ಇನ್ಮುಂದೆ ಪೊಲೀಸರಿಗೆ ‘ಡಿಜಿ ಲಾಕರ್‌’ ದಾಖಲೆ ತೋರಿಸಿದರೆ ಸಾಕು!

By Web DeskFirst Published Aug 2, 2019, 8:43 AM IST
Highlights

‘ಡಿಜಿಲಾಕರ್‌’ ಆ್ಯಪ್‌ನಲ್ಲಿ ಸಂಗ್ರಹಿಸಿಕೊಂಡಿರುವ ಚಾಲನಾ ಪರವಾನಗಿ ಹಾಗೂ ಇತರೆ ದಾಖಲೆಗಳನ್ನು ಪರಿಗಣಿಸುವಂತೆ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸೂಚನೆ ನೀಡಿದ್ದಾರೆ. 

ಬೆಂಗಳೂರು [ಆ.02]: ಕೇಂದ್ರ ಸರ್ಕಾರದ ಅಧಿಕೃತ ‘ಡಿಜಿಲಾಕರ್‌’ ಆ್ಯಪ್‌ನಲ್ಲಿ ಸಂಗ್ರಹಿಸಿಕೊಂಡಿರುವ ಚಾಲನಾ ಪರವಾನಗಿ ಹಾಗೂ ಇತರೆ ದಾಖಲೆಗಳನ್ನು ಪರಿಗಣಿಸುವಂತೆ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ವಿಭಾಗದ ಪೊಲೀಸರಿಗೆ ಸೂಚಿಸಿದ್ದಾರೆ.

ಇತ್ತೀಚೆಗೆ ನಗರ ಪೊಲೀಸರು ರಾತ್ರಿ ವೇಳೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹಲವು ಮಂದಿ ‘ಡಿಜಿಲಾಕರ್‌’ನಲ್ಲಿ ಸಂಗ್ರಹಿಸಿಡಲಾಗಿದ್ದ ವಾಹನ ದಾಖಲೆಗಳನ್ನು ತೋರಿಸಿದ್ದರು. ಆದರೆ ಈ ಬಗ್ಗೆ ಒಪ್ಪದ ಪೊಲೀಸರು ಮೂಲ ದಾಖಲೆಗಳನ್ನು ನೀಡುವಂತೆ ಪಟ್ಟು ಹಿಡಿದ್ದಿದ್ದರು. ಅಲ್ಲದೆ, ಮೂಲ ದಾಖಲೆ ತೋರಿಸದ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ಪೀಣ್ಯ ಕಾನೂನು ಸುವ್ಯವಸ್ಥೆ ಪೊಲೀಸರು ವ್ಯಕ್ತಿಯೊಬ್ಬರ ಬೈಕ್‌ ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಡಿಜಿ ಲಾಕರ್‌ನಲ್ಲಿದ್ದ ದಾಖಲೆ ತೋರಿಸಿದ್ದರು. ಇದನ್ನು ಪರಿಗಣಿಸದ ಪೊಲೀಸರು ಮೂಲ ದಾಖಲೆ ಇಲ್ಲ ಎಂದು ಬೈಕ್‌ ಜಪ್ತಿ ಮಾಡಿದ್ದರು.

ಈ ಬಗ್ಗೆ ಟ್ವಿಟ್‌ ಮಾಡಿದ್ದ ಬಾಲ್‌ ಎಂಬುವವರು ದಾಖಲೆ ತೋರಿಸಿದರೂ ಪೊಲೀಸರು ನನ್ನ ಬೈಕ್‌ ಜಪ್ತಿ ಮಾಡಿದ್ದಾರೆ ಎಂದು ಆರೋಪಿಸಿ ಆಯುಕ್ತರಿಗೆ ದೂರು ನೀಡಿದ್ದರು.

