
ಬೆಂಗಳೂರು (ನ.1): ರಾಜ್ಯದ ಪೊಲೀಸರು ಚಡ್ಡಿ ಹಾಕಿಕೊಂಡು ಡ್ಯೂಟಿ ಮಾಡುವಾಗ ಸೊಳ್ಳೆ ಕಡಿಸಿಕೊಳ್ಳುತ್ತಿದ್ದರು. ಈ ವೇಳೆ ಪೊಲೀಸರಿಗೆ ಪ್ಯಾಂಟ್ ಕೊಡಬೇಕೆಂದು ಹೋರಾಟ ಮಾಡಿದ್ದೆ. 1968ರಲ್ಲಿ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದರು. ನಾನು ಮದ್ರಾಸ್‌ಗೆ ಹೋಗಿದ್ದಾಗ ಪ್ಯಾಂಟ್ ಹಾಕಿಕೊಂಡಿದ್ದ ಪೊಲೀಸರನ್ನು ನೋಡಿದ್ದೆ. ಇದನ್ನೇ ಸಿಎಂ ಗಮನಕ್ಕೆ ತಂದಾಗ ಅವರು ಪ್ಯಾಂಟ್ ನೀಡಲು ಒಪ್ಪಿಕೊಂಡಿದ್ದರು ಎಂದು ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ನೆನಪಿಸಿಕೊಂಡಿದ್ದಾರೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ರಾಜ್ಯೋತ್ಸವ ಆಚರಣೆಯ ವೇಳೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಅವರ ಎದುರಲ್ಲೇ ಹಳೇಯ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ.
ವಾಟಾಳ್ ನಾಗರಾಜ್, ಸಾ ರಾ ಗೋವಿಂದ್, ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡ ಪರ ಸಂಘಟನೆಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಜ್ಯೋತ್ಸವ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, 'ಈಗಲೂ ಪೊಲೀಸರ ಹಲವು ಬೇಡಿಕೆಗಳಿವೆ. ಔರಾದ್ಕರ್ ವರದಿ ಸಂಪೂರ್ಣ ಜಾರಿ ಮಾಡಬೇಕು. ಪತಿ- ಪತ್ನಿಯರ ವರ್ಗಾವಣೆಗೆ ಅವಕಾಶ ನೀಡಬೇಕು. ವೀರೇಂದ್ರ ಪಾಟೀಲ್ ಬಿಟ್ಟರೆ ಪೊಲೀಸ್‌ಗೆ ಅನುಕೂಲ ಮಾಡಿದ್ದು ಸಿದ್ದರಾಮಯ್ಯ ಅವರೇ, ಅರಸು ಪ್ಯಾಂಟ್ ಕೊಟ್ಟರು, ನೀವು ಪೀ ಕ್ಯಾಪ್ ಟೋಪಿ ಕೊಟ್ಟಿದ್ದೀರಿ' ಎಂದು ಸಿಎಂ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ 8 ಬಾರಿ ಈ ಕಾರ್ಯಕ್ರಮಕ್ಕೆ ಬಂದಿದ್ಧಾರೆ. ಮುಂದೆ ಮೂರ್ನಾಲ್ಕು ಬಾರಿ ಬರ್ತಾರೆ. ಬಂದೇ ಬರ್ತಾರೆ. ಬರಲೇಬೇಕು. ನಿಮ್ಮ ಆರೋಗ್ಯ ಚೆನ್ನಾಗಿ ಇರುವ ಸಿಎಂ ಆಗಿರಿ. ನೀವು ಸಿಎಂ ಆಗಿದ್ದರೆ, ರಾಜ್ಯಕ್ಕೆ ಶಾಂತಿ ನೆಮ್ಮದಿ. ಎಂತಹದೇ ಸಂದರ್ಭದಲ್ಲಿ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ನೀವು ರಾಜೀನಾಮೆ ಕೊಡಬಾರದು. ಒತ್ತಡಕ್ಕೆ ಮಣಿಯಬೇಡಿ. ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ. ಅದೇನು ಆಗುತ್ತದೆ ನೋಡೋಣ ಎಂದು ಸವಾಲ್ ಹಾಕಿದ್ದಾರೆ.
