ಖ್ಯಾತ ಜಾನಪದ ಸಾಹಿತಿ ಪ್ರೋ. ವಸಂತರಾವ್ ಸೌದಿ ನಿಧನ| ಗದಗ ನಗರದ ತಮ್ಮ ನಿವಾಸದಲ್ಲಿ ಕೊನೆಯಿಸಿರೆಳೆದ ವಸಂತರಾವ್ ಸೌದಿ| ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸೆನಟ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ವಸಂತರಾವ್ ಸೌದಿ|
ಗಂಗಾವತಿ(ಸೆ.11): ಖ್ಯಾತ ಸಾಹಿತಿ ದಿ. ದ.ರಾ.ಬೇಂದ್ರೆ ಅವರ ಶಿಷ್ಯ ಹಾಗೂ ಖ್ಯಾತ ಜಾನಪದ ಸಾಹಿತಿಯಾಗಿದ್ದ ಪ್ರೋ. ವಸಂತರಾವ್ ಸೌದಿ(70) ಹೃದಯಾಘಾತದಿಂದ ನಿನ್ನೆ(ಗುರುವಾರ) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಗದಗ ನಗರದ ತಮ್ಮ ನಿವಾಸದಲ್ಲಿ ವಸಂತರಾವ್ ಸೌದಿ ಅವರು ಇಹಲೋಕ ತ್ಯಜಿಸಿದ್ದಾರೆ.
70 ವರ್ಷದ ಪ್ರೋ. ವಸಂತರಾವ್ ಸೌದಿ ಪತ್ನಿ, ಓರ್ವ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಬಿಟ್ಟು ಅಗಲಿದ್ದಾರೆ. ಸಾಹಿತಿ ದ.ರಾ.ಬೇಂದ್ರೆ ಯವರ ಶಿಷ್ಯರಾಗಿದ್ದ ವಸಂತರಾವ್ ಸೌದಿ ಈ ಹಿಂದೆ ಸರಕಾರ ಇವರನ್ನು ಸಂಗೀತ, ನೃತ್ಯ ಅಕಾಡೆಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಸ್ತುತ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸೆನಟ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಗಂಗಾವತಿ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಸಂಗೀತ, ನೃತ್ಯ ಅಕಾಡೆಮಿ ಮತ್ತು ಮಹಾಲಕ್ಷ್ಮೀ ಕಲಾ ಸಂಘ ದಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಹಿರಿಯ, ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು.
ಗಂಗಾವತಿ: 6 ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಆಂಜನೇಯ ಸ್ವಾಮಿ
ಕಳೆದ ಜನವರಿ ತಿಂಗಳಲ್ಲಿ ಕರುಣಾ ರೂರಲ್ ಡೆವಲಪ್ ಮೆಂಟ್ ಸೊಸೈಟಿ, ಮಹಾಲಕ್ಷ್ಮೀ ಕಲಾ ಸಂಘ ಮತ್ತು ಲಯನ್ಸ್ ಕ್ಲಬ್ ಇವರ ಆಶ್ರಯದಲ್ಲಿ ಜರುಗಿದ ದ .ರಾ.ಬೇಂದ್ರೆಯವರ 124ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ್ದರು. ಅಲ್ಲದೇ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾಲಕ್ಷ್ಮೀ ಕಲಾ ಸಂಘ ಏರ್ಪಡಿಸಿದ್ದ ನಾಟಕೋತ್ಸವದಲ್ಲಿ ಸೌದಿ ಅವರಿಗೆ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಸಂತಾಪ:
ವಸಂತರಾವ್ ಸೌದಿ ನಿಧನಕ್ಕೆ ಮೀಡಿಯಾ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನವಲಿ, ಕಾರ್ಯದರ್ಶಿ ಕೆ.ನಿಂಗಜ್ಜ, ಉಪಾಧ್ಯಕ್ಷರಾದ ಎಸ್.ಎಂ.ಪಟೇಲ್, ಸಿ.ಮಹಾಲಕ್ಷ್ಮೀ ಕೇಸರಹಟ್ಟಿ, ಜಾಕೀರ್, ತಿರುಪಾಲಯ್ಯ ಕಲಾವಿದರಾದ ರಿಜ್ವಾನ್ ಮುದ್ದಾಬಳ್ಳಿ ಸೇರಿದಂತೆ ಸಾಹಿತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.