ಠಾಣೆ ಬದಲು ಅಪರಾಧ ಹಿನ್ನೆಲೆ ಪ್ರದೇಶದಲ್ಲಿ ಪೊಲೀಸರ ಹಾಜರಾತಿ!

Published : Aug 02, 2019, 08:32 AM IST
ಠಾಣೆ ಬದಲು ಅಪರಾಧ ಹಿನ್ನೆಲೆ ಪ್ರದೇಶದಲ್ಲಿ ಪೊಲೀಸರ ಹಾಜರಾತಿ!

ಸಾರಾಂಶ

ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ದಿನದಿಂದ ಹೊಸ ಹೊಸ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ. ಇದೀಗ ಮತ್ತೊಂದು ನೂತನ ವ್ಯವಸ್ಥೆ ಆರಂಭಿಸಲಿದ್ದಾರೆ. 

ಬೆಂಗಳೂರು [ಆ.02]: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸ್‌ ಆಯುಕ್ತರು ‘ಹೊಸ ಗಸ್ತು ವ್ಯವಸ್ಥೆ’ ಜಾರಿಗೊಳಿಸಿದ್ದು, ಇನ್ಮುಂದೆ ಠಾಣೆಗಳ ಬದಲಾಗಿ ಕರ್ತವ್ಯ ಹಾಜರಾತಿಯನ್ನು ಹೊರಗೆ ನಡೆಸಲು ನಿರ್ಧರಿಸಲಾಗಿದೆ.

ಬೀಟ್‌ ಕಾಫ್ಸ್‌ (ರೋಲ್‌ ಕಾಲ್‌) ಹೆಸರಿನಲ್ಲಿ ಹೊಸ ವ್ಯವಸ್ಥೆಗೆ ಜಾರಿಗೆ ಬಂದಿದೆ. ಈ ಮೊದಲು ರಾತ್ರಿ ಪಾಳಿಯ ಗಸ್ತು ಕರ್ತವ್ಯದ ಸಿಬ್ಬಂದಿಯವರ ರಾತ್ರಿ ಕರ್ತವ್ಯದ ಹಾಜರಾತಿಯನ್ನು ಪ್ರತಿ ದಿನ ಠಾಣೆಗಳಲ್ಲಿ ನಡೆಸಲಾಗುತ್ತಿತ್ತು. ಅದನ್ನು ಠಾಣಾ ವ್ಯಾಪ್ತಿಯ ಸೂಕ್ಷ್ಮ ಮತ್ತು ಅಪರಾಧ ಹಿನ್ನೆಲೆ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಈ ವ್ಯವಸ್ಥೆಯು ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವುದರ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿರುವ ಸೂಕ್ಷ್ಮ ಮತ್ತು ಅಪರಾಧ ಹಿನ್ನೆಲೆ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸುವ ಉಭಯ ಉದ್ದೇಶಗಳನ್ನು ಹೊಂದಿದೆ ಎಂದು ಆಯುಕ್ತರು ಹೇಳಿದ್ದಾರೆ.

ಇತ್ತೀಚೆಗೆ ನಗರ ಎಲ್ಲಾ ವಿಭಾಗದ ಡಿಸಿಪಿ ಹಾಗೂ ಠಾಣಾಧಿಕಾರಿಗಳು ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರ ನೇತೃತ್ವದಲ್ಲಿ ತಡರಾತ್ರಿವರೆಗೂ ಗಸ್ತು ತಿರುಗಿದ್ದರು. ಈ ರೀತಿ ಗಸ್ತು ತಿರುಗುವುದರಿಂದ ರಾತ್ರಿ ವೇಳೆ ನಡೆಯುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದು. ಹೀಗಾಗಿ ಗಸ್ತು ವ್ಯವಸ್ಥೆಯನ್ನು ಬಲಗೊಳಿಸುವ ಉದ್ದೇಶದಿಂದ ಠಾಣೆಗಳಲ್ಲಿ ನಡೆಸುವ ರೂಲ್‌ಕಾಲ್‌ನ್ನು ಆಯಾ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ನಡೆಸಲು ಆಯುಕ್ತರು ಸೂಚಿಸಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಪೊಲೀಸರಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿಯುವ ಮೂಲಕ ನಿರ್ಭೀತ ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!