ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ| ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಸ್ವಗೃಹದಲ್ಲಿ ಇಹಲೋಹ ತ್ಯಜಿಸಿದ ಮಲ್ಪೆ ವಾಸುದೇವ ಸಾಮಗ| ಹಿರಿಯ ಕಲಾವಿದರ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು|
ಉಡುಪಿ(ನ.07): ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇಂದು ಬೆಳಿಗ್ಗೆ(ಶನಿವಾರ) ವಿಧಿವಶರಾಗಿದ್ದಾರೆ. ಮಲ್ಪೆ ವಾಸುದೇವ ಸಾಮಗ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
71 ವರ್ಷದ ಮಲ್ಪೆ ವಾಸುದೇವ ಸಾಮಗ ಅವರು ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟಿನಲ್ಲಿ ಬಹಳಷ್ಟು ಹೆಸರುವಾಸಿಯಾಗಿದ್ದರು. ಮಲ್ಪೆ ವಾಸುದೇವ ಸಾಮಗ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಸ್ವಗೃಹದಲ್ಲಿ ಇಹಲೋಹ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಲಾಲಿತ್ಯದ ಕುಣಿತ ನಿಲ್ಲಿಸಿದ ನಾರಾಯಣ ಹಾಸ್ಯಗಾರ
ಅಲ್ಪ ಕಾಲಿಕ ಅಸೌಖ್ಯಕ್ಕೆ ಒಳಗಾಗಿದ್ದ ಮಲ್ಪೆ ವಾಸುದೇವ ಸಾಮಗ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಹೀಗಾಗಿ ಸಾಮಗ ಅವರು ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಯಕ್ಷಗಾನದಲ್ಲಿ ಇವರ ಸೇವೆಯನ್ನ ಪರಿಗಣಿಸಿ ಸಾಕಷ್ಟು ಪ್ರಶಸ್ತಿಗಳು ಮಲ್ಪೆ ವಾಸುದೇವ ಸಾಮಗ ಅವರನ್ನ ಅರಸಿ ಬಂದಿದ್ದವು.
ಮಲ್ಪೆ ವಾಸುದೇವ ಸಾಮಗ ಯಕ್ಷಗಾನ ರಂಗದ ತಾಳಮದ್ದಳೆ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಕಲಾವಿದರಾಗಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ವಾಕ್ಪಟುತ್ವದಿಂದ ಜನಮನ್ನಣೆಗೆ ಪಾತ್ರರಾಗಿದ್ದರು. ಮಲ್ಪೆ ವಾಸುದೇವ ಸಾಮಗ ಅವರ ಅಗಲಿಕೆಗೆ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.