ಕೊರೋನಾ ಭೀತಿ: ಪಾತಾಳಕ್ಕೆ ಕುಸಿದ ತರಾಕರಿ ಬೆಲೆ, ಕೊಳ್ಳೋರೆ ಇಲ್ಲ!

Kannadaprabha News   | Asianet News
Published : Mar 12, 2020, 07:40 AM IST
ಕೊರೋನಾ ಭೀತಿ: ಪಾತಾಳಕ್ಕೆ ಕುಸಿದ ತರಾಕರಿ ಬೆಲೆ, ಕೊಳ್ಳೋರೆ ಇಲ್ಲ!

ಸಾರಾಂಶ

ಪಾತಾಳಕ್ಕೆ ಕುಸಿದ ತರಕಾರಿ ಬೆಲೆ| ಕೊರೋನಾ ಭಯ| ಹೊರ ರಾಜ್ಯಕ್ಕೂ ಹೋಗುತ್ತಿಲ್ಲ; ಇಲ್ಲೂ ಖರೀದಿದಾರರು ಸಿಗುತ್ತಿಲ್ಲ| ಕಂಗಾಲಾದ ರೈತಾಪಿ ಕುಟುಂಬ| 

ಶಿವಾನಂದ ಗೊಂಬಿ 

ಹುಬ್ಬಳ್ಳಿ(ಮಾ.12): ಕೊರೋನಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿಯ ಪರಿಣಾಮ ತರಕಾರಿ ವ್ಯಾಪಾರದ ಮೇಲೂ ಆಗಿದ್ದು ಬಹುತೇಕ ಎಲ್ಲ ಕಾಯಿಪಲ್ಲೆ ಬೆಲೆ ಪಾತಾಳಕ್ಕೆ ಕುಸಿದಿವೆ. ಇದು ರೈತರನ್ನು ಕಂಗೆಡಿಸಿದೆ. ಕೆಲ ರೈತರಂತೂ ಮಾರುಕಟ್ಟೆಗೆ ತರಕಾರಿ ತರದೇ ಹೊಲದಲ್ಲೇ ಹರಗಿ ನಿಟ್ಟುಸಿರು ಹಾಕುತ್ತಿದ್ದಾರೆ. 

ಹೂವು ಕೋಸು, ಎಲೆಕೋಸು, ಲಿಂಬೆಹಣ್ಣು, ಕೋತಂಬರಿ, ಟೊಮೆಟೋ, ಮೂಲಂಗಿ ಸೇರಿದಂತೆ ಎಲ್ಲ ತರಕಾರಿಗಳ ಬೆಲೆಯೂ ಪಾತಾಳಕ್ಕಿಳಿದಿವೆ. ಕೊರೋನಾ, ಹಕ್ಕಿಜ್ವರ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಳಿಗೂ ತರಕಾರಿಗಳಿಗೂ ಏನು ಸಂಬಂಧ ಎನ್ನುತ್ತೀರಾ? ಹಾಗೆ ನೋಡಿದರೆ ಸೋಂಕುಗಳನ್ನು ತಡೆಗಟ್ಟಲು ಸಸ್ಯಾಹಾರವೇ ಹೆಚ್ಚು ಸೂಕ್ತ ಎನ್ನುವ ಮಾತಿದೆ. ಮಾಂಸಾಹಾರಿಗಳು ಸಹ ಸಸ್ಯಾಹಾರಿಗಳಾಗಿ ಬದಲಾಗುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಂಸಾಹಾರದ ಹೋಟೆಲ್‌ಗಳಲ್ಲಿ ಬಿಜಿನೆಸ್ ಕಡಿಮೆಯಾಗುತ್ತಿದೆ. ಆದರೆ, ಅತ್ತ ಮಾಂಸಾಹಾರ ತಿನ್ನುವವರ ಸಂಖ್ಯೆ ಕಡಿಮೆಯಾದ ಪರಿಣಾಮ ತರಕಾರಿಗಳ ಬೆಲೆ ಗಗನಕ್ಕೇರಬೇಕಿತ್ತು. ಹಾಗೆ ಆಗುತ್ತಿಲ್ಲ. 10-15 ದಿನಗಳಿಂದ ಈಚೆಗೆ ಸಿಕ್ಕಾಪಟ್ಟೆ ತರಕಾರಿ ಬೆಲೆ ಕುಸಿಯುತ್ತಿವೆ. ಹದಿನೈದು ದಿನಗಳ ಹಿಂದೆಯಷ್ಟೇ 30 ಎಲೆಕೋಸುಗಳಿರುವ ದೊಡ್ಡ ಬ್ಯಾಗ್‌ಗೆ 200 ರಷ್ಟಿದ್ದ ದರ ಇದೀಗ 50-80ಕ್ಕೆ ಕುಸಿದಿದೆ. 
ಇನ್ನೂ 100 ಮೂಲಂಗಿಗಳಿರುವ ಕಟ್ಟಿಗೆ 200 ರಿಂದ 250ರ ವರೆಗೆ ಇತ್ತು. ಅದೀಗ 120 ರಿಂದ 130ಕ್ಕೆ ಕುಸಿದಿದೆ. ಟೋಮೆಟೋ 25 ಕೆಜಿ ಬಾಕ್ಸ್‌ಗೆ 150- 200 ರ ವರೆಗೆ ದರವಿತ್ತು. ಅದೀಗ 50 ಗೆಲ್ಲ ಸಿಗುವಂತಾಗಿದೆ. ಇನ್ನೂ ಹೂವುಕೋಸನ್ನು 6ಗೆ ಒಂದರಂತೆ ಮಾರಿದರೂ ಜನ ಕೇಳುತ್ತಿಲ್ಲ. 100 ಲಿಂಬೆಹಣ್ಣಿನ ಬುಟ್ಟಿಗೆ ಮೊದಲು 200-300 ರ ವರೆಗೂ ಸಿಗುತ್ತಿತ್ತು. ಈಗ 50-80 ಗೆ ಮಾರಾಟವಾಗುತ್ತಿದೆ ಅಷ್ಟೇ. ಶೇ.40 ರಿಂದ 50 ರಷ್ಟು ಬೆಲೆ ಕುಸಿತವಾಗಿದೆ. 

