ನಾನು ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆಂದ ಮುಖಂಡ

By Kannadaprabha NewsFirst Published Feb 16, 2021, 12:21 PM IST
Highlights

ನನ್ನ ಕಾರ್ಯಕರ್ತರ ಒತ್ತಾಯದಂತೆಯೇ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೆ ತೀರ್ಮಾನಿಸಿದ್ದು, ಈಗಾಗಲೇ ಮುಖಂಡರೊಂದಿಗೆ ಚರ್ಚೆ ಆರಂಭಿಸಿದ್ದೇನೆ ಮುಖಂಡರೋರ್ವರು ಹೇಳಿದ್ದಾರೆ. 

ಕೋಲಾರ(ಫೆ.16):  ಕೋಲಾರ ವಿಧಾನಸಭಾ ಕ್ಷೇತ್ರದ 18 ಗ್ರಾಪಂಗಳ ಪೈಕಿ 12 ನಮ್ಮ ತೆಕ್ಕೆಗೆ ಬಂದಿವೆ. ಐದರಲ್ಲಿ ಜೆಡಿಎಸ್‌ ಬಂದಿದ್ದು ಕೇವಲ ಒಂದರಲ್ಲಿ ಮಾತ್ರ ಕಾಂಗ್ರೆಸ್‌ ಬಂದಿದೆ. ವಾಸ್ತವವಾಗಿ ಅರಾಭಿಕೊತ್ತನೂರು, ಕ್ಯಾಲನೂರಿನಲ್ಲಿ ಜೆಡಿಎಸ್‌ಗೆ ಅ​ಧಿಕಾರಕ್ಕೆ ಬಂದಿದೆ ಉಳಿದ ಮೂರರಲ್ಲಿ ನಮ್ಮವರಿಗೆ ಹಣದ ಆಮಿಷ ನೀಡಿ ಅವರು ಅ​ಧಿಕಾರ ಧಕ್ಕಿಸಿಕೊಂಡಿದ್ದಾರೆ ಎಂದು ವರ್ತೂರು ಪ್ರಕಾಶ್‌ ಕಿಡಿಕಾರಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌ನವರು ನೈತಿಕತೆಯಿಲ್ಲದೆ ಹಣದ ಪ್ರಯೋಗಗಳನ್ನು ಮಾಡಿ ವಿಫಲವಾಗಿದ್ದು, ನಮ್ಮ ಸದಸ್ಯರು ಬಂಡೆಯ ರೀತಿ ಉಳಿದುಕೊಂಡರೆ ಹೊರತು 5-10 ಲಕ್ಷಕ್ಕೆ ಮಾರಾಟವಾಗಲಿಲ್ಲ ಎಂದರು.

ಬೆಂಬಲಿಗರ ಒತ್ತಾಯದಿಂದ ಕಾಂಗ್ರೆಸ್‌ಗೆ:  ನನ್ನ ಕಾರ್ಯಕರ್ತರ ಒತ್ತಾಯದಂತೆಯೇ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೆ ತೀರ್ಮಾನಿಸಿದ್ದು, ಈಗಾಗಲೇ ಮುಖಂಡರೊಂದಿಗೆ ಚರ್ಚೆ ಆರಂಭಿಸಿದ್ದೇನೆ. ಶೀಘ್ರದಲ್ಲೇ ತೀರ್ಮಾನವಾಗಲಿದೆ, ಒಂದು ವೇಳೆ ಸೇರ್ಪಡೆ ಆಗದಿದ್ದರೆ ಹೊಲಿಗೆ ಯಂತ್ರದ ಗುರುತಿನಲ್ಲೇ ಮುಂದುವರೆಯುತ್ತೇನೆ. ವಿಧಾನಸಭೆ ಚುನಾವಣೆಗೆ 26 ತಿಂಗಳು ಇದೆ. ಹೀಗಾಗಿ ನಾನು ಸಾಫ್ಟ್‌, ನೋರಿಯಾಕ್ಷನ್‌. ಯಾರ ಬಗ್ಗೆ ಏನನ್ನೂ ಮಾತನಾಡುವವುದಿಲ್ಲ. ಏನೇ ಆದರೂ ಎಂಲ್‌ಎ ಆಗಬೇಕೆನ್ನುವುದಷ್ಟೇ ನನ್ನ ಗುರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್‌ ಪಕ್ಷದಲ್ಲಿ ಗೆಲ್ಲಲ್ಲು ಸಾಧ್ಯವಾಗದೆ ಇರುವುದು ನಿಜ. ನನಗೂ 54 ವರ್ಷ ವಯಸ್ಸಾಗಿದೆ, ಒಂದಷ್ಟುವರ್ಷ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಲ್ಲಿರಬೇಕೆನ್ನುವುದು ನನ್ನ ಆಸೆಯ ಜತೆಗೆ ಕಾರ್ಯಕರ್ತರ ಒತ್ತಾಯವೂ ಆಗಿದೆ. ಬಿಜೆಪಿ ಕಂಡರೆ ನನಗೆ ಮೊದಲಿಂದಲೂ ಆಗುವುದಿಲ್ಲ. ಜೆಡಿಎಸ್‌ ಸಹವಾಸವೂ ಬೇಡ ಅಂದರು.

