ಹೊನ್ನಾವರ: ಹಾಡು ನಿಲ್ಲಿಸಿದ ಜನಪದ ಕೋಗಿಲೆ ಹನುಮಜ್ಜಿ

By Kannadaprabha News  |  First Published Jun 23, 2021, 7:58 AM IST

* ಜಾನಪದ ಶ್ರೀ, ಜ್ಞಾನ ವಿಜ್ಞಾನ ಪ್ರಶಸ್ತಿ ಪುರಸ್ಕೃತ, ಸಾವಿರ ಹಾಡುಗಳ ಕಣಜ ಇನ್ನಿಲ್ಲ
* ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ ಹನುಮಜ್ಜಿ
* ಹನುಮಜ್ಜಿ ನಿಧನಕ್ಕೆ ಗಣ್ಯರ ಸಂತಾಪ


ಹೊನ್ನಾವರ(ಜೂ.23): ಜಾನಪದ ಹಾಡುಗಳ ಕಣಜ, ಸಾವಿರ ಹಾಡಿನ ಸರದಾರಿಣಿ ದಶ್ರೀ ಹನುಮಿ ಕ್ಷೇತ್ರಗೌಡ (74) ಸೋಮವಾರ ರಾದರು. ಕೆಲ ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಅನಾರೋಗ್ಯಕ್ಕೀಡಾಗಿದ್ದರು. ಮಾಳಕೋಡಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಅವರಿಗೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಕೇವಲ 4ನೇ ತರಗತಿ ಓದಿಕೊಂಡು 14ರ ಹರೆಯದಲ್ಲಿ ಮದುವೆಯಾಗಿ, 40 ಜನರಿದ್ದ ಅವಿಭಕ್ತ ಕುಟುಂಬದಲ್ಲಿ ಹಿರಿ-ಕಿರಿಯರೊಂದಿಗೆ ಏಗಬೇಕಾದ ಸವಾಲುಗಳೊಂದಿಗೆ ಜೀಕುತ್ತಲೇ ಅಪಾರ ಸಮಖ್ಯೆಯ ಜಾನಪದ ಹಾಡುಗಳನ್ನು ಕಂಠಸ್ಥ ಮಾಡಿಕೊಂಡಿದ್ದರು.

Latest Videos

undefined

ತಾಲೂಕಿನ ಅಳ್ಳಂಕಿಯ ಯುರ್ಜಿನಮೂಲೆಯಲ್ಲಿ ಹುಟ್ಟಿದ್ದರೂ ಬೆಳೆದಿದ್ದು ಶರಾವತಿ ನಡುಗಡ್ಡೆ ಹೈಗುಂದದಲ್ಲಿ. ಮಾಳಕೋಡಿನ ಪತಿಯ ಊರಿನಲ್ಲಿ ಜೀವನ ಸಾಗಿಸುತ್ತಿದ್ದರು. ನೆರೆ ಹೊರೆಯಲ್ಲಿ ಹಿರಿಯರು ಹೇಳುತ್ತಿದ್ದ ಹಾಡುಗಳು ಕಿವಿಗೆ ತಾಕಿದರೆ ತಕ್ಷಣ ಅದನ್ನು ನೆಪಿಟ್ಟುಕೊಂಡು ಊರು ಕೇರಿಯಲ್ಲಿ ಯಾರ ಮನೆಯಲ್ಲಿ ಮದುವೆ, ಮುಂಜಿ, ಸೀಮಂತ, ನಾಮಕರಣ, ದೇವರಕಾರ್ಯ, ಹಬ್ಬ ಹರಿದಿನ ಶುಭ ಕಾರ್ಯವಿರಲಿ ಅಲ್ಲಿ ಹನುಮಜ್ಜಿ ಮತ್ತವಳ ಬಳಗದ ಹಾಡಿನ ಸುಗ್ಗಿ ನಡೆಯುತ್ತಿತ್ತು.