ರೈತ ಕಂಗಾಲು: 

ತರಕಾರಿ ಬೆಲೆ ಕುಸಿಯುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ತರಕಾರಿಯಿಂದ ಲಾಭ ಬರುವುದು ಒತ್ತಟ್ಟಿಗಿರಲಿ, ಹಾಕಿದ ದುಡ್ಡು ಕೂಡ ವಾಪಸ್ ಬರುತ್ತಿಲ್ಲ. ಎಷ್ಟೋ ಜನ ರೈತರು ಮಾರುಕಟ್ಟೆಯಲ್ಲಿನ ಬೆಲೆ ನೋಡಿ ಹೌಹಾರುವಂತಾಗಿದೆ. ಮತ್ತೆ ಕೆಲ ರೈತರು ಹೊಲದಲ್ಲೇ ಬೆಳೆದಿರುವ ಬೆಳೆಯನ್ನು ಹಾಳು ಮಾಡಿ(ಹರಗಿ)ದ ಉದಾಹರಣೆಗಳೂ ಇವೆ. ತಾಲೂಕಿನ ಪಾಲಿಕೊಪ್ಪ ಗ್ರಾಮದ ರೈತ ಬಸರೆಡ್ಡಿ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎಲೆಕೋಸನ್ನು ತಾನೇ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾನೆ. ಇದೀಗ ಮುಂಗಾರು ಪ್ರಾರಂಭವಾದ ಮೇಲೆ ಮತ್ತೇನಾದರೂ ಬೇರೆ ಬೆಳೆ ಬೆಳೆಯುತ್ತೇನೆ. ಈಗ ಎಲೆಕೋಸಿಗೆ ಬೆಲೆ ಇಲ್ಲ ಎಂದು ನಿಟ್ಟುಸಿರು ಬಿಟ್ಟರು. 

