ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಡೆತ್ ನೋಟ್‌ನಲ್ಲಿ ಬರೆದಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎ1 ಆರೋಪಿ ಜೆ.ಜಿ.ಪದ್ಮನಾಭ ಹಾಗೂ ನಿಗಮದ ಲೆಕ್ಕಾಧಿಕಾರಿಯಾಗಿರುವ ಎ2 ಆರೋಪಿ, ಪರಶುರಾಮ್ ತಪ್ಪಿತಸ್ಥರೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಚಂದ್ರಶೇಖರ್ ಕೂಡ ನಿಗಮದ ಹಗರಣದಲ್ಲಿ ಪಾಲು ಪಡೆದಿದ್ದಾರೆ ಎಂದು ತಿಳಿಸಿದ ಸಿಐಡಿ ಅಧಿಕಾರಿಗಳು
ಶಿವಮೊಗ್ಗ(ಆ.23): ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫೀಕ್ ಚಾರ್ಜ್ ಶೀಟ್ ಸಲ್ಲಿಸಿದರು. 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ ಅಧಿಕಾರಿಗಳು, ಚಂದ್ರಶೇಖರ ಅವರ ಹೆಂಡತಿ ಮತ್ತು ನಿಗಮದ ಅಧಿಕಾರಿಗಳನ್ನು ಸಾಕ್ಷ್ಯ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಡೆತ್ ನೋಟ್‌ನಲ್ಲಿ ಬರೆದಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎ1 ಆರೋಪಿ ಜೆ.ಜಿ.ಪದ್ಮನಾಭ ಹಾಗೂ ನಿಗಮದ ಲೆಕ್ಕಾಧಿಕಾರಿಯಾಗಿರುವ ಎ2 ಆರೋಪಿ, ಪರಶುರಾಮ್ ತಪ್ಪಿತಸ್ಥರೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಚಂದ್ರಶೇಖರ್ ಕೂಡ ನಿಗಮದ ಹಗರಣದಲ್ಲಿ ಪಾಲು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
undefined
ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ: FIRನಲ್ಲಿ ಸಚಿವರ ಹೆಸರಿಲ್ಲ: ಸಿ.ಟಿ.ರವಿ
ಚಂದ್ರಶೇಖರ್ ಆತ್ಮಹತ್ಯೆಗೆ ನಿಗಮದ ಎಂ.ಡಿ.ಪದ್ಮನಾಭ ಮತ್ತು ಪರಶುರಾಮ್ ಕಾರಣ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಕೂಡ ನಿಗಮದ ಹಗರಣದಲ್ಲಿ ಒಂದಿಷ್ಟು ಹಣವನ್ನು ಪಡೆದಿದ್ದರು. ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದ್ರಾಬಾದ್ ಗೆ ಕರೆದುಕೊಂಡು ಹೋದ ಪದ್ಮನಾಭ ಮತ್ತು ಪರಶುರಾಮ್, ಒತ್ತಡ ಹಾಕಿದ್ದರು. ‘ನೀನು ಹಣ ಪಡೆದಿದ್ದೀಯ.. ಪ್ರಕರಣ ಬೆಳಕಿಗೆ ಬಂದ್ರೆ ನೀನೊಬ್ಬನೇ ಜೈಲಿಗೆ ಹೋಗ್ತಿಯ’ ಎಂದು ಬೆದರಿಕೆ ಹಾಕಿದ್ದರು. ‘ನಿನ್ನ ವಿರುದ್ಧ ನಾವೇ ದೂರು ಕೊಡ್ತೀವಿ’ ಎಂದು ಭಯ ಬೀಳಿಸಿದ್ದರು. ಹೀಗಾಗಿ ಪ್ರಕರಣ ಬೆಳಕಿಗೆ ಬಂದು ಸಿಕ್ಕಿಬೀಳುವ ಭಯಕ್ಕೆ ಒಳಗಾದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಕೆ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ಮಾಡಬೇಕಾಗಿದ್ದು, ಇನ್ನಷ್ಟು ಮಾಹಿತಿ ಕ್ರೋಢೀಕರಣಕ್ಕೆ ಕಾಲಾವಕಾಶ ಕೋರಿದ್ದಾರೆ.