ಅರಮನೆಯ ಮೈದಾನದಲ್ಲಿ ಸ್ವಾಮೀಜಿ ಗಳು ಸೇರಿದ್ದಾಗ, ನೀವೋಬ್ಬರೇ ಬಿಳಿ ಅಂಗಿಯಲ್ಲಿ ಇದ್ದವರು. ಅಲ್ಲಿ ಕಂಡಿದ್ದು ವಿಭೂತಿ ಮಾತ್ರ.. ಬಿ ಡಿ ಜತ್ತಿ ಮಾತ್ರ ವಿಭೂತಿ ಹಚ್ಚುತ್ತಿದ್ದರು. ನೀವು ಕಾವಿ ಅಂಗಿ ಹಾಕೋದು ನಿಮಗೆ ಬಿಟ್ಟಿದ್ದು. ವಿಭೂತಿ ಹಚ್ಚೋದು ಮುಂದುವರಿಸಿ ಎಂದು ಸಲಹೆ ನೀಡಿದರು.
ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಸವಣ್ಣ, ಕನಕದಾಸ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲು ಮುಂದಾಗಿರೋದು ಒಳ್ಳೆಯ ಬೆಳವಣಿಗೆ. ದೇವರಾಜು ಅರಸು ಹೆಸರು ಇಡಲು ಸಹ ಮುಂದಾಗಿದ್ದೀರಿ. ದೇವರಾಜು ಅರಸು ಅವರಿಗೆ ಬಡವರ ಬಂಧು. ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜು ಅರಸು ಹೆಸರು ಇಡಿ. ಕನ್ನಡ ಪರ ಸಂಘಟನೆ ನಾಯಕರ ಮೇಲಿನ ಕೇಸ್ ವಾಪಸ್ ಪಡೆಯಿರಿ ಎಂದು ಸಿಎಂ ಎದುರಲ್ಲೇ ಅವರಿಗೆ ಒತ್ತಾಯ ಮಾಡಿದರು.
ಶಿಗ್ಗಾಂವ್ ನಲ್ಲಿ ಹೋರಾಟ ಮಾಡಿದ ನಮಗೆ ಚೆನ್ನಾಗಿ ನೋಡಿ ಕೊಳ್ಳಲು ಸಿದ್ದರಾಮಯ್ಯ ಸೂಚಿಸಿದ್ದರು. ಆಗ ಪೊಲೀಸ್ ನವರು ನಮಗೆ ಹಾರ ಹಾಕಿ ಅರೆಸ್ಟ್ ಮಾಡಲು ಬಂದಿದ್ದರು ಎಂದು ಹೇಳುವ ಮೂಲಕ ತಮಾಷೆಯ ಪ್ರಸಂಗವನ್ನು ಅವರು ನೆನಪಿಸಿಕೊಂಡಿದ್ದಾರೆ.
ರಾಜಕೀಯದಿಂದ ನಿವೃತ್ತಿ ಮಾಡು ಆಡುತ್ತಿದ್ದೀರಿ. ಅದನ್ಯಾಕೆ ಹೇಳ್ತೀರಿ? ನೀವು ಈಗ ಬಹಳ ಪಕ್ವ ಆಗಿದ್ದೀರಿ. ಮೊದಲಿನ ತರಹ ಈಗ ಇಲ್ಲ ನೀವು. ಮೊದಲಿನ ಸಿದ್ದರಾಮಯ್ಯ ಅಲ್ಲ ನೀವು. ಅವರ ನಡಿಗೆಯಲ್ಲಾ ಚೆನ್ನಾಗಿ ಇದೆ. ಆ ಮಾತು ಆಡಬೇಡಿ ಎಂದು ಹೇಳಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಪರಭಾಷೆಯವರ ದಾಂಧಲೆ ಹೆಚ್ಚಾಗಿದೆ. ಅದರ ಬಗ್ಗೆ ಎಚ್ಚರಿಕೆ ಇರಲಿ. ಅದರ ಬಗ್ಗೆ ಎಚ್ಚರಿಕೆಯಿಂದ ಇರದಿದ್ದರೆ, ಕನ್ನಡಿಗರು ದಂಗೆ ಎಳ್ತಾರೆ. ಕನ್ನಡ ಜನರು ಉದ್ಯೋಗ ಪಡೆಯಬೇಕು. ಕನ್ನಡ ಶಾಲೆ ಉಳಿಸಬೇಕು ಎಂದು ಒತ್ತಾಯ ಮಾಡಿದರು.