ಕಾರಣವೇನು?: 

ಹುಬ್ಬಳ್ಳಿ ಎಪಿಎಂಸಿಯಿಂದ ಗೋವಾ, ಮಹಾರಾಷ್ಟ್ರ ಹಾಗೂ ಹೈದ್ರಾಬಾದ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ತರಕಾರಿ ಹೋಗುತ್ತಿತ್ತು. ಕೊರೋನಾ, ಹಕ್ಕಿಜ್ವರ, ಹಂದಿಜ್ವರ ಸೇರಿದಂತೆ ಮತ್ತಿತರರ ಸಾಂಕ್ರಾಮಿಕ ರೋಗಗಳ ಭೀತಿಯಿಂದ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ. ಕಳೆದ ಎಂಟತ್ತು ದಿನಗಳಿಂದ ಈ ರಾಜ್ಯಗಳಿಗೆ ತರಕಾರಿ ಅಷ್ಟೊಂದು ಪ್ರಮಾಣದಲ್ಲಿ ಹೋಗುತ್ತಿಲ್ಲ. ರವಾನೆಯಾಗುವ ತರಕಾರಿ ಪ್ರಮಾಣ ಗಮನೀಯವಾಗಿ ಕಡಿಮೆಯಾಗಿದೆ. 

ಹೊರ ರಾಜ್ಯಗಳ ಖರೀದಿದಾರರು ದೊಡ್ಡ ಪ್ರಮಾಣದಲ್ಲೇ ತರಕಾರಿ ಖರೀದಿಸುತ್ತಿದ್ದರು. ಈಗ ಅವರು ಬರುತ್ತಿಲ್ಲ. ಇಲ್ಲಿನ ರಿಟೇಲ್ ವ್ಯಾಪಾರಸ್ಥರೇ ಖರೀದಿಸಬೇಕು. ಅವರು ತಮಗೆಷ್ಟು ಬೇಕೋ ಅಷ್ಟೇ ತರಕಾರಿ ಖರೀದಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಆವಕದ ಪ್ರಮಾಣ ಹೆಚ್ಚಾಗುತ್ತಿದೆ. ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣದಿಂದಾಗಿ ತರಕಾರಿ ಬೆಲೆಗಳೆಲ್ಲ ಪಾತಾಳಕ್ಕಿಳಿಯುತ್ತಿವೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಂಬೋಣ. ಇತ್ತ ರಿಟೇಲ್ ಮಾರುಕಟ್ಟೆಯಲ್ಲೂ ಮೊದಲಿಗೆ ಹೋಲಿಸಿದರೆ ಕೊಂಚ ಕಡಿಮೆಯಾಗಿರುವುದು ಕಂಡುಬರುತ್ತಿದೆ. ಒಟ್ಟಿನಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ತರಕಾರಿ ಬೆಲೆಯೆಲ್ಲ ಕುಸಿದು ರೈತ ಕಂಗಾಲಾಗಿರುವುದು ಸತ್ಯ.

ಗೋವಾ, ಮಹಾರಾಷ್ಟ್ರ, ಹೈದರಾಬಾದ್ ಗಳಿಂದ ಇಲ್ಲಿಂದ ತರಕಾರಿ ಹೋಗುತ್ತಿತ್ತು. ಇದೀಗ ಸ್ವಲ್ಪ ಕಡಿಮೆಯಾಗಿದೆ. ಈ ಕಾರಣದಿಂದಾಗಿ ಇಲ್ಲಿ ಬೆಲೆ ಕುಸಿತವಾಗುತ್ತಿದೆ. ಹಾಗೆ ನೋಡಿದರೆ ಈಗ ತರಕಾರಿ ದರ ಹೆಚ್ಚಾಗಬೇಕಿತ್ತು ಎಂದು ಎಪಿಎಂಸಿ ಕಾರ್ಯದರ್ಶಿ ಗೋವಿಂದರಡ್ಡಿ ಕಬ್ಬೇರಹಳ್ಳಿ ಹೇಳಿದ್ದಾರೆ. 

ಅದ್ಯಾವುದೋ ರೋಗ ಬರ್ತಾ ಇದೆ ಅಂತಲ್ಲ ಸಾರ್. ಅದಕ್ಕೆ ನಮ್ಮ ತರಕಾರಿ ಒಯ್ಯಾಕ್ ಯಾರು ಹೊರಗಿಂದ ಬರ್ತಾ ಇಲ್ಲ. ಹೀಂಗಾಗಿ ಬೆಲೆ ಇಳಿದೈತಿ. ನಾವು ಹಾಕಿರುವ ಅಸಲು ಕೂಡ ಬರ್ತಾ ಇಲ್ಲ ನೋಡಿ ಎಂದು  ಅಮರಗೋಳದ ರೈತ ಹನುಮಂತಪ್ಪ ತಿಳಿಸಿದ್ದಾರೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