲಾಶಯಕ್ಕೆ ಸಮಸ್ಯೆ ಎದುರಾಗುವ ಎಲ್ಲ ಸಾಧ್ಯತೆಯಿದೆ. ವಿದ್ಯುತ್‌ ಉತ್ಪಾದನೆ ಮೇಲೂ ಕರಿನೆರಳು ಬೀಳಲಿದೆ. ನೀರಿನ ಮಟ್ಟ ಕ್ಷೀಣಿಸಲು ಈ ಬಾರಿ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗಿರುವುದು ಕಾರಣ ಎನ್ನಲಾಗುತ್ತಿದೆ.

3 ಜಿಲ್ಲೆಗಳ 7 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಈ ಜಲಾಶಯ ನೀರು ಒದಗಿಸುತ್ತದೆ. ಈ ಜಲಾಶಯ ಮೂರು ಜಿಲ್ಲೆಗಳ ಅನ್ನದಾತರ ಬದುಕಿಗೆ ಆಸರೆಯಾಗಿದೆ. ಈ ಜಲಾಶಯದಿಂದ ಕೈಗಾರಿಕೆಗಳಿಗೂ ಅನುಕೂಲವಿದೆ. ಮಳೆ ಬಾರದಿದ್ದರೆ ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ತತ್ವಾರ ಆಗಲಿದೆ. ಬರಗಾಲ ಮುನ್ಸೂಚನೆಗಳಿದ್ದು ಮೋಡ ಬಿತ್ತನೆ ಮಾಡಬೇಕಿರುವ ಅನಿವಾರ್ಯತೆ ಬಂದರೂ ಬರಬಹುದು ಎಂದು ಅಂದಾಜಿಸಲಾಗಿದೆ.

ಹಿಡಕಲ್‌ ಜಲಾಶಯದಲ್ಲಿ 5 ಟಿಎಂಸಿಯಷ್ಟು ಹೂಳು ತುಂಬಿದೆ. ಈ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನಲೆ ಜಲಾಶಯ ನಿರ್ಮಾಣ ಕಾಲಕ್ಕೆ 51 ಟಿಎಂಸಿಯಷ್ಟಿದ್ದ ಸಂಗ್ರಹ ಸಾಮರ್ಥ್ಯ ಈಗ 46 ಟಿಎಂಸಿಗೆ ಕುಸಿದಿದೆ. ಈ ಭಾಗದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹೂಳಿಗೆ ಮುಕ್ತಿ ಕಾಣುತ್ತಿಲ್ಲ ಎನ್ನುವ ದೂರುಗಳಿವೆ.

ಬೆಳಗಾವಿ: ಉದ್ಯೋಗದಲ್ಲಿ ಹುಕ್ಕೇರಿಗೆ ಮೊದಲ ಸ್ಥಾನ ಖಾತರಿ..!

ಈ ಬಾರಿ ಮುಂಗಾರು ಮಾರುತ ಇನ್ನು ತೂಗುಯ್ಯಾಲೆಯಲ್ಲಿದೆ. ಹಾಗಾಗಿ ಜಲಾಶಯಕ್ಕೆ ನೀರು ಬಂದಿಲ್ಲ. ಮಹಾರಾಷ್ಟ್ರದ ಕೊಂಕಣ, ಘಟ್ಟಪ್ರದೇಶಗಳಲ್ಲಿ ಮಳೆ ಸುರಿದರೆ ಘಟಪ್ರಭಾ ನದಿ, ಹಳ್ಳ-ಕೊಳ್ಳಗಳ ಮೂಲಕ ಈ ಜಲಾಶಯಕ್ಕೆ ನೀರು ಹರಿದು ಬರಲಿದ್ದು ಒಳಹರಿವೂ ಶುರುವಾಗಲಿದೆ.

ವಿಠ್ಠಲ ಬೀರದೇವರ ದೇವಸ್ಥಾನಕ್ಕೆ ಭಕ್ತರ ದಂಡು

ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡ ಜಲಾಶಯ ಹಿನ್ನಿರಿನಲ್ಲಿ ವಿಠ್ಠಲ ಬೀರದೇವರ ದೇವಸ್ಥಾನವು ವರ್ಷಕ್ಕೆ 7 ರಿಂದ 8 ತಿಂಗಳ ಕಾಲದವರೆಗೆ ನೀರಿನಲ್ಲಿ ಮುಳುಗಿರುತ್ತದೆ. ಕೇವಲ 4 ತಿಂಗಳ ಕಾಲದವರೆಗೆ ಮಾತ್ರ ತೆರೆಯಲ್ಪಡುವುದು. ನೀರಿನಲ್ಲಿ ಹಲವಾರು ವರ್ಷಗಳಿಂದ ಮುಳುಗಿದರು ಕೂಡ ದೇವಸ್ಥಾನಕ್ಕೆ ಯಾವುದೇ ರೀತಿ ಹಾನಿಯಾಗಿಲ್ಲ ಎಂಬುವುದು ಅಚ್ಚರಿಯಾಗಿದ್ದು, ಶ್ರೀವಿಠ್ಠಲ್‌ ದೇವರ ಮಹಿಮೆ ಎಂಬುವುದು ಭಕ್ತರ ನಂಬಿಕೆ. ದೇವಸ್ಥಾನಕ್ಕೆ ಹಲವಾರು ತಮ್ಮ ತಮ್ಮ ಊರುಗಳಿಂದ ಭಕ್ತರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡು ಪುನಿತರಾಗುತ್ತಿದ್ದಾರೆ. ದೇವಸ್ಥಾನವು ವಿಶಿಷ್ಟಶಿಲ್ಪ ಕಲೆಗಳಿಂದ ಕೂಡಿದ್ದು, ನೋಡಲು ತುಂಬಾ ಆಕರ್ಷಣವಾಗಿದೆ. ಈ ದೇವಸ್ಥಾನದ ಮಾದರಿಯಲ್ಲಿಯೇ ಈಗಿನ ಹುನ್ನೂರ ಗ್ರಾಮದಲ್ಲಿ ಅದ್ಭುತ್‌ ಕಲಾಕೃತಿಗಳಿಂದ ವಿಠ್ಠಲ ದೇವರ ಹೊಸ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇದು ಹುಕ್ಕೇರಿ ತಾಲೂಕಿನಲ್ಲಿ ನೋಡಲು ಶ್ರೇಷ್ಠವಾದ ದೇವಸ್ಥಾನ ಎಂದೆನಿಸಿಕೊಂಡಿದೆ. ದೇವರ ಎಲ್ಲ ಕಾರ್ಯಗಳು ಈ ದೇವಸ್ಥಾನದಲ್ಲಿ ನಡೆಯುತ್ತವೆ.

click me!