* ಸಾರ್ವಜನಿಕ ಉದ್ದಿಮೆಗಳಲ್ಲಿ ಕರ್ನಾಟಕ ನೀರಾವರಿ ನಿಗಮ ನಷ್ಟದಲ್ಲಿದೆ ಎಂದು ಸರ್ಕಾರವೇ ತಿಳಿಸಿದೆ
* ಎಲ್ಲ ನಿಗಮಗಳಿಗಿಂತ ಇಲ್ಲಿನ ಅಧಿಕಾರಿಗಳಿಗೆ ಹೆಚ್ಚಿನ ಸಂಬಳವಿದೆ. ಅಧಿಕಾರಿಗಳು ಶ್ರೀಮಂತರಾಗಿದ್ದಾರೆ
* ಅಧಿಕಾರಿಗಳು ಸರ್ಕಾರದ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ
ಹುಬ್ಬಳ್ಳಿ(ಜೂ.26): ‘ಕರ್ನಾಟಕ ನೀರಾವರಿ ನಿಗಮ’ ಕಚೇರಿಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದ್ದು, ಈ ಕುರಿತು ಸಿಬಿಐ ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ರೈತ ಸೇನಾ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಉದ್ದಿಮೆಗಳಲ್ಲಿ ಕರ್ನಾಟಕ ನೀರಾವರಿ ನಿಗಮ ನಷ್ಟದಲ್ಲಿದೆ ಎಂದು ಸರ್ಕಾರವೇ ತಿಳಿಸಿದೆ. ಎಲ್ಲ ನಿಗಮಗಳಿಗಿಂತ ಇಲ್ಲಿನ ಅಧಿಕಾರಿಗಳಿಗೆ ಹೆಚ್ಚಿನ ಸಂಬಳವಿದೆ. ಅಧಿಕಾರಿಗಳು ಶ್ರೀಮಂತರಾಗಿದ್ದಾರೆ. ಆದರೆ ನಿಗಮ ನಷ್ಟದಲ್ಲಿದೆ. ಅಧಿಕಾರಿಗಳು ಸರ್ಕಾರದ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದು, ಸರ್ಕಾರ, ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.
ಧಾರವಾಡ ಉಪವಿಭಾಗಾಧಿಕಾರಿ ಕಾರ್ ಜಪ್ತಿ: ಕಚೇರಿಯಿಂದ ಮನೆಗೆ ನಡ್ಕೊಂಡು ಹೋದ ಸರ್ಕಾರಿ ಅಧಿಕಾರಿ..!
ಈ ನಿಗಮದಲ್ಲಿ 2016ರಿಂದ 2019ರ ವರೆಗೆ . 30 ಕೋಟಿ ಲೂಟಿ ಮಾಡಿದ್ದಾರೆ. ಸರ್ಕಾರದ ಆದೇಶವಿಲ್ಲದೆ ನಿಗಮದಲ್ಲಿ ಅನೇಕ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಎರಡ್ಮೂರು ವರ್ಷಕ್ಕೊಮ್ಮೆ ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡುವ ಸರ್ಕಾರ ನಿಗಮದ ನಿರ್ದೇಶಕ ರಾಕೇಶ್‌ಸಿಂಗ್ ಅವರನ್ನು ಏಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಕುರಿತು ಈಗಾಗಲೇ ಸಾಕಷ್ಟುಬಾರಿ ಮನವಿ ಮಾಡಲಾಗಿದೆ. ನಿಗಮ 22 ಜಿಲ್ಲೆಗಳ ವ್ಯಾಪ್ತಿಗೊಳಪಟ್ಟಿದೆ. ದಾವಣಗೆರೆ ನಿಗಮದ ವ್ಯಾಪ್ತಿಯಲ್ಲಿಲ್ಲ. ಅದಕ್ಕೆ ಅದನ್ನು ಕೈಬಿಟ್ಟು ಧಾರವಾಡದಲ್ಲಿ ಗುರುತಿಸಿರುವ 2 ಎಕರೆ ಜಾಗದಲ್ಲಿಯೇ ನಿಗಮದ ಕಚೇರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಚೆಕ್‌ಡ್ಯಾಂ, ಸೇತುವೆ ನಿರ್ಮಾಣ ಮಾಡದೆ ಸರ್ಕಾರದ ಹಣ ಲೂಟಿ ಮಾಡಲಾಗಿದೆ. ಬೆಣ್ಣೆಹಳ್ಳ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಕಂಡು ಬಂದಿದೆ. ಮಲಪ್ರಭಾ ಅಚ್ಚುಕಟ್ಟು ಹಾಗೂ ಕಾಲುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ. ನೀರಾವರಿ ನಿಗಮದ ಅಧಿಕಾರಿಗಳು, ಸಿಬ್ಬಂದಿ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸೇನಾದ ರಾಜ್ಯ ಉಪಾಧ್ಯಕ್ಷ ಮಲ್ಲಣ್ಣ ಆಲೇಕರ, ರಾಜ್ಯ ವಕ್ತಾರ ಗುರು ರಾಯನಗೌಡ್ರ, ಗದಗ ಜಿಲ್ಲಾ ಸಂಚಾಲಕ ಮಂಜಯ್ಯಸ್ವಾಮಿ ಅರವಟಗಿಮಠ ಇದ್ದರು.