ನಿಮ್ಮ ಕಾರ್ಯಾಚರಣೆ ಒಳ್ಳೆಯದು. ಆದರೆ, ಅಮಾಯಕರಿಗೆ ತೊಂದರೆ ಆಗುತ್ತಿದೆ. ದಾಸರಹಳ್ಳಿ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಬೈಕ್‌ ತಡೆದಿದ್ದ ಪೊಲೀಸರು, ಜೆರಾಕ್ಸ್‌ ದಾಖಲೆ ತೋರಿಸಿದರೂ ಅಸಲಿ ದಾಖಲೆ ನೀಡುವಂತೆ ಹೇಳಿದ್ದರು. ಡಿಜಿ ಲಾಕರ್‌ನಲ್ಲಿದ್ದ ದಾಖಲೆ ತೋರಿಸಿದರೂ ಬಿಡಲಿಲ್ಲ. ಮನೆಗೆ ಹೋಗಿ ದಾಖಲೆ ತರುವಷ್ಟರಲ್ಲೇ ಬೈಕ್‌ ಜಪ್ತಿ ಮಾಡಿದ್ದಾರೆ ಎಂದು ಬಾಲ್‌ ಟ್ವಿಟ್‌ನಲ್ಲಿ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌, ಇದು ಆಗಿದ್ದು ಎಲ್ಲಿ? ಸೂಕ್ತ ದಾಖಲೆಗಳನ್ನು ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು. ಮರು ಟ್ವೀಟ್‌ ಮಾಡಿದ್ದ ಬಾಲ್‌, ಸಂಪೂರ್ಣ ಮಾಹಿತಿ ನೀಡಿದ್ದರು. ಭಾನುವಾರ ಬೆಳಿಗ್ಗೆ ಪೀಣ್ಯ ಠಾಣೆಗೆ ಬಾಲ್‌ ಅವರನ್ನು ಕರೆಸಿಕೊಂಡ ಪೊಲೀಸರು, ದಾಖಲೆಗಳನ್ನು ಪರಿಶೀಲನೆ ನಡೆಸಿ ಬೈಕ್‌ ವಾಪಸ್‌ ಕೊಟ್ಟಿದ್ದರು. ಈ ಬಗ್ಗೆ ಟ್ವಿಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಡಿಜಿ ಲಾಕರ್‌ನಲ್ಲಿರುವ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಗಣಿಸುತ್ತಾರೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದರು. ಸಂಚಾರ ಪೊಲೀಸರಿಗೂ ಡಿಜಿ ಲಾಕರ್‌ ಪರಿಶೀಲನೆ ಅನ್ವಯವಾಗಲಿದೆ.

 ಏನಿದು ‘ಡಿಜಿ ಲಾಕರ್‌’?

‘ಡಿಜಿ ಲಾಕರ್‌’ ಕೇಂದ್ರ ಸರ್ಕಾರ ತಂದಿರುವ ಆ್ಯಪ್‌ ಆಗಿದೆ. ಪ್ಲೇ ಸ್ಟೋರ್‌ನಲ್ಲಿ ‘ಈಜಿಜಜಿಔಟ್ಚkಛ್ಟಿ’ ಎಂಬ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ ಆಧಾರ್‌, ಚಾಲನಾ ಪರವಾನಗಿ, ಆರ್‌ಸಿ, ವಿಮೆ ಇನ್ನಿತರ ದಾಖಲೆಗಳು ಇರುತ್ತವೆ. ತಮ್ಮಗೆ ಅಗತ್ಯವಿರುವ ದಾಖಲೆಗಳನ್ನು ನೊಂದಣಿ ಸಂಖ್ಯೆ ದಾಖಲೆಸಿ ದಾಖಲಾತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ತಮ್ಮ ಬಳಿ ಯಾವುದೇ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲಿಗೆ ಡಿಜಿ ಲಾಕರ್‌ನಲ್ಲಿರುವ ದಾಖಲೆ ತೋರಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಮಳೆಗಾಲ ಹಾಗೂ ಮೂಲ ದಾಖಲೆಗಳನ್ನು ಕೊಂಡೊಯ್ಯುವುದು ತಪ್ಪಲಿದೆ. ಜತೆಗೆ ಪೊಲೀಸರ ಪರಿಶೀಲನೆಗೂ ಸುಲಭವಾಗಲಿದೆ.

click me!