ಇಲ್ಲಿನ ವಿನೋಬನಗರದ ತಮ್ಮ ಮನೆಯಲ್ಲಿ 2024ರ ಮೇ 26 ರಂದು ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪ್ರಾಥಮಿಕ ಹಂತದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು 60 ದಿನಗಳು ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಈ ಚಾರ್ಜ್‌ಶೀಟ್ ನ್ನು ಗುರುವಾರ ಸಲ್ಲಿಸಲಾಯಿತು.
ಹೈಕೋರ್ಟ್ ಮೊರೆ ಹೋಗ್ತೀವಿ: ಚಂದ್ರಶೇಖರನ್ ಪತ್ನಿ ಕವಿತಾ
ಶಿವಮೊಗ್ಗ: ಒಂದು ಕಡೆ ನಮ್ಮ ಮನೆಯವರನ್ನು ಕಳೆದುಕೊಂಡು ನೋವಲ್ಲಿ ಇದ್ದೇವೆ. ಇನ್ನೊಂದು ಕಡೆ ನನ್ನ ಗಂಡನ ಮೇಲೆ ಆರೋಪ ಹಾಕುತ್ತಿದ್ದಾರೆ. ನಾವು ದುಡ್ಡು ತಿನ್ನುವ ಜನ ಅಲ್ಲ. ಎಸ್‌ಐಟಿ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ಇದನ್ನು ಒಪ್ಪಿಸಬೇಕು. ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಆತ್ಮಹತ್ಯೆಗೆ ಶರಣಾಗಿದ್ದ ಚಂದ್ರಶೇಖರನ್ ಪತ್ನಿ ಕವಿತಾ ಹೇಳಿದರು.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 80-85 ಕೋಟಿ ಲೂಟಿ ಆರೋಪ: ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ!
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನೆಯವರು ಗೋವಾಕ್ಕೆ ಹೋಗಿಲ್ಲ. ಅವರು ದುಡ್ಡು ತಿಂದಿಲ್ಲ, ಇದೆಲ್ಲಾ ಸುಳ್ಳು ಎಂದರು. ಚಾರ್ಜ್‌ಶೀಟ್‌ನಲ್ಲಿ ಸಚಿವರ ಹೆಸರನ್ನು ಕೈ ಬಿಟ್ಟಿದ್ದಾರೆ. ಅಧಿಕಾರಿಗಳ ಮೇಲೆ ಆರೋಪ ಹೊರಿಸಿದ್ದಾರೆ. ಅವರು ತಪ್ಪಿಸಿಕೊಳ್ಳಲು ನನ್ನ ಗಂಡನ ಮೇಲೆ ತಪ್ಪು ಹೊರಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು. ನನ್ನ ಪತಿ ಯಾವುದೇ ಹಣ ಪಡೆದಿಲ್ಲ. ಎರಡು ತಿಂಗಳಿಂದ ಉಪವಾಸ ಇದ್ದೇವೆ. ನಾವು ದುಡ್ಡಿಲ್ಲದೆ ತಾಯಿ ಮನೆಗೆ ಬಂದಿದ್ದೇವೆ
ಆರಂಭದಲ್ಲಿ ಎಲ್ಲರೂ ನಮ್ಮ ಮನೆಗೆ ಬಂದು ಪರಿಹಾರ ಕೊಡಿಸುತ್ತೇವೆ ಎಂದು ಹೇಳಿ ಹೋದರು. ಈಗ ಎರಡು ತಿಂಗಳಿಂದ ಯಾರೂ ನಮ್ಮ ಮನೆಗೆ ಬಂದಿಲ್ಲ. ಸರ್ಕಾರದಿಂದ ಯಾವುದೇ ಪರಿಹಾರ ನಮಗೆ ಸಿಕ್ಕಿಲ್ಲ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ. ತನಿಖೆಯಿಂದ ನಮ್ಮ ಮನೆಯವರು ಯಾವುದೇ ಆಪಾದನೆ ಇಲ್ಲದೇ ಹೊರ ಬರಬೇಕು ಎಂದರು.