ಬಹುಮುಖ ಪ್ರತಿಭೆ ಹನುಮಜ್ಜಿ ಕೇದಿಗೆ ಎಲೆಗಳಿಂದ ಚಾಪೆ ನೇಯುವುದು, ಶೇಡಿ (ಜೇಡಿ ಮಣ್ಣಿನ ಹುಡಿ) ಕಲೆಯಲ್ಲಿಯೂ ನಿಷ್ಣಾತರಾಗಿದ್ದರು. ಅಡಕೆ ಸಿಪ್ಪೆಯನ್ನು ಕುಂಚಗಳನ್ನಾಗಿ ಮಾಡಿಕೊಂಡು ಬಾಗಿಲ ತೋರಣ, ಕೊಡೆಶೇಡಿ, ಕಳಸದ ಶೇಡಿ, ಸರ್ಪ ಶೇಡಿ, ಪೆಟ್ಟಿಗೆ ಶೇಡಿ, ಹಸಗಾರ (ಮದುಮಕ್ಕಳು ಕುಳಿತುಕೊಳ್ಳುವ ಸ್ಥಳದ ಹಿಂದಿನ ಗೋಡೆಯ ಮೇಲೆ ಬಿಡಿಸಲಾಗುವ ಕಲೆ) ತಳಕಲ ಶೇಡಿ, ಬಾಸಿಂಗ, ತೊಂಡ್ಲ ಹೀಗೆ ನಾನಾ ಬಗೆಯ ಚಿತ್ತಾರಗಳನ್ನು ಸೃಷ್ಟಿಸುವ ಕಲೆಯನ್ನೂ ಕರಗತಮಾಡಿಕೊಂಡಿದ್ದರು.

ಮುರುಡೇಶ್ವರದ ಶಿವನಮೂರ್ತಿಗೆ ಅಮೆರಿಕದ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ

2002ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ವಿಜ್ಞಾನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಜಾನಪದಶ್ರೀ ಗೌರವಗಳನ್ನು ಮುಡಿಗೇರಿಸಿಕೊಂಡಿರುವ ಹಿರಿಯ ಜೀವ ಹನುಮಜ್ಜಿ. ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ತೇಜನ ಕೇಂದ್ರದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಗ್ರಾಮ ಒಕ್ಕಲ ಜಾನಪದ ಲೋಕದ ವೈಭವವನ್ನು ಹಾಡುಗಳ ಮೂಲಕ ತೆರೆದಿಟ್ಟ ಸಾಧಕಿ.

 ಎಲೆಮರೆಯ ಕಾಯಿಯಂತಿದ್ದ ಹನುಮಜ್ಜಿಯ ಜಾನಪದ ಪ್ರತಿಭೆಯ ಮೇಲೆ ಬೆಳಕು ಚೆಲ್ಲಿ ಹೊರ ಜಗತ್ತಿಗೆ ಪರಿಚಯಿಸಿದ್ದು ಖ್ಯಾತ ಜಾನಪದ ವಿದ್ವಾಂಸರಾದ ಡಾ. ಎನ್‌.ಆರ್‌.ನಾಯಕ, ಡಾ ಶಾಂತಿ ನಾಯಕ ದಂಪತಿಗಳ ಒಡನಾಟ ಮತ್ತು ಅವರ ಮಗಳಾದ ಸವಿತಾ ಉದಯ ಅವರ ಸಹಕಾರ ಎನ್ನುವುದು ಸ್ಮರಣೀಯ.

ಹನಮಜ್ಜಿಯ ನಿಧನಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ, ತಾಪಂ ಸದಸ್ಯ ಗಣಪಯ್ಯ ಗೌಡ, ಜಾನಪದ ವಿದ್ವಾಂಸರಾದ ಡಾ. ಎನ್‌.ಆರ್‌. ನಾಯಕ, ಡಾ. ಶಾಂತಿ ನಾಯಕ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಶಿಕ್ಷಕರಾದ ಗಣಪಯ್ಯ ಗೌಡ ಮಾಳ್ಕೋಡ ಸೇರಿದಂತೆ ಸಾವಿರಾರು ಮಂದಿ ಸಂತಾಪ ಸೂಚಿಸಿದ್ದಾರೆ.
 

click me!