ಬನ್ನೇರುಘಟ್ಟ ಕಾಪಾಡಿ ಮಂತ್ರ, ಸಿಎಂಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ

By Suvarna NewsFirst Published Mar 11, 2020, 7:53 PM IST
Highlights

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕಡಿತ ನಿರ್ಧಾರ/ ಸಿಎಂ ಬಿಎಸ್ ಯಡಿಯೂರಪ್ಪಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ/ ನಿರ್ಧಾರ ಪುನರ್ ಪರಿಶಿಲಿಸಲು ಮನವಿ

ಬೆಂಗಳೂರು[ಮಾ. 11] ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕಡಿತ ನಿರ್ಧಾರವನ್ನು ಪುನರ್ ಪರಿಶೀಲಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ.

260 ಕಿಮೀ ವ್ಯಾಪ್ತಿಯ ಅರಣ್ಯ ಪ್ರದೇಶ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಆಶ್ರಯ ತಾಣವಾಗಿದೆ.   ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್‌ಪಿ) ಬೆಂಗಳೂರಿಗರ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದು ವನ್ಯಮೃಗಗಳ ಕಾರಿಡಾರ್ ಮಾತ್ರವಲ್ಲ, ಬೆಂಗಳೂರಿನ ಸಮೀಪದಲ್ಲಿರುವ ಹಸಿರು ವಲಯವೂ ಹೌದು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು, ಉಷ್ಣತೆಯನ್ನು ಕಾಪಾಡಿಕೊಳ್ಳಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಹಾಗೂ ತನ್ಮೂಲಕ ಬೆಂಗಳೂರು ಪ್ರಜೆಗಳ ಜೀವನಗುಣಮಟ್ಟ ಸುಧಾರಿಸಲು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಮಹತ್ವ ವಿವರಿಸಿದ್ದಾರೆ.

ಈಗಿರುವ ಅರಣ್ಯ ಪ್ರದೇಶ ಅತಿ ಸೂಕ್ಷ್ಮ ತಾಣ ಎಂದು  2015ರಲ್ಲಿ ವಿಜ್ಞಾನಿ ಟಿವಿ ರಾಮಚಂದ್ರ ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯುಮನ್ ಸೆಟಲ್ ಮೆಂಟ್ಸ್ ಬೆಂಗಳೂರನ್ನು ಉಷ್ಣತೆಯಿಂದ ಸುರಕ್ಷಿತವಾಗಿ ಕಾಪಾಡಲು ಈ ಅರಣ್ಯ ಬೇಕು ಎಂದು ಹೇಳಿದೆ.

ಬನ್ನೇರುಘಟ್ಟ ಉದ್ಯಾನ ಪ್ರದೇಶ ಕಡಿತ ಮಾಡಿದರೆ ಬೆಂಗಳೂರಿನ ಮೇಲಾಗುವ ಪರಿಣಾಮ ಎಂಥದ್ದು?

ಸುಪ್ರೀಂ ಕೋರ್ಟ್ ಸಹ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಕಾಪಾಡಲು ನಿರ್ದೇಶನ ಸೂತ್ರ ನೀಡಿದೆ. ಇಲ್ಲಿ ತರುವ ಒಂದು ಚಿಕ್ಕ ಬದಲಾವಣೆ ಪರಿಸರ ಚಕ್ರದ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು ಎಂಬ ಎಚ್ಚರಿಕೆಯನ್ನು ಮರೆಯಬಾರದು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೂ ವೇದಿಕೆಯಾಗಬಹುದು ಎಂಬ ಆತಂಕ ನಾವು ಮರೆಯಬಾರದು ಎಂಬುದನ್ನು ಪತ್ರದಲ್ಲಿ ವಿವರಿಸಿದ್ದಾರೆ.

ಆತಂಕದ ಘಂಟೆ ಬಾರಿಸುತ್ತಲೇ ಇದೆ. ನಾಗರಿಕರು ಈ ಬಗ್ಗೆ ದನಿ ಎತ್ತಿದ್ದಾರೆ, ಆನ್ ಲೈನ್ ಪೆಟಿಶನ್ ಗಳು ಆರಂಭವಾಗಿವೆ.  ಸರ್ಕಾರ ತನ್ನ ಯೋಜನೆಯನ್ನು ಮತ್ತೆ ಪುನರ್ ವಿಮರ್ಶೆಗೆ ಒಳಪಡಿಸಬೇಕು ಎಂದು ಸಂಸದರು ಕೋರಿದ್ದಾರೆ.

ನಮ್ಮ ಸರ್ಕಾರ ಪರಿಸರ ಕಾಪಾಡಲು ಮುಂದಿನ ಪೀಳಿಗೆಗೆ ಅದನ್ನು ಕಾಪಿಡಲು ಬದ್ಧವಾಗಿದೆ ಎಂದು ನಾನು ನಂಬಿದ್ದೇನೆ.  ಹಾಗಾಗಿ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ಪ್ರದೇಶ ಕಡಿತ ವಿಚಾರವನ್ನು ಅತಿ ಶೀಘ್ರವಾಗಿ ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂದು ಸಂಸದ ರಾಜೀವ್ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಯಡಿಯೂರಪ್ಪ ಸೇರಿದಂತೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಕೇಂದ್ರ ರಸಾಯನಿಕ ಸಚಿವ ಸದಾನಂದ ಗೌಡ,  ರಾಜ್ಯದ ಅರಣ್ಯ ಸಚಿವ ಆನಂದ್ ಸಿಂಗ್, ಸಂದರಾದ ಪಿಸಿ ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರಿಗೂ ಪತ್ರದ ಪ್ರತಿ ಕಳುಹಿಸಿಕೊಟ್ಟಿದ್ದಾರೆ.

 

click me!