ಸತ್ತಂತೆ ನಟಿಸಿ ತಪ್ಪಿಸಿಕೊಂಡೆ: ವರ್ತೂರು ಕಾರು ಚಾಲಕ ಬಿಚ್ಚಿಟ್ಟ ಕಹಾನಿ .

ಸಿದ್ಧರಾಮಯ್ಯ ನನ್ನ ಗುರು:  ಸಿದ್ದರಾಮಯ್ಯ ನನ್ನ ಗುರು. ಅವರ ಹಾದಿಯಲ್ಲೇ ಸಾಗುತ್ತೇನೆ. ಅಹಿಂದ ಸಮಾವೇಶಕ್ಕೂ ನನ್ನ ಬೆಂಬಲವಿದ್ದು, ಒಪ್ಪಿದರೆ ಕೋಲಾರದಲ್ಲೇ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಸಮಾವೇಶ ಆರಂಭಿಸಲು ಸಿದ್ಧ. ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ಕೋಲಾರದಲ್ಲಿ ಹಳ್ಳಿಗಳು ಗೊತ್ತು, ಆದರೆ ಹಳ್ಳಿಗಳಲ್ಲಿನ ಮುಖಂಡರು ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ 7 ಮಂದಿ ಮಾತ್ರ ಗೆದ್ದಿದ್ದಾರೆ. ಇದು ಮುನಿಯಪ್ಪ ಅವರಿಗೆ ಗೊತ್ತಿಲ್ಲ. ಆದರೆ ಕೆ.ಎಚ್‌.ಮುನಿಯಪ್ಪ ಅವರಿಗೆ ಇದು ಗೊತ್ತಿಲ್ಲ. ನಾನೇ ಖುದ್ದಾಗಿ ಭೇಟಿಯಾಗಿ ನಮ್ಮದು 203 ಸ್ಥಾನ ಗೆದ್ದಿರುವುದು ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚಿಸುವುದಾಗಿ ತಿಳಿಸಿದರು.

ನಿದ್ರೆಯಲ್ಲಿ ಶ್ರೀನಿವಾಸಗೌಡ:

ಇನ್ನು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರು 3 ವರ್ಷಗಳಿಂದಲೂ ನಿದ್ದೆಯಲ್ಲಿರುವುದರಿಂದಾಗಿ ಅಭಿವೃದ್ಧಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಕೋಲಾರವು ನಾಶವಾಗಿದೆ. ನಾನು ಶಾಸಕನಾಗಿದ್ದಾಗ ಬಿಡುಗಡೆ ಮಾಡಿಸಿದ್ದ ಅನುದಾನಗಳಿಂದ ಕೋಲಾರದಲ್ಲಿ ರಸ್ತೆ ಅಭಿವೃದ್ಧಿ, ಯುಜಿಡಿ ಕಾಮಗಾರಿಗಳು ನಡೆಯುತ್ತಿದ್ದು, 10 ಲಕ್ಷ ರು. ಅನುದಾನವನ್ನೇನಾದರೂ ತಂದಿದ್ದರೆ ಶಾಸಕರು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಜನ ಬೇಸತ್ತಿದ್ದಾರೆ:  ಶಾಸಕರ ನಡೆಯಿಂದಾಗಿ ಬೇಸತ್ತಿರುವ ಸಾಕಷ್ಟುಮಂದಿ ಜೆಡಿಎಸ್‌ ತೊರೆದು ನಮ್ಮೊಂದಿಗೆ ಸೇರ್ಪಡೆಯಾಗಲು ತೀರ್ಮಾನ ಮಾಡಿದ್ದಾರೆ. ನಮ್ಮ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕ್ಷೇತ್ರದಲ್ಲಿ ವರ್ತೂರು ಹವಾ ಇನ್ನಷ್ಟುಚುರುಕಾಗಿದ್ದು, ಸೇರ್ಪಡೆ ಪರ್ವ ಆರಂಭವಾಗಿದೆ. ನಮ್ಮ ಮುಖಂಡರ ಕಮಿಟಿ ರಚಿಸುತ್ತೇನೆ, ಅವರು ಪಾಸ್‌ ಮಾಡಿದರೆ ಯಾರನ್ನು ಬೇಕಾದರೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಗ್ರಾಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಫೆ. 21ರ ಭಾನುವಾರ ತಮ್ಮ ನಿವಾಸದಲ್ಲಿ ಅಭಿನಂದನಾ ಸಮಾರಂಭವನ್ನೂ ಆಯೋಜಿಸಿರುವುದಾಗಿಯೂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ಪ್ರಸಾದ್‌, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಮುಖಂಡರಾದ ಬೆಗ್ಲಿ ಪ್ರಕಾಶ್‌, ಬಂಕ್‌ ಮಂಜು ಉಪಸ್ಥಿತರಿದ್ದರು.

click me!