
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನು ಉಂಟು ಮಾಡಿರುವ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪ್ರಕರಣದಲ್ಲಿ ಈಗಾಗಲೇ ಕೋರ್ಟ್ ಸಚಿವರಿಗೆ ಜಾಮೀನು ಮಂಜೂರು ಮಾಡಿದ್ದು, ಸದ್ಯ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತು ರದ್ದು ಮಾಡಿದೆ.
ಬಿ ನಾಗೇಂದ್ರ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ರಾಜ್ಯ ಬಿಟ್ಟು ತೆರಳುವಂತೆ ಇಲ್ಲ ಎಂದು ಷರತ್ತು ವಿಧಿಸಿತ್ತು. ಇದರ ಬೆನ್ನಲ್ಲೇ ಸಚಿವ ಸ್ಥಾನ ಸಿಗುತ್ತಿದ್ದಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಿ ಅನುಮತಿ ಪಡೆದುಕೊಂಡು ದೆಹಲಿ ಪ್ರವಾಸ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಸಚಿವನಾಗಿರುವ ಹಿನ್ನೆಲೆ ರಾಜ್ಯದ ಹೊರಗೂ ಪ್ರಯಾಣಿಸಬೇಕಾಗಬಹುದು ಎಂದು ಸಚಿವರ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರಂತೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಕೋರ್ಟ್ ಅನುಮತಿಯಿಲ್ಲದೇ ರಾಜ್ಯ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತು ರದ್ದು ಮಾಡಿ, ಆದರೆ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಆದೇಶ ನೀಡಿದೆ. ಇನ್ನು, ಇಡಿ ಪರ ಎಎಸ್ ಜಿ ಅರವಿಂದ್ ಕಾಮತ್ ಆಕ್ಷೇಪಣೆ ಸಲ್ಲಿಸಿದ್ದರು.
ಬಿ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನದಲ್ಲಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಇಂದು ಕೂಡ ಮುಂದುವರೆದಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಇವತ್ತಿನ ಅಧಿವೇಶನದಲ್ಲಿ ಕೂಡ ನಾವು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮಾಡ್ತೀವಿ. 187 ಕೋಟಿ ಹಣ ಬಡವರಿಗೆ ಸೇರಬೇಕಾಗಿರುವುದು. ನಾಗೇಂದ್ರ ದಲಿತರ ಹಣ ತಿಂದು ದಲಿತ ಅನ್ನುವ ಶೆಲ್ಟರ್ ತೆಗೆದುಕೊಳ್ಳಲು ಹೋಗ್ತಿದ್ದಾರೆ. ಕಾಂಗ್ರೆಸ್ ಗೆ ಇವರೊಬ್ಬರು ಬೇಕಾ? ಅಥವಾ ರಾಜ್ಯದ ಎಲ್ಲಾ ದಲಿತರು ಬೇಕಾ?
ನಾಗೇಂದ್ರ ರಾಜೀನಾಮೆ ಕೊಡೋವರೆಗು ನಾವು ಬಿಡಲ್ಲ. ಮತ್ತೆ ಸಿಬಿಐ ನಲ್ಲಿ ನಾಗೇಂದ್ರ ಹೆಸರು ಇಲ್ಲ ಅಂತಾರೆ ನನ್ನ ಬಳಿ ದಾಖಲೆ ಇದೆ. ನಾಗೇಂದ್ರ ಹೆಸರು ಸಿಬಿಐ ಚಾರ್ಜ್ ಶೀಟ್ ನಲ್ಲಿ ಇದೆ, ಮಿಸ್ಟರ್ ಪರಮೇಶ್ವರ್ ನೀವು ಮಾತನಾಡಬೇಕು ಇದರ ಬಗ್ಗೆ ಒಬ್ಬನಿಗಾಗಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದೀರಿ, ದಲಿತ ಸಮುದಾಯವನ್ನ ಉಳಿಸಿ ನಾಗೇಂದ್ರ ರಾಜೀನಾಮೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 89.63 ಕೋಟಿ ರೂಪಾಯಿ ಹಣವು ಅಕ್ರಮವಾಗಿ ಬೇರೆ ಬೇರೆ ಖಾಸಗಿ ಖಾತೆಗಳಿಗೆ ಜಮೆಯಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಅವರ ಬಳಿ ದೊರೆತಿದ್ದ ಡೆತ್‌ನೋಟ್‌ನಲ್ಲಿ ಸಚಿವರು ಮತ್ತು ಉನ್ನತಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಈ ಅಕ್ರಮ ವರ್ಗಾವಣೆ ನಡೆದಿದೆ ಎಂದು ಉಲ್ಲೇಖಿಸಿದ್ದರು. ಇರೊಂದಿಗೆ ಪ್ರಕರಣ ಸಂಚಲನಾತ್ಮಕ ತಿರುವು ಪಡೆದುಕೊಂಡಿತ್ತು. ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿದರೆ, ನಾಗೇಂದ್ರ ಅಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ಕೂಡ ಪ್ರಕರಣಕ್ಕೆ ಎಂಟ್ರಿ ಕೊಟ್ಟು, ನಾಗೇಂದ್ರ ಅವರನ್ನು ಬಂಧಿಸಿ ತನಿಖೆ ನಡೆಸಿದ್ದರು. ತನಿಖೆ ಮುಕ್ತಾಯವಾದ ಬಳಿಕ ನಾಗೇಂದ್ರ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.