Atal Bihari Vajpayee Jayanti: ಮೌಲ್ಯಾಧರಿತ ರಾಜಕಾರಣಕ್ಕೆ ಒತ್ತು ನೀಡಿದ್ದ ವಾಜಪೇಯಿ: ಪ್ರಲ್ಹಾದ್ ಜೋಶಿ

By Kannadaprabha NewsFirst Published Dec 26, 2022, 7:11 AM IST
Highlights

ಭಾರತ ಕಂಡ ಅಪರೂಪದ ರಾಜಕಾರಣಿಯಾಗಿದ್ದ ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೌಲ್ಯಾಧಾರಿತ ರಾಜಕಾರಣಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

 ಹುಬ್ಬಳ್ಳಿ (ಡಿ.26) : ಭಾರತ ಕಂಡ ಅಪರೂಪದ ರಾಜಕಾರಣಿಯಾಗಿದ್ದ ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೌಲ್ಯಾಧಾರಿತ ರಾಜಕಾರಣಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಬಿಡ್ನಾಳದ ಆರ್‌.ಕೆ. ಪಾಟೀಲ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಮನ್‌ ಕಿ ಬಾತ್‌ ವೀಕ್ಷಿಸಿ, ಬಿಜೆಪಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ, ಬಾಲಾಜಿ ನರರೋಗ ಆಸ್ಪತ್ರೆ ಮತ್ತು ಚಿಕಿತ್ಸೆ ಕೇಂದ್ರ ಇವುಗಳ ಸಹಯೋಗದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ನಿಮಿತ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಾಜಪೇಯಿ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟುಜನಪರ ಕಾರ್ಯ ಮಾಡಿದ್ದಾರೆ. ವಿಪಕ್ಷ ನಾಯಕರು, ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದು, ಸರ್ವಶಿಕ್ಷಣ ಅಭಿಯಾನ ವಾಜಪೇಯಿ ಅವರ ಕಾಲದಲ್ಲಿ ಆಗಿದೆ. ಕವಿಯಾಗಿದ್ದವರು ರಾಜಕಾರಣಿಯಾಗುವುದಿಲ್ಲ. ಆದರೆ ವಾಜಪೇಯಿ ಪ್ರಸಿದ್ಧ ರಾಜಕಾರಣಿಯಾಗಿದ್ದಾರೆ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಟಲ್ ಮಿಷನ್ ನೀರು ಸರಬರಾಜು ಯೋಜನೆಗೆ ಅನುಮೋದನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಇಂಗ್ಲಿಷ್‌ ಸಂಸ್ಕೃತಿ ಹೆಚ್ಚಾಗುತ್ತಿದೆ. ಅಪ್ಪ-ಅವ್ವರನ್ನು ಮಮ್ಮಿ, ಡ್ಯಾಡಿ ಎನ್ನಲಾಗುತ್ತಿದೆ. ಇದು ಸರಿಯಲ್ಲ. ಇಂಗ್ಲಿಷ್‌ ಭಾಷೆಗೆ 500 ವರ್ಷಗಳ ಇತಿಹಾಸ ಇದ್ದರೆ, ಕನ್ನಡಕ್ಕೆ 2000 ಸಾವಿರ ವರ್ಷಗಳ ಇತಿಹಾಸ ಇದೆ. ಹಾಗಾಗಿ ನಮ್ಮ ಭಾಷೆಯನ್ನು ಹೆಚ್ಚೆಚ್ಚು ಬಳಸಿ, ಉಳಿಸಿ, ಬೆಳೆಸಬೇಕಾಗಿದೆ ಎಂದರು.

ಕೋವಿಡ್‌ನಿಂದಾಗಿ ವಿಶ್ವದ ಅನೇಕ ದೇಶಗಳು ಇಂದಿಗೂ ತತ್ತರಿಸುತ್ತಿವೆ. ದೇಶದ ಬಲಿಷ್ಠ ನಾಯಕತ್ವದಿಂದಾಗಿ ಕೋವಿಡ್‌ ಆತಂಕ ದೂರವಾಗಿದೆ. ಅನ್ಯ ದೇಶಗಳಿಗೆ ಹೋಲಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ತಿಂಗಳಿಗೆ ಉಚಿತವಾಗಿ ಆಹಾರಧಾನ್ಯ ವಿತರಿಸಲು ತೀರ್ಮಾನಿಸಿದೆ. ಆಯುಷ್ಮಾನ ಭಾರತದಡಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾನಗರದಲ್ಲಿ ಸ್ಮಾರ್ಚ್‌ಸಿಟಿ ಯೋಜನೆಯಿಂದ ಸಾಕಷ್ಟುಕೆಲಸ ಮಾಡಲಾಗಿದೆ. ನಾವು ಮಾಡಿದ್ದನ್ನು ಜನರಿಗೆ ಹೇಳಬೇಕಾಗಿದೆ ಎಂದರು.