‘ರಾಜಕೀಯ ಕೂಸಾಗಿ ಮಹದಾಯಿ ಬಳಕೆ’
ಮಹದಾಯಿ ಯೋಜನೆ ಜಾರಿಗಾಗಿ ನಡೆದ ಹೋರಾಟದಲ್ಲಿ ಪಾದಯಾತ್ರೆ ಮಾಡಿದ್ದವರು ಇಂದು ಮುಖ್ಯಮಂತ್ರಿಯಾಗಿದ್ದು (ಬಸವರಾಜ ಬೊಮ್ಮಾಯಿ), ಯೋಜನೆ ಅನುಷ್ಠಾನ ಮಾಡುವಲ್ಲಿ ವಿಫಲರಾಗಿದ್ದಾರೆ. ಯೋಜನೆ ಕೇವಲ ರಾಜಕೀಯ ಕೂಸಾಗಿ ಬಳಕೆಯಾಗುತ್ತಿದೆ ಎಂದು ವೀರೇಶ ಸೊಬರದಮಠ ಸ್ವಾಮೀಜಿ ಆರೋಪಿಸಿದರು.
ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದ ಬಸವರಾಜ ಬೊಮ್ಮಾಯಿ ಅವರು ಈಗ ಸಿಎಂ ಆಗಿದ್ದರೂ ಯೋಜನೆ ಅನುಷ್ಠಾನಗೊಳಿಸಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ-ಧಾರವಾಡ: ಕಿರಿದಾಗಲಿದೆ ಬಿಆರ್‌ಟಿಎಸ್ ಕಾರಿಡಾರ್?
ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಯೋಜನೆಯ ದಾಖಲೆ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ . 750 ಕೋಟಿ ವೆಚ್ಚದ ಯೋಜನೆ ಈಗ . 2 ಸಾವಿರ ಕೋಟಿ ತಲುಪಿದೆ. ಕೇವಲ . 50 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಬಹುದಾಗಿದೆ. ಆದರೆ ರಾಜಕೀಯ ಮುಖಂಡರ ಇಚ್ಚಾಶಕ್ತಿ ಕೊರತೆಯಿಂದ ಯೋಜನೆ ಅನುಷ್ಠಾನವಾಗುತ್ತಿಲ್ಲ ಎಂದು ದೂರಿದರು.
ಈ ಭಾಗದ ಸಂಸದ, ಕೇಂದ್ರ ಸಚಿವರಾಗಿರುವ ಪ್ರಹ್ಲಾದ ಜೋಶಿ ಸಿಡಬ್ಲ್ಯೂಸಿ ಅನುಮತಿ, ಕೇಂದ್ರ ಜಲಸಂಪನ್ಮೂಲ ಇಲಾಖೆ ಜತೆ ಸಮನ್ವಯ ಸಾಧಿಸಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಬೇಕಾಗಿತ್ತು. ಅವರಿಗೂ ಯೋಜನೆ ಜಾರಿಯಾಗುವುದು ಬೇಡವಾಗಿದೆ. ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜೂ. 26ರಂದು ಮನವಿ ಸಲ್ಲಿಸಲಾಗುವುದು ಎಂದರು.