ಶಾಕಿಂಗ್‌ ನ್ಯೂಸ್‌: ವಿದ್ಯುತ್‌ ಆಯ್ತು, ಈಗ ನೀರಿನ ದರವೂ ಹೆಚ್ಚಳ..!

Kannadaprabha News   | Asianet News
Published : Nov 07, 2020, 08:57 AM IST
ಶಾಕಿಂಗ್‌ ನ್ಯೂಸ್‌: ವಿದ್ಯುತ್‌ ಆಯ್ತು, ಈಗ ನೀರಿನ ದರವೂ ಹೆಚ್ಚಳ..!

ಸಾರಾಂಶ

ವಿದ್ಯುತ್‌ ದರ ಪ್ರತಿ ಯುನಿಟ್‌ಗೆ 25 ಪೈಸೆ ಏರಿಕೆ ಹಿನ್ನೆಲೆ| ಜಲಮಂಡಳಿಗೆ ಮಾಸಿಕ 6 ಕೋಟಿ ಹೆಚ್ಚುವರಿ ಹೊರೆ|ಆದಾಯದ ಶೇ.50 ವಿದ್ಯುತ್‌ ಬಿಲ್‌ಗೆ ವ್ಯಯಿಸುತ್ತಿರುವ ಜಲಮಂಡಳಿ| ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾಪ| 

ಬೆಂಗಳೂರು(ನ.07): ಕೊರೋನಾದಂತಹ ಸಂಕಷ್ಟದ ನಡುವೆ ವಿದ್ಯುತ್‌ ಶುಲ್ಕ ಹೆಚ್ಚಳದಿಂದ ಬೆಚ್ಚಿರುವ ರಾಜಧಾನಿ ಮಂದಿಗೆ ಶೀಘ್ರದಲ್ಲೇ ನೀರಿನ ಶುಲ್ಕ ಹೆಚ್ಚಳದ ಶಾಕ್‌ ಕಾದಿದೆ. ನೀರಿನ ದರವನ್ನು ಶೇ.15ರಷ್ಟು ಹೆಚ್ಚಿಸುವಂತೆ ಬೆಂಗಳೂರು ಜಲಮಂಡಳಿ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೇ.12ರಷ್ಟು ಹೆಚ್ಚಳ ಮಾಡಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಇತ್ತೀಚೆಗೆ ಬೆಸ್ಕಾಂ ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಳ ಮಾಡಿರುವುದರಿಂದ ಜಲಮಂಡಳಿಗೆ ಮಾಸಿಕ 5ರಿಂದ 6 ಕೋಟಿ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತದೆ. ಕಳೆದ ಆರು ವರ್ಷಗಳಿಂದ ನೀರಿನ ಶುಲ್ಕ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಆದಾಯಕ್ಕಿಂತ ವೆಚ್ಚದ ಪ್ರಮಾಣ ಹೆಚ್ಚಳವಾಗಿದೆ. ಜಲಮಂಡಳಿಗೆ ಪ್ರತಿ ತಿಂಗಳು ನೀರಿನ ಶುಲ್ಕದ ರೂಪದಲ್ಲಿ 110 ಕೋಟಿ ಆದಾಯ ಬರುತ್ತಿದೆ. ಈ ಪೈಕಿ ಶೇ.50 ರಷ್ಟು ವಿದ್ಯುತ್‌ ಶುಲ್ಕ ಹಾಗೂ ಶೇ.30 ರಷ್ಟು ನಿರ್ವಹಣೆಗೆ ವ್ಯಯವಾಗುತ್ತಿದೆ. ಉಳಿದ ಹಣದಲ್ಲಿ ಮಂಡಳಿಯ ನೌಕರರ ವೇತನ ಸೇರಿದಂತೆ ಇತರೆ ಕಾರ್ಯಗಳಿಗೆ ವ್ಯಯವಾಗುತ್ತಿದೆ.

ಜಲಮಂಡಳಿಯು ನೀರು ಪೂರೈಕೆ ಜೊತೆಗೆ ನೀರಿನ ಸಂಪರ್ಕ, ತ್ಯಾಜ್ಯ ಸಂಸ್ಕರಣೆ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳಿಗೂ ಮಂಡಳಿಯೇ ಹಣ ಹೊಂದಿಸುವ ಅಗತ್ಯವಿದೆ. ಹೀಗಾಗಿ ನೀರಿನ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೊರೋನಾ ನಂತರ ಈಗ ವಿದ್ಯುತ್‌ ಬಿಲ್‌ ಶಾಕ್‌: ಜನರಿಗೆ ಎಸ್ಕಾಂಗಳಿಂದ ಬರೆ!

ಶೇ.12ರಷ್ಟು ಹೆಚ್ಚಳ?

ಜಲಮಂಡಳಿ ಕಳೆದ ಜನವರಿಯಲ್ಲಿ ಶೇ.35ರಷ್ಟುನೀರಿನ ಶುಲ್ಕ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದು ದುಬಾರಿಯಾದ್ದರಿಂದ ಜನಸಾಮಾನ್ಯರಿಗೆ ಹೊರೆಯಾಗದಂತೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಜಲಮಂಡಳಿಗೆ ಸೂಚಿಸಲಾಗಿತ್ತು. ಅದರಂತೆ ಜಲಮಂಡಳಿ ಶುಲ್ಕದ ಪ್ರಮಾಣವನ್ನು ಶೇ.15ಕ್ಕೆ ಪರಿಷ್ಕರಿಸಿ ಕಳೆದ ಜೂನ್‌ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೂ ನಾನಾ ಕಾರಣಗಳಿಂದ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿರಲಿಲ್ಲ. ಇದೀಗ ವಿದ್ಯುತ್‌ ಶುಲ್ಕ ಹೆಚ್ಚಳ ಮಾಡಿರುವ ಕಾರಣ ನೀರಿನ ಶುಲ್ಕ ಏರಿಕೆಗೂ ಅವಕಾಶ ನೀಡುವ ಸಾಧ್ಯತೆಯಿದೆ. ಪರಿಷ್ಕೃತ ಪ್ರಸ್ತಾವನೆಯಲ್ಲಿ ಕೋರಿರುವ ಶೇ.15ರಷ್ಟು ಹೆಚ್ಚಳದ ಬದಲು ಶೇ.12ಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಸ್ತುತ ಗೃಹ ಬಳಕೆ ನೀರಿನ ಶುಲ್ಕ ಇಂತಿದೆ

ಎಂಟು ಸಾವಿರ ಲೀಟರ್‌ವರೆಗೆ ಪ್ರತಿ ಸಾವಿರ ಲೀಟರ್‌ಗೆ 7, 8001ರಿಂದ 25 ಸಾವಿರ ಲೀಟರ್‌ ವರೆಗೆ ಪ್ರತಿ ಸಾವಿರ ಲೀಟರ್‌ಗೆ 11, 25,001ರಿಂದ 50 ಸಾವಿರ ಲೀಟರ್‌ ವರೆಗೆ ಪ್ರತಿ ಸಾವಿರ ಲೀಟರ್‌ಗೆ 25 ಹಾಗೂ 50,001 ಲೀಟರ್‌ ನಂತರದ ಪ್ರತಿ ಸಾವಿರ ಲೀಟರ್‌ಗೆ 45 ಶುಲ್ಕ ಪಡೆಯಲಾಗುತ್ತಿದೆ.
 

PREV
click me!

Recommended Stories

ಮುಂದಿನ ಚುನಾವಣೆಗೆ ನಾನು ನಿಲ್ಲದಿದ್ದರೂ ಸರಿ, ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿಯೇ ಸಿದ್ಧ!
25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ: ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