ಶಿಬಿರದ ನೇತೃತ್ವ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್ಮನ್‌ ಡಾ. ಕ್ರಾಂತಿಕಿರಣ ಮಾತನಾಡಿ, ಅಟಲ್‌ ಬಿಹಾರಿ ವಾಜಪೇಯಿ 98ನೇ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಇದೇ ವೇಳೆ ಆಯುಷ್ಮಾನ್‌ ಭಾರತ ಕಾರ್ಡ್‌ ನೋಂದಣಿ ಮಾಡಲಾಗುತ್ತಿದೆ. ಕೋವಿಡ್‌ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಲಸಿಕೆ ಕೂಡ ಹಾಕಲಾಗುತ್ತಿದೆ. ಸಾರ್ವಜನಿಕರು ಸಮಾಜದಲ್ಲಿ ಭಯಪಡದೆ ತಿರುಗಾಡುವ ವಾತಾವರಣವನ್ನು ಸರ್ಕಾರ ಲಸಿಕೆ ಮೂಲಕ ನಿರ್ಮಾಣ ಮಾಡಿದೆ ಎಂದರು.

ಬಿ.ಪಿ. ಶುಗರ್‌ ಪರೀಕ್ಷೆ ಜತೆಗೆ ನರರೋಗ, ಹೃದ್ರೋಗ, ಎಲುಬು-ಕೀಲು ತಪಾಸಣೆ, ಸ್ತ್ರೀ ರೋಗ, ಚರ್ಮರೋಗ, ದಂತ ಹಾಗೂ ನೇತ್ರಕ್ಕೆ ಸಂಬಂಧಿಸಿದ ತಜ್ಞರು ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು. ಸುಮಾರು 2000 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ನೋಂದಣಿ ಹಾಗೂ ಕೋವಿಡ್‌ ವ್ಯಾಕ್ಸಿನೇಷನ್‌ (ಬೂಸ್ಟರ್‌ ಡೋಸ್‌) ಹಾಕಲಾಯಿತು. ಸಾನ್ನಿಧ್ಯ ವಹಿಸಿದ್ದ ಎರಡೆತ್ತಿನ ಮಠದ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಅಧ್ಯಕ್ಷತೆ ವಹಿಸಿದ್ದರು.

Atal Bihari Vajpayee: ಭಾರತದ ಮಹಾನಾಯಕ ನೀಡಿದ 10 ಮಹತ್ವದ ಸಂದೇಶಗಳು!

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಜಯತೀರ್ಥ ಕಟ್ಟಿ, ಸಂತೋಷ ಅರಕೇರಿ, ವಿನಯ ಸಜ್ಜನರ, ರಾಜೇಶ ಅಡವಿ, ಹನುಮಂತ ದೊಡ್ಡಮನಿ, ನಿಂಗಪ್ಪ ಬಡಿಗೇರ, ರಾಜಶೇಖರಗೌಡ ಪಾಟೀಲ, ಬಸು ಹಿರೇಮಠ, ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಕೃಷ್ಣಮೂರ್ತಿ, ಡಾ. ಹರಿಕೃಷ್ಣ, ಡಾ. ಹನುಮಂತ ಬಿ.ವಿ., ಡಾ. ಸ್ಪಂದನಾ, ಡಾ. ಆಕಾಶ, ಡಾ. ಸುಹಾಸ್‌, ಸೇರಿ 25ಕ್ಕೂ ಹೆಚ್ಚು ತಜ್ಞ ವೈದ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವರು ಹಾಗೂ ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ ಅವರು ಸ್ಥಳೀಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಕಾರ್ಯಕ್ರಮ ವೀಕ್ಷಿಸಿದರು.

click me!