ಉಡುಪಿ: ಪಾಸಿಟಿವಿಟಿ ಶೇ. 5ಕ್ಕಿಳಿಸುವ ಷರತ್ತಿನಲ್ಲಿ ಜಿಲ್ಲೆ ಅನ್‌ಲಾಕ್‌

By Suvarna News  |  First Published Jun 22, 2021, 11:45 AM IST

ಕೋವಿಡ್‌ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ಷರತ್ತಿನೊಂದಿಗೆ ಉಡುಪಿ ಜಿಲ್ಲೆಯನ್ನು ಸರ್ಕಾರ ಸೋಮವಾರ ಅನ್ಲಾಕ್‌ ಮಾಡಿದೆ. 


ಉಡುಪಿ (ಜೂ. 22): ಕೋವಿಡ್‌ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ಷರತ್ತಿನೊಂದಿಗೆ ಉಡುಪಿ ಜಿಲ್ಲೆಯನ್ನು ಸರ್ಕಾರ ಸೋಮವಾರ ಅನ್ಲಾಕ್‌ ಮಾಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ, ಜನಜಂಗುಳಿಯಾಗದಂತೆ, ಕಡ್ಡಾಯವಾಗಿ ಮಾಸ್ಕ್,  ಅಂತರ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ. ಸೋಮವಾರ ವೀಡಿಯೋ ಸಂವಾದದ ಮೂಲಕ ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಕುರಿತು ಅವರು ಪರಿಶೀಲನಾ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಕೋರಿಕೆಯಂತೆ ಜಿಲ್ಲೆಗೆ ಪ್ರತೀವಾರ ಪೂರೈಕೆ ಮಾಡಲಾಗುತ್ತಿರುವ 10 ಸಾವಿರ ಡೋಸ್‌ ಲಸಿಕೆಯನ್ನು 12 ಸಾವಿರಕ್ಕೆ ಹೆಚ್ಚಿಸುವುದಾಗಿ ಸಚಿವರು ಹೇಳಿದರು. ಮುಂಗಾರು ಮಳೆ ಆರಂಭವಾಗಿದ್ದು, ಮಂಗಳೂರಿನಲ್ಲಿರುವ ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ತಂಡಗಳಲ್ಲಿ ಅರ್ಧ ಮಾತ್ರ ಉಡುಪಿಗೆ ಲಭ್ಯವಾಗುವುದರಿಂದ, ಉಡುಪಿ ಜಿಲ್ಲೆಗೆ ಪ್ರತ್ಯೇಕ ಪೂರ್ಣ ಪ್ರಮಾಣದ ತಂಡವನ್ನು ನೀಡುವಂತೆ ಡಿಸಿ ಮನವಿ ಮಾಡಿದರು.

Latest Videos

undefined

14 ದಿನದಿಂದ ಶೇ. 5 ಕ್ಕಿಂತ ಕಮ್ಮಿ ಪಾಸಿಟಿವಿಟಿ: ಮುಗಿಯಿತೇ 2 ನೇ ಅಲೆ?

ಶಾಸಕರಾದ ಸುನೀಲ್‌ ಕುಮಾರ್‌, ಲಾಲಾಜಿ ಮೆಂಡನ್‌, ಕ.ಅ. ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಸಿಇಓ ಡಾ.ನವೀನ್‌ »ಟ್‌, ಎಸ್ಪಿ ವಿಷ್ಣುವರ್ಧನ್‌, ಎಡಿಸಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್‌ ಮಧುಸೂಧನ ನಾಯಕ್‌, ಡಿಎಚ್‌ಓ ಡಾ. ನಾಗಭೂಷಣ ಉಡುಪ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಅನ್ಲಾಕ್‌ ಹೀಗಿರುತ್ತದೆ

ಜಿಲ್ಲೆಯನ್ನು ಅನ್‌ಲಾಕ್‌ ಮಾಡಲಾಗಿದ್ದರೂ, ಲಾಕ್‌ಡೌನ್‌ ಪೂರ್ತಿ ತೆರವಾಗಿಲ್ಲ, ಸಂಜೆ 5 ಗಂಟೆವರೆಗೆ ಮಾತ್ರ ಎಲ್ಲಾ ವ್ಯವಹಾರಗಳನ್ನು ನಡೆಸುವುದಕ್ಕೆ ಅನುಮತಿ ನೀಡಲಾಗಿದೆ.

ಸಂಜೆ 7 ರಿಂದ ಮರುದಿನ ಮುಂಜಾನೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶನಿವಾರ ಮತ್ತು ಭಾನುವಾರ ಎರಡೂ ದಿನ ವೀಕೆಂಡ್‌ ಕರ್ಫ್ಯೂ ಇರುತ್ತದೆ.

ಶೇ. 50 ಸಿಬ್ಬಂದಿಗೆ ಸರ್ಕಾರಿ - ಖಾಸಗಿ ಕಚೇರಿಗಳು, ಶೇ. 50 ಪ್ರಯಾಣಿಕರೊಂದಿಗೆ ಬಸ್ಸುಗಳ ಸಂಚಾರಕ್ಕೆ ಅವಕಾಶ ಇದೆ. ಪಬ್‌ ಹೊರತುಪಡಿಸಿ ಮದ್ಯದಂಗಡಿ, ಹೊಟೇಲ್,  ಬಾರ್‌, ರೆಸ್ಟೋರೆಂಟ್‌ಗಳೂ ಶೇ. 50 ಗ್ರಾಹಕರೊಂದಿಗೆ ವ್ಯವಹಾರ ನಡೆಸಬಹುದು.

ಸರ್ಕಾರಿ ಬಸ್‌ ಓಡಾಟ ಆರಂಭ

ಜಿಲ್ಲೆಯಲ್ಲಿ ಅನ್‌ ಲಾಕ್‌ ಘೋಷಿಸಲಾಗಿದ್ದು, ಸೋಮವಾರದಿಂದಲೇ ಸರ್ಕಾರಿ ಬಸ್‌ಗಳ ಓಡಾಟ ಆರಂಭವಾಗಿದೆ. ಉಡುಪಿ ನಗರದಿಂದ ಬೈಂದೂರು, ಕುಂದಾಪುರ, ಕಾರ್ಕಳ ಮುಂತಾದ ಕಡೆಗೆ ಬಸ್‌ಗಳು ಶೇ. 50 ರಷ್ಟು ಪ್ರಯಾಣಿಕರೊಂದಿಗೆ ತೆರಳಿವೆ. ಆದರೆ ಖಾಸಗಿ ಬಸ್‌ ಮಾಲೀಕರು ಮಾತ್ರ ಇನ್ನೂ ಬಸ್‌ ಓಡಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ, ಸುಮಾರು 50 ದಿನಗಳ ಕಾಲ ಬಸ್‌ಗಳನ್ನು ನಿಲ್ಲಿಸಿರುವುದರಿಂದ ಅವುಗಳ ರಿಪೇರಿ ನಡೆಸಬೇಕು. ಬಸ್ಸು ಟಿಕೇಟು ದರ ಹೆಚ್ಚಿಸಲು ಅವಕಾಶ ನೀಡಬೇಕು ಎಂದು ಖಾಸಗಿ ಬಸ್ಸು ಮಾಲೀಕರು ಒತ್ತಾಯಸಿದ್ದಾರೆ.

 

click me!